Sunday, February 20, 2011

ರಾತ್ರಿಯ ಆಕಾಶವನ್ನು ದಿಟ್ಟಿಸಿ ನೋಡಲು ಒಂದು ಸಣ್ಣ ಕಾರಣ ಕೊಟ್ಟಿದ್ದಾನೆ


"ಬಲು" "ಬ್ರದರ್ ಬೇರ್" ಹೀಗೆ ಯಾವುದೇ ಪ್ರೀತಿ ತುಂಬಿದ, ಮುಗ್ದ ಹೃದಯದ ದೈತ್ಯ ದೇಹಿಯ ಹೆಸರು ಹೇಳಿದರೂ, ಅದು ನನಗೆ ಸುಧಾಮನ ನೆನಪುತರುತಿತ್ತು. ಆತ ಒಂದು ಮ್ಯಾಗ್ನಮ್ ಇಂಟರ್ ಗ್ಯಾಫಿಕ್ಸ್ ಎಂಬ ಆಡ್ವರ್ಟೈಸಿಂಗ್ ಏಜನ್ಸಿಯ ಕ್ರಿಯೇಟಿವ್ ಹೆಡ್. ನಾನು ಓದಿದ ಕಾಲೇಜಿನಲ್ಲೆ ಓದಿದ್ದ ನನ್ನ ಸೀನಿಯರ್. ಮೊನ್ನೆ ತೀರಿಕೊಂಡ. ಇತ್ತೀಚಿಗೆ ಕಣ್ಣಲ್ಲಿ ನೀರಿಳಿದಿರಲಿಲ್ಲ, ಅವನ ಕಂಡ ಕೂಡಲೆ ಪ್ರೀತಿ ನೀರಾಯಿತು. ಇಷ್ಟು ಬೇಗ ಆತ....ಛೆ..ನಂಬಲಾಗದು.
ತೊಂಬತ್ತೇಳು ಅಥವ ತೊಂಬತ್ತೆಂಟರ ಸಮಯ. ನಾನಿನ್ನೂ ಫೋಟೋಗ್ರಫಿಯಲ್ಲಿ ಕಣ್ಣುಬಿಟ್ಟಿದ್ದ ಹಸುಗೂಸು. ಸುಧಾಮ ದೊಡ್ಡ ಕಂಪನಿಗೆ ಸಹಮಾಲೀಕ. ನನ್ನ ನಾಲ್ಕೈದು ಚಿತ್ರಗಳ ಹಿಡಿದು ಅವನೆದುರಿಗೆ ನಿಂತಿದ್ದೆ,ಕೆಲಸ ಕೊಟ್ಟು ಜೀವನದ ದಾರಿಯಾಗುತ್ತಾನೆ ಅನ್ನುವ ಯಾವುದೋ ಒಂದು ಆಸೆ. ಮೇಲ್ನೋಟಕ್ಕೆ ಸುಧಾಮ ತುಂಬಾ ಕಡಕ್ ಎನ್ನಿಸುವ ವೆಕ್ತಿ. ಹೆಚ್ಚು ಮಾತನಾಡುತ್ತಿರಲಿಲ್ಲ ವಾದ್ದರಿಂದ, ಅಹಂಕಾರಿಯೇನೋ ಅನ್ನಿಸುವ ತಪ್ಪು ಭಾವನೆ ಬರುವಂತಹ ಸಾದ್ಯತೆಯೇ ಹೆಚ್ಚು. ನನಿಗೂ ಹಾಗೇ ಆಗಿತ್ತು. ಆದರೂ ಕೈಕಟ್ಟಿ ನಿಂತಿದ್ದೆ. ನನ್ನ ಚಿತ್ರಗಳನ್ನು ನೋಡಿ, "ಆಗಲಿ ಕೆಲಸ ವಿದ್ದಾಗ ಹೇಳುತ್ತೇನೆ" ಎಂದಷ್ಟೇ ಹೇಳಿ ಕಳುಹಿಸಿದ್ದ. ನನಿಗೆ ಹೆಚ್ಚೇನೂ ಬರವಸೆಯಿರಲಿಲ್ಲ. ಆದರೇ ಹಾಗಾಗಲಿಲ್ಲ. ಮುಂದೆ ಒಂದೊಂದ್ದೇ ಕೆಲಸ ಗಳು ಬರತೊಡಗಿ, ಇಂದಿನ ವರೆಗೂ ಮುಂದುವರೆದಿತ್ತು.
ಇಂಪೆಕ್ಕೆಬಲ್ ಇಂಗ್ಲೀಷ್ ಅನ್ನುತಾರಲ್ಲ ಅದು ಆತನ ಭಾಷೆ. ಯಾವಾಗಲೂ ಒಂದು ಕಾಟನ್ ಕುರ್ತ. ತನ್ನ ಆಗಾದವಾವ ಹೊಟ್ಟೆಯಮೇಲೆ ಕೈಇಟ್ಟು ನಾನು ಚಿತ್ರಗಳನ್ನು ತೆಗೆಯಲು ಲೈಟ್ ಸೆಟ್ ಮಾಡುತಿದ್ದರೆ, ಶಾಂತವಾಗಿ ನೋಡುತಿದ್ದ. ತಪ್ಪಿದ್ದರೆ ಯಾವತ್ತೂ ಒಪ್ಪುತಿರಲಿಲ್ಲ. ಎಷ್ಟೇ ಉತ್ತಮವಾಗಿದ್ದರೂ ತುಟಿಮೀರಿ ಹೊಗಳುತ್ತಿರಲಿಲ್ಲ. ಅವನೊಟ್ಟಿಗಿನ ಮದ್ಯಾನಃದ ಊಟಗಳೇ ಚಂದ. ಮಂಗಳೂರಿನಲ್ಲಿ ಎಲ್ಲಿ ಮೀನಿನ ಊಟ ಚೆಂದ ಎಂಬ ಪೂರ್ಣ ಮಾಹಿತಿ ಇತ್ತು ಅವನಲ್ಲಿ. ಜೊತೆಗೆ ಹೋದರೆ ಹಬ್ಬ.
ಅವನಾಯಿತು ಅವನ ಇಬ್ಬರು ಮಕ್ಕಳಾಯಿತು. ಅವರೇ ಅವನ ಲೋಕ. ಅವರನ್ನು ಕಾರಿನಲ್ಲಿ ತುಂಬಿಕೊಂಡು ಸ್ವಿಮ್ಮಿಂಗ್ ಪೂಲಿಗೆ ಓಡುತಿದ್ದ. ಘಂಟೆಗಟ್ಟಲೆ ಮಕ್ಕಳು ಸ್ವಿಮಿಂಗ್ ಅಬ್ಯಾಸ ಮಾಡುವುದನ್ನು ನೋಡುತಾ ಕೂರುತಿದ್ದ. "ಬೆಳೆಯುವ ಮಕ್ಕಳು ಯಾವುದಾರು ಕೆಲಸ ಮಾಡುತಿರಬೇಕು ಇಲ್ಲದಿದ್ದರೆ ಬೇರೆ ತರಲೆ ಗಳು ತಲೆಗೆ ಹತ್ತಿಕೊಳ್ಳುತ್ತವೆ" ಎನ್ನುತಿದ್ದ.
ಪ್ರಪಂಚದ ಆಗು ಹೋಗುಗಳ ಬಗ್ಗೆ ಪೂರ್ಣ ಮಾಹಿತಿ ಇತ್ತು ಆತನಲ್ಲಿ. ಮಂಗಳೂರಿನಂತಹ ಆ ಕಾಲದ ಸಣ್ಣ ಊರಲ್ಲಿ ಆಡ್ ಎಜನ್ಸಿ ಮಾಡಲು ಹೊರಟವನಿಗೆ ತಮಾಷಿ ಮಾಡಿದವರೇ ಹೆಚ್ಚು. ಆದರೂ, ಇಂದು ರಾಷ್ಟ್ರ ಮಟ್ಟದ ಕಂಪನಿಯಾಗಿ ಮಾಡಿ ಹೋದ. ಅವನ ಡಿಸೈನ್ ಗಳು ಬೆಂಗಳೂರಿನ ಎಷ್ಟೋ ಏಜನ್ಸಿಗಳಿಗೆ ಸವಾಲಾಗಿತ್ತು. ಬೆಂಗಳೂರಿಗೇಕೆ ಬರಬಾರದು? ಎಂಬ ಪ್ರೆಶ್ನೆಗೆ "ನಾನಿಲ್ಲೇ ಸುಖವಾಗಿದ್ದೇನೆ..." ಎನ್ನುತಿದ್ದ. ಇತ್ತೀಚಿಗೆ ನನ್ನೊಟ್ಟಿಗೆ ಲೊಕೇಷನ್ ಗಳಿಗೆ ಬರುತ್ತಿರಲಿಲ್ಲ. "ನೀನೆ ಮುಗಿಸಿ ಬಾ ಮಾರಾಯ" ಅನ್ನುತಿದ್ದ, ಅಷ್ಟು ಬರವಸೆ ಇತ್ತು ಅವನಿಗೆ ನನ್ನ ಮೇಲೆ.
ಗುರುವಾರದ ಮದ್ಯಾನಃ ಮಂಗಳೂರಿನಿಂದ ಫೊನು. "ವಿಷಯ ಗೊತ್ತಾಯಿತ ಮಹೇಂದ್ರ...ಸುಧಾಮರಿಗೆ ತುಂಬಾ ಹುಷಾರಿಲ್ಲ, ನೀವು ಈಗಲೇ ಬಂದರೆ ಉತ್ತಮ" ಎಂದರು ಆ ಕಡೆಯವರು. ತಕ್ಷಣ ಮಂಗಳೂರಿಗೆ ಓಡಿದೆ. ನನಗಿಂತ ದೊಡ್ಡವನಲ್ಲವ ಇಂಥಹ ಪರಿಸ್ಥಿತಿ ನಿಭಾಯಿಸುತ್ತಾನೆ..ನಾನು ಹೋದಾಗ ಮೊದಲ ಹಾಗೆ ಮುಗುಳ್ನಗುತ್ತಾ ಇರುತ್ತಾನೆ...ಅವನಿಗೇನೂ ಆಗದು ಅಂದು ಕೊಂಡೇ ಹೊರಟೆ. ಮಂಗಳೂರಿಗೆ ಬೆಳಿಗ್ಗೆ ಹೋಗಿ ಹೋಟೇಲಿನಲ್ಲಿ ಮುಖತೊಳೆಯುವಾಗಲೇ ಇನ್ನೊಂದು ಫ್ಹೋನು..ಸುಧಾಮ್ ಹೋಗಿಬಿಟ್ರು, ನಿನ್ನೆ ರಾತ್ರಿಯೇ..ಅಂದರು. ತಕ್ಷಣ ಅವರಿದ್ದ ಆಸ್ಪತ್ರೆಗೆ ಓಡಿದೆ..ಯಾರನ್ನು ಹೇಗೆ ಕೇಳಲಿ ಆನ್ನುವುದೇ ಬಾಯಿ ಕಟ್ಟಿ ಹೋಯಿತು. ಕೌಂಟರ್ ನಲ್ಲಿದ್ದ ಮಲಯಾಳಿಯನ್ನು ಕೇಳಿದೆ. "ಇಲ್ಲಿ ಸುಧಾಮ....ಯಾವ..." ಅನ್ನುವಷ್ಟರೆಲ್ಲೇ..."ಅದು ಕೊಂಡು ಹೋಗಿ ಆಯಿತು" ಎಂದು ಸುಧಾಮನನ್ನು ನಿರ್ಜೀವವಾಗಿಸಿದ್ದ. "ಎಲ್ಲಿಗೆ?" ಎಂದೆ. ಮೋರ್ಗ್ನಿನ [ಶವಾಗಾರದ] ದಾರಿ ತೋರಿದ. ಅಲ್ಲಿಗೆ ಓಡಿದೆ...ಅಲ್ಲಿ ಯಾರೂ ಇರಲಿಲ್ಲ..ಇದೇನು? ಮನೆಯವರೆಲ್ಲಾ ಎಲ್ಲಿ..ಏನಾಯಿತು ಎಂದು ಯೋಚಿಸುವಾಗ, ಅಲ್ಲಿದ್ದ ವಾಚ್ ಮನ್ ಬಂದ. ನಾನು ಹೆಸರು ಹೇಳಿ ವಿಚಾರಿಸಿದೆ. "ಇಲ್ಲಿ ಯಾರೂ ಇಲ್ಲ. ಒಳಗೆ ಒಂದಷ್ಟು ಬಾಡಿ ಇದೆ..ನೀವು ನೋಡುತ್ತೀರೆಂದರೆ ತೋರಿಸುತ್ತೇನೆ ಎಂದ. ಮನಸ್ಸು ಕೆಟ್ಟು ಹೋಯಿತು. ಅಲ್ಲಿಂದಲೇ ಪರಿಚಯದವರೊಬ್ಬರಿಗೆ ಫೋನು ಮಾಡಿದೆ. "ಇಲ್ಲ ಮಹೇಂದ್ರ, ಅವರು ಸತ್ತ ವಿಷ್ಯ ಅವರ ಮನೆಯವರಿಗೆ ತಿಳಿಸಿಲ್ಲ. ಅವರ ತಂಗಿಯ ಮನೆಯಲ್ಲಿ ಇವತ್ತು ಪೋಜೆ, ನನಗೆ ಏನೇ ಆದರೂ ಪೂಜೆ ನಿಲ್ಲುವುದು ಬೇಡಾ ಎಂದಿದ್ದರು ಸುಧಾಮ್, ಹಾಗಾಗಿ. ಇಂದು ಬಾಡಿಯನ್ನು ಐಸ್ ನಲ್ಲಿಟ್ಟಿದ್ದೇವೆ. ನಾಳೆ ಕಾರ್ಯ" ಎಂದರು. ಏನು ಹೇಳಬೇಕೆಂದು ತಿಳಿಯಲಿಲ್ಲ.
ಹಾಗೇ ಇನ್ನೊಬ್ಬ ಪರಿಚಯದವರಲ್ಲಿಗೆ ಹೋದೆ. ಅಷ್ಟರಲ್ಲಿ ನನ್ನ ಫೋನು ರಿಂಗಾಯಿತು. "ಸುದಾಮ್" ಅನ್ನುವ ಹೆಸರು ಫ್ಲಾಶ್ ಆಗುತಿತ್ತು. ಎಲ್ಲಾ ವಿಷ್ಯ ಗೊತ್ತಿದ್ದರೂ, ಈ ಫೊನ್ ತೆಗೆದು ಕೊಂಡರೆ ಅದೇ ಸುಧಾಮನ ದ್ವನಿ ಕೇಳಬಹುದೆ. "ಹೈ ಹೌ ಅರ್ ಯು ಮಹೇಂದ್ರ?" ಎಂದು ಕೇಳುತ್ತಾನೋ ಎಂದು ಸಣ್ಣ ಬ್ರಮೆ. ಪೋನು ತೆಗೆದಾಗ..ಆಚೆಯಿಂದ ಮನೆಯವರು ಯಾರೋ..."ಮಹೇಂದ್ರ ರವರೆ ವಿಷ್ಯತಿಳಿಯಿತಲ್ಲ..ಸುಧಾಮ್ ಹೋಗಿ..." "ಗೊತ್ತಾಯಿತು..ನಾನಿಲ್ಲೇ ಮಂಗಳೂರಿನಲ್ಲೇ ಇದ್ದೇನೆ..ನಾಳೆಯತನಕ ಇದ್ದು..ಕಾರ್ಯ ಮುಗಿಸಿ ಹೋಗುತ್ತೇನೆ" ಎಂದು ಕಣ್ಣೋರೆಸಿಕೊಂಡೆ..
ಬೆಳಿಗ್ಗೆ ತಣ್ಣಗೆ ಮಲಗಿದ್ದ ಅವನ ದೇಹದ ಮೇಲೆ ದೃಷ್ಟಿ ನಿಲ್ಲಲೇ ಇಲ್ಲ. ನಂಬಲೇ ಆಗದ ಸತ್ಯ ಅದು..ಒಪ್ಪಿಕೊಳ್ಳಲು ಮನಸ್ಸು ರಡಿ ಇರಲಿಲ್ಲ. ಬಾಯಿಗೆ ತುಳಸಿ ನೀರು ಬಿಡುವಾಗ..ಕೈ ನಡುಗುತಿತ್ತು. ಅವನೊಟ್ಟಿಗಿದ್ದ ಅಷ್ಟೋ ಘಳಿಗೆಗಳು ಕಣ್ಣಮುಂದೆ ಚಿತ್ರವಾಯಿತು. ನಮಸ್ಕಾರ ಹೇಳಿ ಹೊರಬಂದೆ..
ನನ್ನ ಅಮ್ಮ ಸತ್ತಾಗೆ ನಾನಿನ್ನೂ ಚಿಕ್ಕವನು..ಸಮಾಧಾನ ಮಾಡಲು ನನ್ನಜ್ಜಿ "ಸತ್ತವರು ಆಕಾಶದಲ್ಲಿ ತಾರೆ ಯಾಗುತ್ತಾರೆ" ಎನ್ನು ಕತೆ ಹೇಳೀದ್ದರು. ಆಗಿನ್ನೂ ಸಣ್ಣವನು..ಆಕಾಶ ನೋಡಿರಲಿಲ್ಲ. ಇಂದು ಸುಧಾಮ ಹೋಗಿದ್ದಾನೆ...ರಾತ್ರಿಯ ಆಕಾಶವನ್ನು ದಿಟ್ಟಿಸಿ ನೋಡಲು ಒಂದು ಸಣ್ಣ ಕಾರಣ ಕೊಟ್ಟಿದ್ದಾನೆ. ಎಲ್ಲಿ ಯಾವ ನಕ್ಷತ್ರವಾಗಿದ್ದಾನೋ ಆರಿಯೆ, ಒಂದು ಮೂಲೆಯಲ್ಲಿ ತನ್ನ ಪಾಡಿಗೆ ತಾನು ಪ್ರಾಕಾಶ ಮಾನ ವಾಗಿ ಯಾವುದಾದರೂ ಬೆಳಕಿದ್ದರೆ..ಅದು ಸುಧಾಮನೇ..ಹ್ಯಾವೇ ನೈಸ್ ಟೈಮ್ ಇನ್ ಹೆವೆನ್ ಬಿಗ್ ಗೈ..ಗುಡ್ ಬೈ.."

2 comments:

ರಾಜೇಶ್ ನಾಯ್ಕ said...

ಎರಡು ವರ್ಷ ಸುದಾಮ್ ಸಂಗಡ ಕೆಲಸ ಮಾಡಿದ್ದೆ. ನಾನು ಅವರ ಸಂಸ್ಥೆ ಬಿಟ್ಟು ಈಗ ೯ ವರ್ಷಗಳೇ ಆದವು. ಆದರೂ ಅಲ್ಲಲ್ಲಿ ಸಿಕ್ಕಾಗ ತನ್ನ ಮಂದಹಾಸದ ನಗು ಬೀರಿ, ವಿಶಿಷ್ಟ ಗಡಸು ಧ್ವನಿಯಲ್ಲಿ ಕುಶಲೋಪರಿ ವಿಚಾರಿಸುತ್ತಿದ್ದರು. ನಾನು ಅವರ ಸಂಸ್ಥೆ ಬಿಟ್ಟಾಗ ’ಕೀಪ್ ಇನ್ ಟಚ್’ ಎಂದವರು ಅವರೊಬ್ಬರು ಮಾತ್ರ!

Unknown said...

ಸುಧಾಮ್ ನನ್ನ ಬದುಕನ್ನು ಪ್ರಭಾವಿಸಿದ್ದು ಅವರ ಕೆಲಸವನ್ನು ಒಬ್ಬ ಋಷಿಯ ಮಗ್ನತೆಯಲ್ಲಿ ಮಾಡುತಿದ್ದ ಪರಿಯಿಂದ. ವಿಚಿತ್ರ ರೀತಿಯಿಂದ ಅವರೇ ಕಾರಣವಾದರೂ ಕೊನೆಯ ಭೇಟಿಯಲ್ಲಿ ನನ್ನ ಕೈಕುಲುಕಿದಾಗ ಅದೇನೋ ಒಂದು ಬಗೆಯ ಅಕ್ಕರೆ. ಮತ್ತೆ ಎಲ್ಲೋ ಒಂದು ಕಡೆ ಸಿಕ್ಕಿದಾಗ ಅದೇ ರೀತಿ ಹುಬ್ಬು ಹಾರಿಸಿ ಹೌ ಆರ್ ಯು ಎನ್ನುವಂತೆ ಮೌನವಾಗಿ ಆವರಿಸಿಕೊಂಡ ಆಜಾನುಬಾಹು. ಅವರಿಲ್ಲದ ಸಂಸ್ಥೆಗೆ ಅವರಿಂದು ಅನಿವಾರ್ಯ ಅಂತೇನೂ ಇಲ್ಲ ಎಂದು ಅನಿಸುವುದಕ್ಕೆ ಅವರು ತೋರಿಸಿ ಕೊಟ್ಟ ಆ ವರ್ಕ್ ಕಲ್ಚರ್ ಕಾರಣ ಎಂದು ನನ್ನ ನಂಬಿಕೆ. ಮಂಗಳೂರನ್ನು ಜಾಹಿರಾತು ಜಗತ್ತಿನಲ್ಲಿ ಪ್ರತಿನಿಧಿಸಲು ಅರ್ಹರಾದ ಒಬ್ಬನೇ ವ್ಯಕ್ತಿ ಆತ. ಥ್ಯಾಂಕ್ಸ್ ಮಹೇಂದ್ರ.

Related Posts with Thumbnails