Sunday, May 13, 2012


ನನ್ನ ಅಮ್ಮನೊಂದಿಗಿನ ನನ್ನ ನೆನಪುಗಳು ಕಡಿಮೆಯೇ...
ಹಣೆಯಗಲದ ಕುಂಕುಮ ಇಡುತಿದ್ದಳು,ಕೆನ್ನೆ ತುಂಬ ಅರಿಸಿನ ಹಚ್ಚಿರುತಿದ್ದಳು,
ಶುಭ್ರ ಸುಂದರ ಕಾಟನ್ ಸೆರಗಿನಂಚಿನಲ್ಲಿ ಎಂದಿಗೂ ಬೆವೆರಿರುತಿದ್ದ ನನ್ನ ಮೂಗಿನ ತುದಿ
ವರೆಸಿ..."ಎಷ್ಟು ಬೆವರ್ತೀಯೋ..." ಅನ್ನುತಿದ್ದಳು.
ನಾನವಳೊಂದಿಗೆ....
ಸಿನೇಮಾ ನೋಡಿದ್ದಾಗಲಿ,,ಹಬ್ಬಮಾಡಿದ್ದಾಗಲಿ ನೆನಪಿಲ್ಲ
ಬಿಸಿಲಲ್ಲಿ ಆಡಿ ಮೈ ಕೊಳೆ ಮಾಡಿಬಂದ ನನಗೆ ಆಕೆ ಗದರಿಸಿದ್ದು ನೆನಪಿಲ್ಲ
ಪರೀಕ್ಷೆಗೆ ಓದೂ ಎಂದು ಅವಲತ್ತು ಕೊಂಡಿದ್ದು ನೆನಪಿಲ್ಲ
ಗೆಳೆಯರೊಡನೆ ಸಿನೇಮಾ ನೋಡಿ ಬಂದಾಗ ತಪ್ಪೂ ಸರೀ ಹೇಳಿ ರಂಪ ಮಾಡಿದ್ದು ನೆನಪಿಲ್ಲ
ಹರೆಯದಲ್ಲಿ ಗೆಳತಿಯೊಡನೆ ರಸ್ತೆಯ ಮೂಲೆ ಯಲ್ಲಿ ಮಾತಾಡುತಿದ್ದ ನನ್ನ ಕಂಡು
ಅವಳ್ಯಾರೋ? ಅಂದಿದ್ದು ನೆನಪಿಲ್ಲ.
ಕೈ ಹಿಡಿದು ಮನೆಗೆ ಕರೆತಂದಾಗ...ನಗು ನಗುತ್ತಾ ಒಳ ಕರತಂದಿದ್ದು ನೆನಪಿಲ್ಲ.
ತೀರ...ಸೋತು...ಮೈಬೆವೆತು ಜ್ವರದಲ್ಲಿದ್ದಾಗಲೂ..ಹಣೆಗೆ ಒದ್ದೆ ಬಟ್ಟೆ ಇಟ್ಟದ್ದು ನೆನಪಿಲ್ಲ
ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗಲೇ ಹೋಗಿದ್ದಳವಳು..
ಅವಳಿಲ್ಲ ಅನ್ನುವ ಕೊರತೆ ಒಂದು ಇಪ್ಪತ್ತು ವರ್ಷದ ನಂತರ ತುಂಬಿಕೊಟ್ಟಿದ್ದಾಳೆ...
ನನ್ನ ಮನೆಯಲ್ಲಿ ಮಗಳಾಗಿದ್ದಾಳೆ...
ಹಠ ಮಾಡ್ತಾಳೆ...
ಮನೆಗೆ ಬಂದ ತಕ್ಷಣ...ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ ಯಾಕೆ ಲೇಟು ಅಂತ ದಬಾಯಿಸುತ್ತಾಳೆ..
ನಾನು ಊರಿಗೆ ಹೊರಡುವೆನೆಂದರೆ....ಮೂರು ದಿನ ಕೊರಗುತ್ತಾಳೆ..
ಹಿಂದಿರುಗಿಬಂದ ದಿನ..ಅಂದೇ ಕಂಡಂತೆ ನಾಚುತ್ತಾಳೆ...
ಅಮ್ಮ ಈಗೆಲ್ಲಿದ್ದಾಳೊ ಅನ್ನುವ ಪ್ರೆಶ್ನೆ ನನಗಿನ್ನು ಏಳಲ್ಲ...
ಮನೆಯಲ್ಲೇ ಇದ್ದಾಳೆ...ಎರಡು ಜಡೆ ಹಾಕುತ್ತಾಳೆ...
ಅಮ್ಮನ ದಿನದಂದು ಅವಳಿಗೊಂದು ಶುಭಾಶಯ...

Friday, April 20, 2012

ನನ್ನೂರಿನ ಮಾವು

ನನ್ನೂರಿನ ಮಾವು - ಯಾವುದೋ ಪೂಜೆ ಎಂದು ಊರಿಗೆ ಹೋಗಿದ್ದೆ. ಊರು ಬದಲಾಗಿಲ್ಲ, ಈ ವರ್ಷದ ಮಾವು ಪುನಃ ನಾನಿದ್ದೇನೆ ಎಂದು ಚಿಗುರಿದೆ. ಬದಲಾಗಿದ್ದು ಒಂದು, ಊಟಕ್ಕೆ ಕೂತಾಗ ಕೊಡುವ ದಕ್ಷಿಣೆ. ನಾವು ಸಣ್ಣವರಿದ್ದಾಗೆ ಒಂದು ರುಪಾಯಿಯ ಸಣ್ಣ ಬಿಲ್ಲೆ ಸಿಕ್ಕುತಿತ್ತು...ಈಗ ಹತ್ತು ರುಪಾಯಿ. :). ಊರಿನ ನನ್ನ ಸಣ್ಣ ಜಾಗದಲ್ಲಿ ಒಂದೈದು ಮಾವಿನ ಮರವಿದೆ. ಅಷ್ಟ್ರರಲ್ಲೂ ಮಕ್ಕಳು ನಕ್ಕ ಹಾಗೆ ಮಾವು ಅರಳಿದೆ. ನೋಡಿ ಸಂತೋಷವಾಯಿತು. ಹಂಚಿಕೊಂಡೆ

Friday, February 17, 2012

ಅನ್ನಿಸಿದ್ದನ್ನ ಅರಿವಾಗುವಮುನ್ನವೇ ಅರಳಿಸಿ ಆಘ್ರಾಣಿಸಲು ಪ್ರಯತ್ನಿಸುವುದು.


ನಿತ್ಯ ನೂತನ ಫೇಸ್ ಬುಕ್ ಕವಿಗಳಿಗೆ ನನ್ನ ನಮಸ್ಕಾರಗಳು.[ಇದು ನನ್ನನ್ನೂ ಸೇರಿ ಸ್ವಗತವೂ ಹೌದು]
ಚಂದ್ರ,ಚಕೋರಿ,ತುಂಡು ಲಂಗದ ಕಿಶೋರಿ, ಅದೇ ಪದಗಳನ್ನ
ತಿರುವಿ ತಿರುವೀ ಬರೆದು, ಚಿಂದಿ ಚಿತ್ರಾನ್ನ ಮಾಡಿ, ಧೀರ್ಘ ಉಸಿರೆಳೆದು, ಬೆರಳು ತುದಿಯಲ್ಲಿ ಮೂಗೊರಸಿ, ಮುಂದುದುರುವ ಲೈಕು, ಕಮೆಂಟುಗಳಿಗೆ ಕೆನ್ನೆ ಮೇಲೆ ಕೈ ಹೊತ್ತು ಕಾಯುವ ಮುನ್ನ,
,ಕೆ,ರಾಮನುಜಂ ನಂತಹ ಮಹಾನುಭಾವರ ಪುಸ್ತಕಗಳನ್ನ ಒಮ್ಮೆ ಓದಿ. ನಾವು ಪಕ ಪಕನೆ  ಬರೆದದ್ದನ್ನೆಲ್ಲಾ ಪಾಯಖಾನೆಯಲ್ಲಿ ಹೋಗಿ ಕಕ್ಕುವಷ್ಟು ನಮಗೇ ಅಸಹ್ಯವಾಗಲಿಲ್ಲ ಅಂದರೆ ಕೇಳಿ.
ನಮ್ಮೆಲ್ಲರ ಮೂಲಭೂತ ಕೊರತೆ, ಅನ್ನಿಸಿದ್ದನ್ನ ಅರಿವಾಗುವಮುನ್ನವೇ ಅರಳಿಸಿ ಆಘ್ರಾಣಿಸಲು ಪ್ರಯತ್ನಿಸುವುದು. ಮನಸ್ಸಿನಲ್ಲಿ ಮೂಡುವ ಸಣ್ಣ ಸಣ್ಣ ಪಲಕು ಗಳನ್ನು ಅಲ್ಲೇ ನೆನೆಹಾಕಿ, ಕೊಳೆಹಾಕಿ ಮತ್ತೆ ಉಳಿಯುವ ಮೊತ್ತವನ್ನು ಇನ್ನೊಮ್ಮೆ ಪರಿಶೀಲಿಸಿ, ಇದರಿಂದ ಯಾವುದಾದರೂ ಭಾವದ ನಶೆ ಏರುವುದೇ ಎಂದು ಪರೀಕ್ಷಿಸಿ ಪ್ರಕಟಿಸುವುದು ಕನ್ನಡದ ಸಾಹಿತ್ಯದ ದೃಷ್ಠಿಯಿಂದ ಬಹಳ ಒಳ್ಳೆಯದು. ಜ್ಞಾನಕ್ಕೆ ಗಂಗಾ ಮಾತೇನೆ ಬೇಕೆ..ತಿಳಿದವರಿಗೆ ತಿಳಿನೀರೂ ತೀರ್ಥವೇ...ಮನಸ್ಸು ಮಾಘಿರಬೇಕು.

ರಾಮಾನುಜಂ ರವರ ಕೃತಿಗಳನ್ನ ಓದುತ್ತಾ ಇದ್ದೇನೆ. ಮಿಕ್ಕಿದ್ದು ಎಷ್ಟು ಬಾಲಿಷ ಅನ್ನಿಸುವಷ್ಟು ಬೇಜಾರಾಗಿದೆ.

ಅವರ ಕೆಲವು ಕವನಗಳನ್ನು ಹಂಚಿಕೊಳ್ಳುತಿದ್ದೇನೆ.

ಆಶ್ಚರ್ಯವೇನಿಲ್ಲ

           ಈಗ ಸಣ್ಣಗೆ ನೋಯುತ್ತಿರುವ ಮೈ
           ಒಳಗಿನ ಎಲುಬು
           ಹೀಗೆ ಒಂದು ದಿನ
           ಬಿಸಿಲಲ್ಲಿ ಬೆಳ್ಳಗೆ ಬಿಳಚಿಕೊಂಡು
           ತುಟಿಯಿಲ್ಲದೆ ಹಲ್ಲು ಕಿರಿದು
           ನಾಯಿಬಾಯಿಗೆ ಸಿಕ್ಕಿದರೆ
           ಆಶ್ಚರ್ಯವೇನಿಲ್ಲ.

Thursday, February 9, 2012

ಇರೋ ಇಷ್ಟಗಲದ ಬಿ ಜೆ ಪಿ ಬಾವುಟವ

ಇರೋ ಇಷ್ಟಗಲದ ಬಿ ಜೆ ಪಿ ಬಾವುಟವನ್ನು ಹರಿದು,ಮಾನ ಕಳಕೊಂಡಿರೋವ್ರಿಗೆ ಕೌಪೀನ ಮಾಡ್ಕೊಳಕ್ಕೆ ಕೊಡಬೇಕು.

ಹೌದೂ...ಈ ಪ್ರತಿಭಟನೆ ಮಾಡಕ್ಕೆ ಅವರರವರಿಗೆ ಅನುಕೂಲ ಆಗೋ ವಿಷ್ಯಕ್ಕೆ ಮಾತ್ರಕಾಯ್ತಾರೋ ಹೇಗೆ ನಮ್ಮ ಜನ? ಮಡೆಸ್ನಾನ ಅನ್ಯಾಯ ಅನ್ನಿಸಿದ ನಮ್ಮ ಮಾವಿನ ಮಿಡಿ ಸ್ವಾಮಿಜಿಗೆ ಈ ವಿಷ್ಯ ಕಿವಿಗೆ ಬಿದ್ದೇ ಇಲ್ಲವೇನೋ..ಅಥವ ಅವರ ಫೋನ್ ಬ್ಯುಸಿ ಇರಬೇಕು.

"ರೇವು ಪಾರ್ಟಿಯ ಮಾಡಲು ಬಿಟ್ಟು
ಕಾವು ಪಾರ್ಟಿ ಅನ್ನಿಸಿಕೊಂಡು
ಕಾಮ ಕದನವ..ಸದನದಲ್ಲಿ ಕಂಡವರ ಕಂಡು
ಕೆಂಡ ಮಂಡಲವಾದ ಕೂಡಲ ಸಂಗಮ ದೇವ[ತೆ]"

ಏನೋ ಹಾಳ್ ಬಿದ್ ಹೋಗಲಿ...ಇವರಗಳ ಮನೆ ಮುಂದು ಪ್ರತಿಭಟನೆ ಮಾಡಬೇಕು...ಯಾರ ಯಾರ ಮೊಬೈಲ್ ನಲ್ಲಿ ಇಂಥಹ ಚಿತ್ತಾಕರ್ಷಕ ಚಿತ್ರಗಳಿಲ್ಲವೋ ಅಂತಹ ಸದ್ಗುಣ ಸಂಪನ್ನರು "ಕೈ" ಎತ್ತಿ ಅಂದರೆ...
ಎಣಿಸಕ್ಕೂ ಒಂದು ಕೈ ಇಲ್ಲವಂತೆ....ಇದು ಸುದ್ದಿ..
ಹಾಂ! ಹೇಳೋದ್ ಮರೆತೆ, ಕನ್ನಡದ ಚಿತ್ರರಂಗದ ಬಗ್ಗೆ ಸದಾ ಚಿಂತಿಸಿವ ಹಳೆಯ ತಲೆಯೊಬ್ಬರಿಗೆ ಈ ಪ್ರಕರಣದ ಬಗ್ಗೆ ಅಭಿಪ್ರಾಯ ಕೇಳಿದಾಗ, ಅವರು ಹೇಳಿದ್ದು ಮಜವಾಗಿದೆ. "ಹೀಗೆ ಎಲ್ಲರೂ, ಎಲ್ಲೆಲ್ಲಿಯೂ ನೋಡುವ ಚಿತ್ರಗಳನ್ನು ನಾವು ತೆಗೆಯಬೇಕು. ಆಗ ಮಾತ್ರ ಚಿತ್ರರಂಗ ಉದ್ಧಾರ" ಅಂದಿದ್ದಾರೆ...ಅವರು ನ್ಯುಸ್ ನೋಡೇ ಇಲ್ಲ ಅಂತ ಅಮೇಲೆ ತಿಳಿದು ಬಂದಿದೆ.

Thursday, December 1, 2011

ನಮ್ಮ ಸ್ವಾರ್ಥಕ್ಕೆ ಕುರಿ ಕೋಣ ಕಡೀಲಿಲ್ಲ ಅಂದ್ರೆ ಅಷ್ಟೇ ಸಾಕಯ್ಯ ತಂದೆ.


ಸ್ನಾನಾ..ಮೈಗಲ್ಲ ಕಂದ ಮನಸ್ಸಿಗೆ...
ಕೆಲವರದು ಮಡಿ ಕೆಲವರಿಗೆ ಮಡೆ....
ಅವರವರ ಭಾವ ಅವರವರ ಭಕ್ತಿ...
ಅವರವರ ಬಕೀಟಿನ ನೀರು.... 
ಮನಸ್ಸಿನೋಳಗೆ ಮೂರ್ತಿ ಇಟ್ಟು ಎಳಿಯೋದು..
ನಂಬಿಕೆ ಅನ್ನೋ ತೇರು... 
ನೀನೊಲಿದರೆ..ಕೊರಡೂ ಕೊನರುವುದಯ್ಯ... 
ಒಲಿಸಿಕೊಳ್ಳೊ ವಿಧಾನ ನೂರೆಂಟು ಕಣಯ್ಯ... 
ನಮ್ಮ ಸ್ವಾರ್ಥಕ್ಕೆ ಕುರಿ ಕೋಣ ಕಡೀಲಿಲ್ಲ ಅಂದ್ರೆ ಅಷ್ಟೇ ಸಾಕಯ್ಯ ತಂದೆ.
ತಪ್ಪೂ ಮಾಡದವರು ಯಾರವರೆ?...
ನೀನು ಮಾಡ್ತಿರೋದು ತಪ್ಪು ಅಂತ ಉಗಿಯಕ್ಕೆ ಹುಟ್ಟಿರೋರು..
ಮತ್ತೂ ಹೆಚ್ಚವರೆ....
ಎದ್ದು ಬಂದು ಎದೆಗೆ ಒದಿಯೋ ಮಂದಿ ಉರುಳಾಡ್ತಾ ಅವರೆ...
ಕಜ್ಜೀಗೆ ಮುಲಾಮು ಹಚ್ಚಿ..
ಉಂಡ ಎಲೆ ಎತ್ತಕ್ಕೆ ಬಿಡೀ..
ಅನ್ನೊ ಮಂದಿ.
.ಹನ್ನೊಂದನೇ ದಿನ್ನಕ್ಕೆ ಅಪ್ಪ ಅಮ್ಮನ್ನೂ ಕಾಗೆ ಮಾಡಿ..
ಬ್ರಾಮ್ಹಣನಿಗೇ ದಕ್ಷಿಣೆ ಕೊಟ್ಟು..ಕಾ..ಕಾ..ಕಾ ಅಂತಾರೆ..
ಕಾಶೀಗೆ ಹೋದ್ರೆ ಕೈಲಾಸ ಕಾಂಬೆ ಅನ್ನುತ್ತಾರೆ...
ಕ್ಯಾಮರ ಹಿಡಿದು ಹೆಣ ಸುಡೋ ಫ್ರೇಮಿಂಗ್ ಮಾಡ್ತಾರೆ...
ಎಲ್ಲಾ ಗೋಬಲ್ ವಾರ್ಮಿಂಗೂ...ಲೋಕಲ್ ಬರ್ನಿಂಗೂ...
ಹಿಮಾಲದಲ್ಲಿ ಉಚ್ಚೇ ಹ್ಯುದವನಿಗೆ ಅದು ಮೌಂಟ್ ಎವರೆಷ್ಟು.. 
ಅದು ಶಿವಾಲಯ ಅನ್ನುವ ಬೇರೆಯವರ ಭಾವನೆಗೆ ಅವನ ಕಿಮ್ಮತ್ತೆಷ್ಟು?
ನೀ....ಲೋಕದ ಕಾಳಜಿ ಮಾಡುವೆನೆಂತಿ..
.ಯಾರ ಬ್ಯಾಡಂತರ ಮಾಡಪ್ಪ ಚಿಂತಿ....ಶಿಶುನಾಳ ಷರೀಫ....
ಒಂದು ನಿಮಿಷ ಬಂದೆ..ಸ್ನಾನಕ್ಕೆ ಹೊತ್ತಾಯಿತು :)

Saturday, August 20, 2011

ಅಣ್ಣಾ ನಿಮಿಗೇನ್ ತಲೆ ಕೆಟ್ಟಿದೀಯ?


ಈ ವೈಯಸ್ಸಿನಲ್ಲಿ ಯಾರಿಗೋಸ್ಕರ ಉಪವಾಸ ಮಾಡ್ತಿದ್ದೀರ ತಾತ. ಏಳಿ ಹೊತ್ತಾಯಿತು..ಸ್ವಲ್ಪ ಗಂಜಿ ಕುಡೀರಿ. ಹೇಳ್ತೀನ್ ಕೇಳಿ ನೀವ್ ಏನಾದ್ರು ಗೊಟಕ್ ಅಂದ್ರೆ...ಇಲ್ಲೆಲ್ಲಾ ಟೋಪಿ ಹಾಕೊಂಡ್ ಅದನ್ನೇ ಒಂದು ಫ್ಯಾಷನ್ ಮಾಡ್ತಾ ಇದ್ದಾರಲ್ಲಾ ಅವರೆಲ್ಲಾ ಇನ್ನು ಹದಿನೈದು ದಿನಕ್ಕೆ ಮಾಯ. ನೀವು ರಾಜಕಾರಣಿಗಳ ಬ್ರಷ್ಟಾಚಾರದ ಬಗ್ಗೆ ಬೇಜಾರ್ ಮಾಡಿಕೊಂಡು ಇಷ್ಟೆಲ್ಲಾ ವದ್ದಾಡ್ತಾ ಇದ್ದೀರಲ್ಲ? ಇದೆಲ್ಲಾ ಮುಗಿದು ಇನ್ನೊಂದು ಎಲೆಕ್ಷನ್ ಅಂತ ಬರಲಿ ನೋಡಿ...
೧. ಎಲ್ಲಾರೂ ಓಟು ಹಾಕೋದು ಅವರ ಜಾತಿಯವನಿಗೇ. ಅವನೆಷ್ಟೇ ಕೆಟ್ಟ್ ಕುಲಗೆಟ್ಟು ಹೋಗಿರಲಿ...ಕೊನೆಗೆ ಹೋಗಿ ಅವನನ್ನೇ ಕುರ್ಚಿ ಮೇಲೆ ಕೂಡಿಸ್ತಾರೆ.ಯೋಗ್ಯರಾರು ಎಲಕ್ಷನ್ ಗೆಲ್ಲಲ್ಲಾ ಜಾತಿ ವಿಷ ಇರೋವರೆಗು. ಈ ಜನಗಳ ತಲೆ ಒಳಗಿರೋ ಆಂತರಿಕ ಬ್ರಷ್ಟಾಚಾರಕ್ಕೆ ಯಾವ ಮಸೂದೆ ತರ್ತೀರ ತಾತ?
೨.ಇವತ್ತು ಒಬ್ಬ ಮಾಜಿ ಮುಖ್ಯಮಂತ್ರಿ ಕಳ್ಳಾ ಅಂತ ಗೊತ್ತಿದ್ದೂ ಕೂಡ, ಅವನ ಮನೆ ಮುಂದೆ ಯಾವ ಒಬ್ಬ ಯುತ್ ಕೂಗಾಡೋದು ನೋಡಿದ್ದೀರ? ಇಲ್ಲಾ. ಅವನಿನ್ನೂ ಬಿಳಿ ಬಟ್ಟೇ ಹಾಕೊಂಡು ಸ್ವಾಮೀಜಿಗಳಿಗೆ "ಬೆನ್ಸ್" ಕಾರಿನಲ್ಲಿ ಕೂರಿಸಿಕೊಂಡು ಒಂದು ಪಂಗಡದ ನಾಯಕ ಆಗಿ ಹೋಗ್ತಾನೆ. ಅವನ ವಿರುದ್ದ ಮಾತಾಡಿದರೆ ನೀವು ಅವನ ಜಾತಿ ವಿರೋಧಿ, ಅವನು ಕಾರಿನಲ್ಲಿ ಕೋರಿಸ್ಕೊಂಡ ಸ್ಮಾಮೀಜಿಯ ವಿರೋಧಿ. ಇದಕ್ಕೆ ಯಾವ ಕಾನೂನು ಸಾದ್ಯ ತಾತ?
೩.ಎಲೆಕ್ಷನ್ ಟೈಮ್ ನಲ್ಲಿ ಕೈಗೆ ಹಾಕಿದ ಎಂಜಲನ್ನು ತಿಂದು ಯಾವನೋ ಒಬ್ಬನಿಗೆ ಓಟು ಹಾಕಿ, ಮುಂದೆ ರೇಷನ್ ಕಾರ್ಡ್ ಹಿಡ್ಕೊಂಡು ರೇಷನ್ ಅಂಗಡಿ ಮುಂದೆ ಅಕ್ಕಿ ಕೊಡ್ಲಿಲ್ಲಾ ಅಂತ ಗಲಾಟೆ ಮಾಡೋ ಜನಕ್ಕೆ ಮೊದಲೇ ಸರಿಯಾದವನಿಗೆ, ನಿಮ್ಮ ಜಾತಿ ಅಲ್ಲದಿದ್ದರೂ ಸಹ ಓಟು ಹಾಕಿ ಅಂತ ಹೇಳಕ್ಕೆ ಯಾವ ಮಸೂದೆ ಮಾಡ್ತೀರ ತಾತ?
೪.ಇನ್ನು ನಮ್ಮ ನವ ಯುವಕರು. ಅವರೆಲ್ಲಾ "ಇನ್ಶ್ಟಾಲ್ಮೆಂಟ್ " ನಲ್ಲಿ ಕಾರು ತಗೊಂಡು ವಾರಕ್ಕೊಂದು ಸರಿ ನಂದಿ ಬೆಟ್ಟಕ್ಕೆ ಹೋಗಿ ಕುಡಿದು. ಬರ್ತಾ ಏರ್ಪೋಟ್ ರೋಡ್ನಲ್ಲಿ ಡಿವೈಡರ್ಗೆ ಗುದ್ದಿ, What a pity government cant even make proper road. its not like this in US you know? ಅಂತ ಕಿಲ ಕಿಲಸಿ. ಮುಂದಿನ ಇನ್ಸ್ಟಾಲ್ಮೆಂಟ್ ಕಟ್ಟದೇ ಇದ್ರೆ ಕಾರು ಕಿತ್ಕೊಂಡ್ ಹೋಗ್ತಾರಲ್ಲ ಅಂತ ಅವರ ಬಾಸು ಏನೇ ಹೇಳಿದ್ರೂ ಅದನ್ನ ನಾಲಿಗೇಲಿ ನೆಕ್ಕತಾ...ತಮ್ಮನ್ನ ತಾವೇ ಅಡಾ ಇಟ್ಟಿರುವಾಗ...ಯಾವ್ ಮುಂದಿನ ಜನಾಂಗಕ್ಕೆ ತಾತ ನಿಮ್ಮ ಉಸಿರು ಕೊಡೋದು?
೫.ನಮ್ಮ ಮದ್ಯಮ ವರ್ಗದ ಅಪ್ಪ ಅಮ್ಮಂದಿರು. ಎಷ್ಟೇ ಕರ್ಚಾದ್ರು ಸರಿ. ಲಕ್ಷಾಗಟ್ಟಲೇ ಕೊಟ್ಟರೂ ಸರಿ. ನನ್ನ ಮಗ ಇಂತಾ ಕಾಲೇಜ್ ನಲ್ಲೇ ಓದ್ ಬೇಕು ಅಂತ ಹತ್ತನೇ ಕ್ಲಾಸಿಗೆ ಬಾಗಿಲು ಹಾಕಿ ಕೂಡಿ ಹಾಕಿ ಸೆಕೆಂಡ್ ಪಿಯುಸಿ ಹೊತ್ತಿಗೆ ಬಿಳುಚಿಕೊಂಡು ಹೊರಗೆ ಬರೋ ಆ ಕಂದಮ್ಮನನ್ನ...CET ಮುಂದೆ ಕುಂದರಿಸಿ "ನೋಡಪ್ಪಾ ಯಾವುದೋ ಪರದೇಶಿ ಕಂಪನಿ "ನೀನ್ ಇಷ್ಟು ಓದಿದ್ರೆ ನಾನು ಇಷ್ಟು ಕೊಡ್ತೀನಿ" ಅಂತ times of Inida ದಲ್ಲಿ ಪ್ರಚಾರ ಮಾಡವರೆ. ನೀನ್ ಅಷ್ಟು ಓದಿ ದೇಶ ಬಿಟ್ಟು ಹೋಗಿ..ಅಲ್ಲಿ ಂದ ಡಾಲರ್ ಕಳ್ಸು...ಮಲೆನಾಡಿನ ಯಾವುದಾದ್ರು "Fresh" ಹೆಣ್ ಮಗಳನ್ನ ನಾವು ತಂದು ಗಂಟು ಹಾಕ್ತೀವಿ. ಅಂತ ಒಪ್ಪಸಿ  ದೇಶ ಬಿಡಿಸಿ ಇವುರು ಪಾರಿನ್ ಗೆ ಹೋಗುವಾಗ ಮಗನ ಮನೇಗೆ ತಗೊಂಡು ಹೋಗಕ್ಕೆ  ಉಪ್ಪಿನ ಕಾಯಿ ಮಾಡ್ಟಾ ಕೂತಿರುವಾಗ ಇವರನ್ನ ಏನು ಹೇಳಿ ತಿದ್ದುತೀರ ತಾತ?
೫. ಡಾಕ್ಟರ್ ಓದ್ತಾ ಇರೋ ಕಂದಮ್ಮಗಳ ಸುದ್ದಿನೇ ಕೇಳ್ಬೇಡಿ...ಅವನ್ನ ಓದಿಸಿದ ಇದೇ ದೇಶದ ಹಳ್ಳಿಗಳಿಗೆ ಅವರು ಹೋಗಲ್ಲವಂತೆ. ಅಲ್ಲಿ ಸೇವೆ ಮಾಡಲ್ಲವಂತೆ. ಅವರು ಓದಿಗೆ ಹಾಕಿದ ಇನ್ವೆಸ್ಟಮೆಂಟ್ ಹುಟ್ಟಲ್ಲ್ಲ ಅಂತ ಗೊಣಗ್ತಾರೆ...ಇದಕ್ಕೆ ಏನು ಪರಿಹಾರ ತಾತ.

ಪಾಪ..ನಿಮಿಗೆ ಯಾಕೆ ಈ ಗೋಳು...ಬನ್ನಿ ನಿಮ್ಮ ಹಳ್ಳಿ ಮನೆ ಹಿಂದೆ ಒಂದು ಗುಬ್ಬಿ ಗೂಡು ಕೆಳಗೆ ಬಿದ್ದಿದೆ ಮೇಲೆ ಎತ್ತಿಡಿ...

Wednesday, June 15, 2011

ಕಾಲ್ ಸೆಂಟರ್ ಗಳ ಮೇಲೆ ಒಂದು ಇಂಗ್ಲೀಷ್ ಪುಸ್ತಕವೂ ಮತ್ತದರಲ್ಲಿ ಕನ್ನಡಿಗರ ಪಾಡು.


ಮೊನ್ನೆ, ಅಪರೂಪಕ್ಕೆ ಒಂದು ಇಂಗ್ಲೀಷ್ ಪುಸ್ತಕ ಒಂದನ್ನು ಓದಲಿಕ್ಕೆ ಕೈಗೆತ್ತು ಕೊಂಡಿದ್ದೆ. ಕ್ರಾಸ್ ವರ್ಡ್ ಪುಸ್ತಕ ಮಳಿಗೆಗೆ ಹೋದಾಗ ಕಂಡ “ಬ್ಯಾಂಗ್ಳೂರ್ ಕಾಲಿಂಗ್” ಅನ್ನುವ ಪುಸ್ತಕ ಕುತೂಹಲ ಮೂಡಿಸಿತ್ತು. ಕಾಲ್ ಸೆಂಟರ್ ಗಳ ಕಥೆಗಳನ್ನು ಬಹಳಷ್ಟು ಕೇಳಿದ್ದ ನನಗೆ, ಈ ಪುಸ್ತಕದಲ್ಲಿ ಇನ್ನಷ್ಟು ಒಳನೋಟಗಳೇನಾದರೂ ಇದೆಯೇನೋ ನೋಡುವ ಅನ್ನಿಸಿ ಓದಲು ಕೊಂಡೆ. “ಕಾಲ್ ಅಸ್” ಎನ್ನುವ ಒಂದು ಕಾಲ್ಪನಿಕ ಕಾಲ್ ಸೆಂಟರ್ ನ ಹಲವು ಪ್ರಮುಖ ಪಾತ್ರಗಳ ವಿವರಣೆ ಕೊಡುತ್ತಾ, ಒಂದು ಅಲ್ಲಿ ನಡೆದ ಅಥವ ನಡೆಯುವ ಒಟ್ಟು ಕಥೆಯನ್ನು ಕಟ್ಟಿಕೊಡುವ ಪ್ರಯತ್ನ ಲೇಖಕಿಯದು. ಲೇಖಕಿಯ ಹೆಸರು ಬ್ರಿಂದಾ ಎಸ್. ನಾರಯಣ್. ಈಕೆ ಎಲ್ಲಿಯವಳು ಎಂಬುದನ್ನು ತಿಳಿಯಲು ಪ್ರಯತ್ನ ಪಟ್ಟೆ, ಆಕೆ ಅಮೆರೆಕಾದಲ್ಲಿ ಓದಿ, ಇಲ್ಲಿನ ಕಾರ್ಪರೇಟ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದನ್ನು ಹೇಳಿಕೊಳ್ಳುವ ಈಕೆ, ತನ್ನ ಹುಟ್ಟು ಮತ್ತು ಸಂಕ್ಕೃತಿಯ ಬಗ್ಗೆ ಹೇಳಿಕೊಳ್ಳುವುದಿಲ್ಲವಾದ್ದರಿಂದ ಒಂದು ನಮೂನೆಯ “ಓಪನ್ ಮಾರ್ಕೆಟ್ಟಿನ” ಕಂದಮ್ಮ ಎನಿಸುತ್ತದೆ.
ನಿಜವಾಗಿಯೂ...ಪುಸ್ತಕದಲ್ಲಿ ಏನೂ ಇಲ್ಲ. ನಮ್ಮ ವೈದೇಹಿಯವರ ಯಾವುದೇ ಸಣ್ಣಕಥೆಗೂ ಈ ಇಡೀ ಪುಸ್ತಕ ಸಮವಲ್ಲ. ಎಷ್ಟೇ ಓದಿದರೂ ಹೊಸದೂ ಎನ್ನಿಸುವುದೇನೂ ಗೋಚರಿಸುವುದಿಲ್ಲ. ಬೆಂಗಳೂರಿನ ಹೊಲಸು ಹಳಸನ್ನೆಲ್ಲಾ ಬಹಳ ವಿವರಣಾತ್ಮಕವಾಗಿ ಬರೆದಿರುವ ಈಕೆ, ಇದೇ ಇಂಗ್ಳೀಷು ಓದುಗರಿಗೆ ಅತ್ಮೀಯವಾಗಬಹುದು ಎಂಬ ಬ್ರಮೆಯಲ್ಲಿ ಇದ್ದ ಹಾಗಿದೆ. “ಸ್ಲಂ ಡಾಗ್ ಮಿಲೆನಿಯರ್” ಅಥವ “ವೈಟ್ ಟೈಗರ್” ನಂತಹ ಕೃತಿಗಳಂತೆ, ನಮ್ಮ ದೇಶದ ಕಸ ತೆಗೆದು ರಸ ಮಾಡಿಕೊಳ್ಳುವ ಪ್ರಯತ್ನವಿದು ಎನ್ನಿಸುವಷ್ಟರ ಮಟ್ಟಿಗೆ ನೀರಸವಾಗಿದೆ.
ಇದೆಲ್ಲಾ ಹೇಗಾದರೂ ಹಾಳು ಬಿದ್ದು ಹೋಗಲಿ. ಆದರೆ ಈಕೆ ಸೃಷ್ಟಿಸಿರುವ ಪಾತ್ರಗಳಬಗ್ಗೆ ಹೇಳಲು ಬೇಸರವಾಗುತ್ತದೆ. ಎಲ್ಲಿಂದಲೋ ಬರುವ ಇವರು, ಇಲ್ಲಿನ ಜನ ಮತ್ತು ಸಂಸ್ಕೃತಿಯನ್ನು ಗ್ರಹಿಸುವ ಮತ್ತು ಚಿತ್ರಿಸುವ ರೀತಿ ತುಂಬಾ ಪೂರ್ವಾಗ್ರಹ ಪೀಡಿತವಾದದ್ದು ಅನ್ನಿಸುತ್ತದೆ. ಈ ಪುಸ್ತಕದಲ್ಲಿ ಇರುವ ಕ್ಯಾರೆಕ್ಟರ್ ಗಳು ಮತ್ತು ಈಕೆ ಅವುಗಳನ್ನು ರೂಪಿಸಿರುವ ರೀತಿ ನೋಡಿ.
ಕಂಪನಿ ಮಾಲಿಕ : ಉತ್ತರ ಭಾರತೀಯ
ಟ್ಯಾಕ್ಸಿ ಡ್ರೈವರ್ : ಅಯ್ಯಪ್ಪ ಸ್ವಾಮಿಯ ಹಾಡುಕೇಳುವ, ಗಂಡು ಸಂತಾನ ಬಯಸುವ ತೆಲಗು ಭಾಷಿಕ.
ಕಾಲ್ ಸೆಂಟರ್ ಹುಡುಗ : ರಾಕ್ ಮ್ಯುಸಿಕ್ ಇಷ್ಟ ಪಡುವ, ಡ್ರಗ್ ಆಡಿಕ್ಟ್, ಆಂಗ್ಲೋ ಇಂಡಿಯನ್.
ಕಾಲ್ ಸೆಂಟರ್ ಹುಡುಗಿ : ತಳುಕು ಬಳುಕಿಗೆ ಮಾರು ಹೋಗುವ ಮಳಯಾಳಿ ಹುಡುಗಿ.
ಇನ್ನೋಂದು ಕಂಪನಿ ಮಾಲೀಕ : ಬಂಗಾಲಿ.
ಟ್ಯಾಕ್ಸಿ ಕಂಪನಿ ಮಾಲೀಕ : ತಮಿಳೀಗ
ಕೊನೆಗೆ........
ಟಾಯ್ಲೆಟ್ ಕ್ಲೀನ್ ಮಾಡುವ ಹುಡುಗಿ : ಕನ್ನಡದ ಹುಡುಗಿ, ಅವಳಿಗೆ ಕದಿಯುವ ಚಾಳಿಯನ್ನೂ ಲಗತ್ತಿಸಿಲಾಗಿದೆ.
ಹಾಗೆ ನೋಡಿದರೆ ಇದು ಇವತ್ತಿನ ಸತ್ಯವೂ ಇರಬಹುದು. ತನ್ನ ನೆಲ, ಸಂಸ್ಕೃತಿ, ಬೆಳೆಯುವ ಮಕ್ಕಳು, ಎಲ್ಲರನ್ನೂ ಈ ಐಟಿ ಇಂಡಷ್ಟ್ರೀಗೆ ಧಾರೆ ಎರೆದ ಕನ್ನಡಿಗ, ಇವತ್ತು ಅವರ ಟಾಯಲೆಟ್ ಕ್ಲೀನ್ ಮಾಡುತ್ತಿರುವುದು ಒಂದು ರೀತಿಯಲ್ಲಿ ನಿಜವೇ ಇರಬಹುದೇನೋ. ಓದಿ ಬೇಸರವಾಯಿತು.
ಎಲ್ಲೋ ಅಮೆರಿಕೆಯಲ್ಲೋ,,ಯುರೋಪಿನಲ್ಲೋ ಈ ಪುಸ್ತಕವನ್ನು ಓದುವ ಬಿಳಿಯನಿಗೆ. ಕನ್ನಡತಿ ಟಾಯ್ಲೆ ಟ್ ಕ್ಲೀನ್ ಮಾಡುವ ಹುಡುಗಿ ಅನ್ನಿಸಿದರೆ ಏನೋ ಮಾಡಲು ಸಾದ್ಯವಿಲ್ಲ.
ಹಮ್...ಹೇಗಿದೆ ನೋಡಿ ಕನ್ನಡದವರಪಾಡು....ಎಲ್ಲಿಂದಲೋ ಬಂದವರ ಕಣ್ಣಲ್ಲಿ.
Brinda i am sorry..you suck big time as your book 
Related Posts with Thumbnails