Friday, December 31, 2010

ಮಕ್ಕಳನ್ನು ಕಾಣದ ತಂದೆ ತಾಯಿಯ ಕಣ್ಣಲ್ಲಿ ಇರುವ ತವಕ ವನ್ನು ಯಾವ ಚಿತ್ರವೂ ಬಿಡಿಸಲಾರದು ಅನ್ನಿಸುತ್ತೆ.

         ಅವರವರ ಕಷ್ಟ ಅವರಿಗೆ ದೊಡ್ಡದು. ಕಾರಲ್ಲಿ ಹೋಗುವವನಿಗೆ ಟ್ರಾಫಿಕ್ ಜಾಮಿನ ಚಿಂತೆ ಆದ್ರೆ...ರಸ್ತೆಯಲ್ಲಿ ನಡೆಯುವವನಿಗೆ ಅದೇ ಕಾರು ಅವನ ಕಾಲಿನ ಮೇಲೆ ಹರಿಯುವ ಚಿಂತೆ. ಬೆಂಗಳೂರು ಅಂದ ಮೇಲೆ ಸುಮ್ಮನೆ ಕೂತಿದ್ದರೂ ಚಿಂತೆ ಅದು ಬಿಡಿ.
ಹೀಗೆ ನನ್ನದೂ ಸಣ್ಣ ಪುಟ್ಟ ಕೊರತೆಗಳು. ಯಾವುದೋ ಪೇಮೆಂಟ್ ಬಂದಿಲ್ಲ ಅನ್ನುವುದರಿಂದ ಹಿಡಿದು, ಇತ್ತೀಚಿಗೆ ನನಗೇ ಕುಷಿ ಕೊಡುವಂತಹ ಯಾವುದೇ ಕ್ರಿಯಾತ್ಮಕ ಕೆಲಸ ಮಾಡಿಲ್ಲವಲ್ಲ...ಫೋಟೋಗ್ರಫಿ ಒಂದೇನ..ಇನ್ನೇನ್ ಮಾಡಬಹುದು? ಸಂಸ್ಕೃತ ಕಲಿಯಬೇಕು ಅಂದಿದ್ದು ಮನೆ ಕಟ್ಟುವ ಭರಾಟೆಯಲ್ಲಿ ಕಾಂಕ್ರೀಟ್ ಆಗಿ ಆಗಲೇ ಇಲ್ಲ. ಮನೆಯಲ್ಲಾ ಕಟ್ಟಿ ಮುಗಿಯುವ ಹೊತ್ತಿಗೆ ಬಂದೆರಗಿದ ಸುದ್ದಿ ಅಂದರೆ..ನಾನು ಮನೆ ಕಟ್ಟಿರುವ ಜಾಗದಲ್ಲಿ ಬಿ ಡಿ ಏ ನವರ ಯಾವುದೋ ಸಮಸ್ಯೆ ಇದೆ ಅದನ್ನ ನಮಗೆ ಜಾಗ ಮಾರಿದಾತ ಮುಚ್ಚಿಟ್ಟು ನಮಗೆ ತೊಂದರೆಗೆ ಸಿಕ್ಕಿ ಹಾಕಿಸಿದ್ದಾನೆ ಅಂಬುದು. ಸ್ವಲ್ಪ ದಿನ ಊಟ ನಿದ್ದೆಯಲ್ಲಿ ರುಚಿಯೇ ಇಲ್ಲ. ಮಂಕು ಮಂಕು.
ಅದಾದ ಮೇಲೆ..ನನ್ನ ಕ್ಯಾಮಾರದ ಶಟರ್ ಜಾಮ್. ಶಿವರಾಜ್ ಕುಮಾರ್ ರವರ ಹೊಸ ಚಿತ್ರದ ಶೊಟಿಂಗ್ ನಲ್ಲಿ ಇದ್ದಾಗಲೇ..ಕ್ಯಾಮರ ಕೆಟ್ಟುಹೋಗಿ..ಅದನ್ನ ಸರಿ ಮಾಡಿಸಲಿಕ್ಕೆ ಹನ್ನೆರಡು ಸಾವಿರ. ಯಾವುದೇ ಕೆಲಸಕ್ಕೊ ಮನಸಿಲ್ಲ. ಹೀಗೆ, ಸಿಡಿ ಮಿಡಿ ಸಿಡಿ ಮಿಡಿ ಯಾಗಿದ್ದ ದಿನದ ಒಂದು ಸಾಯಂಕಾಲ ನನ್ನ ಆತ್ಮೀಯರೊಬ್ಬರು ಬಂದರು. ಅವರು ಪಶುವೈದರು.ಇಬ್ಬರು ಮಕ್ಕಳ ಮುದ್ದಾದ ಸಂಸಾರ, ಹೆಂಡತಿ ಟೀಚರ್. ಮೊದಲೆನೆಯ ಮಗು ಹೆಣ್ಣು, ಎರಡನೆಯ ಮಗು ಗಂಡು. ಆ ಮಗು ಚಿಕ್ಕವನಿರುವಾಗ,ಒಂದು ಸಣ್ಣ ಜ್ವರಕ್ಕೆ ಕೊಟ್ಟ ಔಷದಿ ಹೆಚ್ಚು ಕಡಿಮೆ ಆದ ಕಾರಣ ಅವನ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗಿ, ಮೆದುಳಿಗೆ ಘಾಸಿಯಾದ ಕಾರಣ, ಹೆಗಲೆತ್ತರಕ್ಕೆ ಬೆಳೆದಿರುವ ಮಗ ಇನ್ನೂ ಸಣ್ಣ ಮಗುವಿನ ಹಾಗೇ ಇರುತ್ತಾನೆ. ಯಾವಾಗಲೂ ಯಾರಾದರೂ ಅವನೊಟ್ಟಿಗೆ ಇರಬೇಕು. ಅವನ ದೇಖರೇಖಿ ಮಾಡಬೇಕು. ದೊಡ್ಡ ದೇಹದಲ್ಲಿರಿವ ಕೆಲವು ತಿಂಗಳ ಪುಟ್ಟ ಕಂದ ಅದು.
ಇಷ್ಟೆಲ್ಲಾ ನೋವು ಮೆನೆಯಲ್ಲಿ..ಮನದಲ್ಲಿದ್ದರೂ ಅದನ್ನು ನನ್ನ ಗೆಳೆಯ ಯಾವತ್ತೂ ತೋಡಿಕೊಂಡವರೇ ಅಲ್ಲ. ಅವರೊಡನೆ ಮಾತಾಡುವಾಗ ಅವರಿರುವ ತೋಂದರೆಗಳ ಸುಳಿವೂ ನಿಮಗೆ ದಕ್ಕುವುದಿಲ್ಲ. ಅಂತಹವರು ಮೊನ್ನೆ ಸ್ವಲ್ಪ ಕಸಿವಿಸಿಯಲ್ಲಿದ್ದರು. ನಾನೇ ಒತ್ತಾಯ ಮಾಡಿ ಕೇಳಿದಾಗ..ಅಂದು ನಡೆದ ಘಟನೆಯನ್ನು ಬಿಚ್ಚಿಟ್ಟರು.
ದಿನವು ಕೊಂಚ ದೂರ ವಾಕಿಂಗ್ ಹೋಗುವುದು ಅವರ ಅಬ್ಯಾಸ. ಹಾಗೇ ಮಗನನ್ನೂ ತಮ್ಮೊಡನೆ ಕೈ ಹಿಡಿದು ಕರೆದು ಕೊಂಡು ಹೋಗುವುದು ವಾಡಿಕೆ. ಮೊನ್ನೆ ಯಾಕೋ, ಕಾರಿನಲ್ಲಿ ಆಡಿಕೊಂಡು ಕುಳಿತಿದ್ದ ಮಗ, ವಾಕಿಂಗ್ ಹೊರಟ ಅಪ್ಪನಿಗೆ "ನಾ ಬರುವುದಿಲ್ಲ" ಎಂದು ಸನ್ನೆ ಮಾಡಿದ್ದಾನೆ. ಹೇಗೂ ಮನೆಯ ಮುಂದೆಯೇ ಇದ್ದಾನಲ್ಲ ಎಂದು ಇವರೂ ಹಾಗೇ ನಡೆದು ಹೋಗಿದ್ದಾರೆ. ಕೊಂಚ ಹೊತ್ತು ಬಿಟ್ಟು ಮನೆಗೆ ಬಂದವರು ಕೆಲಸಕ್ಕೆ ಹೊರಡಲು ರೆಡಿಯಾಗುತಿದ್ದಾರೆ ಆ ಭರಾಟೆಯಲ್ಲಿ ಮಗ ಮನೆಯ ಒಳಗೆಲ್ಲೋ ಇರಬೇಕು ಎನ್ನುವ ನಂಬಿಕೆಗೆ ಬಿದ್ದಿದ್ದಾರೆ.
ಕೊಂಚ ಹೊತ್ತಿನ ನಂತರ ಗಮನಿಸಿದರೆ..ಮಗ ಇಲ್ಲ. ಹೆಸರು ಹಿಡಿದು ಕೂಗಿ ಕೂಗಿ ನೋಡಿದರೂ ಇಲ್ಲ. ಮನೆಯ ಎಲ್ಲರೂ ಎಲ್ಲ ಕೆಲಸ ಬಿಟ್ಟು.."ನಿಮ್ಮ ಒಟ್ಟಿಗೆ ಇದ್ದಾನೆಂದು ಕೊಂಡೆವು" ಎಂದು ಪರಸ್ಪರ ಹೇಳಿಕೊಂಡು ದುಗುಡ ತುಂಬಿದ ಎದೆಯಲ್ಲಿ ಎಲ್ಲೆಡೆ ಹುಡುಕಲು ಶುರು ಹಚ್ಚಿದ್ದಾರೆ. ಅಕ್ಕಪಕ್ಕದ ಮನೆಯವರು...ಮುಂದಿನ ಖಾಲಿ ಸೈಟಿನಲ್ಲಿದ್ದ ಕೆಲಸದವರು, ಮಿತ್ರರು ಎಲ್ಲರೂ ಉಸಿರು ಬಿಗಿ ಹಿಡಿದು ಕಣ್ಣಾಲಿಗಳನ್ನು ಎಲ್ಲೆಡೆ ಹರಡಿ ತಡಕಾಡಿದ್ದಾರೆ. ಹೇಳಿಕೊಂಡ ದೇವರಿಲ್ಲ..ಕಟ್ಟಿಕೊಂಡ ಹರಕೆ ಇಲ್ಲ. ಮಗನ ಮುಖ ಕಂಡರೆ ಸಾಕೆಂಬ ತವಕ. ಎಲ್ಲಿ ಯಾವ ಅಪಾಯಕ್ಕೆ ಸಿಕ್ಕನೋ..ಯಾರು ಕರೆದು ಕೊಂಡು ಹೋದರೋ..ಭಗವಂತಾ.... ಕಣ್ಣೆದುರು ಮಕ್ಕಳನ್ನು ಕಾಣದ ತಂದೆ ತಾಯಿಯ ಕಣ್ಣಲ್ಲಿ ಇರುವ ತವಕ ವನ್ನು ಯಾವ ಚಿತ್ರವೂ ಬಿಡಿಸಲಾರದು ಅನ್ನಿಸುತ್ತೆ.
ಅಷ್ಟರಲ್ಲಿ ಅವರಿಗೆ ಹೊಳೆದ ವಿಷಯ ವೆಂದರೆ ಇವರ ಮೊಬೈಲ್ ಅವನ ಕೈನಲ್ಲಿ ಯೇ ಇದೆ..ಕಾರಿನ ಡ್ಯಾಷ್ ಬೋರ್ಡಿನ ಮೇಲಿದ್ದ ಫೋನ್ ನನ್ನು ಆತನೇ ಇಟ್ಟುಕೊಂಡಿದ್ದಾನೆ ಎಂಬುದು. ಆದರೇನು ಪ್ರಯೋಜನ...ರಿಂಗಾಗುವುವ ಫೋನ್ ನನ್ನು ಮಗ ಎತ್ತಿಕೊಳ್ಳಬಹುದೇ ಹೊರತು..ಅವನಿಗೆ ಮಾತಡಲು ಬಾರದು..ಎಲ್ಲಿದ್ದೇನೆಂದು ಹೇಗೆ ಹೇಳಬಲ್ಲ? ಸರಿ ಬಿ. ಎಸ್. ಎನ್. ಎಲ್ ನವರಿಗೆ ಫೋನ್ ಮಾಡಿ "ಇಂಥಹ ನಂಬರಿನ ಫೋನ್ ನನ್ನು, ಯಾವ ಏರಿಯಾದಲ್ಲಿದೆ ಎಂದು ಟ್ರಾಕ್ ಮಾಡಲು ಸಾದ್ಯವೇ?" ಎಂದು ಕೇಳಿಕೊಂಡಿದ್ದಾರೆ. ಅವರು,ಎಲ್ಲಾ ಸರ್ಕಾರಿ ಆಫೀಸಿನಂತೆ, "ದಯವಿಟ್ಟು ಕೆಲಸದ ಸಮಯವಾದ ಹತ್ತೊವರೆಯವರಗೆ ಕಾಯಿರಿ ಎಂದು ಉತ್ತರಿಸಿದ್ದಾರೆ.
ಅಷ್ಟರಲ್ಲಿ ಅವರ ಮನೆಗೆ ಪೇಪರ್ ಮತ್ತು ಹಾಲು ಹಾಕುವ ಹುಡುಗ ಬಂದಿದ್ದಾನೆ. ಇವರಿರುವ ಗಾಭರಿ ಗೊಂಡ ಪರಿಸ್ಥಿತಿ ನೋಡಿ ಅವನಿಗೂ ಏನಾದರೂ ಮಾಡಬೇಕೆನಿಸಿದೆ. "ಒಂದು ಸರಿ ನಾನೇ ಫೋನ್ ಮಾಡ್ಲಾ ಸರ್?" ಎಂದು ಇವರ ಮಗನ ಕೈನಲ್ಲಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾನೆ. ಆ ಕಡೇ ಮಗು ರಿಂಗ್ ಬಂದ ತಕ್ಷಣ ಫೋನ್ ಆನ್ ಮಾಡಿದ್ದಾನೆಯೇ ಹೊರತು ಮಾತು ಬಾರದ ಕಾರಣ ಸುಮ್ಮನೇ ಹಾಗೇ ಬಿಟ್ಟಿದ್ದಾನೆ. ಇತ್ತ ಕಡೇ ಪೇಪರಿನ ಹುಡುಗನ ಕಣ್ಣಲ್ಲಿ ಒಂದು ಸಣ್ಣ ಹೊಳಪು. ಕಣ್ಣರಳಿಸಿ ಫೋನ್ ಕೆಳಗಿಟ್ಟು, " ಸರ್ ನನಗನ್ನಿಸುತ್ತೆ...ವಸಂತಪುರದ ಹತ್ತಿರ ಇರೋ ಖಾಲಿ ಲೇಔಟ್ ನಲ್ಲಿ ಇರಬೇಕು ಅಂತ. ಯಾಕಂದ್ರೆ, ಮಗು ಫೋನ್ ಆನ್ ಮಾಡಿದ್ರೆ ಅಲ್ಲಿ ಹಕ್ಕಿ ಶಭ್ದ ಕೇಳುತ್ತೆ, ಇಲ್ಲಿ ಸುತ್ತ ಮುತ್ತ ಹಕ್ಕಿಗಳು ಇರೋ ಪ್ರದೇಶ ಅಂದರೆ ಅದು ಒಂದೇ" ಎಂದ.
ಯಾರು ಏನೇ ಹೇಳಿದರೂ ಒಮ್ಮೆ ಟ್ರೈ ಮಾಡುವ ಮನಸ್ಥಿತಿಯಲ್ಲಿದ್ದ ಮನೆಯವರು ಅಲ್ಲಿಗೂ ಹೋಗಿ ನೋಡುವ ಎಂದು ಹೊರಟಿದ್ದಾರೆ. ಅಷ್ಟರಲ್ಲಿ,ಬಿ. ಎಸ್. ಎನ್. ಎಲ್ ನಿಂದಲೂ ಫೋನ್ ಬಂದು "ಇಂತಹ ಏರಿಯಾದಲ್ಲಿ ನಿಮ್ಮ ಫೋನಿನ ಸಿಗ್ನಲ್ ಸಿಕ್ಕುತಿದೆ" ಎಂದು ಪೇಪರಿನ ಹುಡುಗ ಹೇಳಿದ ದಿಕ್ಕಿಗೆ ಕೈ ತೋರಿಸಿದ್ದಾರೆ.
ದುಡು ದುಡು ದುಡು ಓಡಿ ಹೊರಟ ಅಪ್ಪ ಅಮ್ಮ ನಿಗೆ, ಮನೆಯಿಂದ ಸುಮಾರು ಐದಾರು ಕಿಲೋ ಮೀಟರ್ ದೂರದಲ್ಲಿರುವ ಖಾಲಿ ಲೇಔಟ್ ನಲ್ಲಿದ್ದ ಒಂದು ಹಳೇ ಪಾರ್ಕಿನಂತಹ ಪ್ರದೇಶ ದಲ್ಲಿ ತನ್ನಷ್ಟಕ್ಕೆ ತಾನೇ ಶೂನ್ಯ ದಿಟ್ಟಿಸುತ್ತಾ ಕುಳಿತ ಮಗ ಕಂಡಿದ್ದಾನೆ. ಆ ಕ್ಷಣದ ಆನಂದದ ವರ್ಣನೆಗೆ ಪದಗಳಿಲ್ಲ.
"ಏನೋ ದೇವರು ದೊಡ್ಡವನು ಸಾರ್. ಮಗ ಕೈಗೆ ಸಿಕ್ಕ" ಅಂತ ಕಣ್ಣಂಚನ್ನು ಮುಟ್ಟಿಕೊಂಡರು ನನ್ನ ಗೆಳೆಯ.
ಆದರೆ, ಅವತ್ತು ಅವರು ನಮ್ಮ ಮನೆಗೆ ಬಂದದ್ದು ಆ ವಿಷಯ ಹೇಳಲಲ್ಲ. ಅವರು ಬಂದದ್ದು, ನಮ್ಮ ಮಿತ್ರ ಬಳಗದಲ್ಲಿದ್ದ ಯೋಗ ಟೀಚರ್ ಒಬ್ಬರ ಮನೆಗೆರಗಿದ ದುರಂತ ಕಥೆ ಹಂಚಿಕೊಳ್ಳಲು. ಯೋಗ ಟೀಚರ್ ರವರ ಹೆಂಡತಿಗೆ ಸರ್ವಿಕಲ್ ಕ್ಯಾನ್ಸರ್ ಎಂದಿದ್ದರು ಡಾಕ್ಟರ್. ತಕ್ಷಣ ಆಪರೇಷನ್ ಮಾಡಿದರೆ ಎಲ್ಲಾ ಗುಣವಾಗುತ್ತದೆಂದೂ ಹೇಳಿದ್ದರು. ಆಪರೇಷನ್ ಟೇಬಲ್ಲಿನ ಮೇಲೆ ಅವರ ದೇಹವನ್ನು ಬಿಚ್ಚಿ ನೋಡಿದ ಡಾಕ್ಟರ್, ಏನೋ ಮಾಡದೆ ಹಾಗೆ ಹೊಲಿಗೆ ಹಾಕಿ ಹೊರಬಂದು ಹೇಳಿದ್ದು, " ನಾವು ಅಂದು ಕೊಂಡದ್ದಕ್ಕಿಂತ ಹೆಚ್ಚೇ ಬೆಳೆದು ಬಿಟ್ಟಿದೆ ಕ್ಯಾನ್ಸರ್. ಅದು ಹಬ್ಬಿರುವ ಒಳ ಅಂಗಾಂಗ ಗಳೇ ಇಲ್ಲ. ನಮ್ಮಿಂದ ಇನ್ನೇನು ಸಾದ್ಯವಿಲ್ಲ" ಎಂದು ಕೈಚೆಲ್ಲಿದ್ದಾರೆ.
ಅವರಿಗೆ ಹತ್ತನೇ ಕ್ಲಾಸಿನಲ್ಲಿರುವ ಒಬ್ಬಳೇ ಮಗಳು. ತಾಯಿಗೆ ಮಗಳ ಮದುವೆ ನೋಡುವ ಚಿಂತೆ. ದೇವರಿಗೆ ಈ ವಿಷಯ ತಿಳಿಸಬೇಕು. ಪ್ರಾಥನೆ ಒಂದೇ ದಾರಿ.
ಈಗ ತಿರುಗಿ ನೋಡಿದರೆ...ನನ್ನ ಕಷ್ಟ ಯಾವ ಮೂಲೆ...ಹಣ ಕೊರತೆಯ ಕಷ್ಟ..ಕಷ್ಟವೇ ಅಲ್ಲ. ದೇಹದಲ್ಲಿ ಕಸುವಿದ್ದರೆ...ಕೊಂಚ ಸಮಯ ದಕ್ಕಿದರೇ, ನಾವೂ ಸಂಪಾದಿಸಬಹುದು. ಆದರೆ... ಯಾವ ಹಣವೂ ಪರಿಹರಿಸದ ಕಷ್ಟಗಳೂ ಇದೆಯಲ್ಲಾ...ಅದು ಯಾರಿಗೂ ಬೇಡ ದೇವರೇ...

4 comments:

Chamaraj Savadi said...

ತುಂಬ ಚೆನ್ನಾಗಿ ಬರೆದಿದ್ದೀರಿ. ನಾನು ಕಂಡ, ಅನುಭವಿಸಿದ ಇಂಥ ಹಲವಾರು ಘಟನೆಗಳು ನೆನಪಾದವು.

ಹೋಲಿಸಿ ನೋಡುವ ಗುಣವಿದ್ದರೆ, ಅದನ್ನು ಸರಿಯಾಗಿ ಬಳಸಿಕೊಂಡರೆ, ನೆಮ್ಮದಿ ನಿಜಕ್ಕೂ ಶಾಶ್ವತವಾಗುತ್ತದೆ.

ಸೊಗಸಾದ ಬರವಣಿಗೆ. ಧನ್ಯವಾದಗಳು.

- ಚಾಮರಾಜ ಸವಡಿ
http://chamarajsavadi.blogspot.com

Mahen said...

ಸವಡಿ ಅವರೆ...ಇಂಥಹ ವಿಷಯ ಬರೆದು...ಅದು ಚೆನ್ನಾಗಿ ಬರೆದಿದ್ದಾನೆ ಅನ್ನಿಸಿಕೊಳ್ಳೂವುದಕ್ಕೂ ಮುಜುಗರವಾಗುತ್ತದೆ ಸರ್. ಮನಸ್ಸಿನಲ್ಲಿ ಬಹಳ ದಿನ ಇದ್ದದ್ದನ್ನು ಹೊರಹಾಕಲೆಂದು ಇಲ್ಲಿ ಹಂಚಿಕೊಂಡೆ. ಇದನ್ನು ಓದಿದ ಕೆಲವರಾದರು ಒಂದರೆಕ್ಷಣ ಪ್ರಾರ್ಥಿಸಿದರೆ ಏನಾದರು ಪವಾಡ ವಾಗಬಹುದು ಯಾರಿಗೆ ಗೊತ್ತು.
ದುಃಖ ಹಂಚಿಕೊಂಡದ್ದಕ್ಕೆ ಧನ್ಯವಾದ.

ಶರಶ್ಚಂದ್ರ ಕಲ್ಮನೆ said...

ಮಹೇನ್,
ಭಾವಪೂರ್ಣ ಬರಹ. ನಿಜ ಹೇಳಬೇಕೆಂದರೆ ಈ ಕ್ಷಣದಲ್ಲಿ ಈ ಬರಹದ ಬಗ್ಗೆ ಏನೂ ಪ್ರತಿಕ್ರಿಯಿಸಲು ನನಗೆ ಆಗುತ್ತಿಲ್ಲ. ನಾವು ನಮ್ಮ ಒಂದು ಸಣ್ಣ ಕಷ್ಟವನ್ನೇ ದೊಡ್ಡದು ಎಂದು ತಿಳಿಯುತ್ತೇವೆ. ಪ್ರಪಂಚದ ಹಲವು ಮಗ್ಗುಲುಗಳಲ್ಲಿ ಹೇಳಲಾರದ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಜನರು. ಬರುವ ಹೊಸ ವರುಷವೂ ಎಲ್ಲರಿಗೂ ಒಳ್ಳೆಯದನ್ನು ತರಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ. ನಿಮಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.

ಮನಮುಕ್ತಾ said...

ಓದಿ ಮನಸ್ಸು ಭಾರವಾಯಿತು...
ಎಲ್ಲರಿಗೂ ದೇವರ ಅನುಗ್ರಹ ದೊರಕಲಿ ಎ೦ದು ಭಗವ೦ತನಲ್ಲಿ ಪ್ರಾರ್ಥಿಸುತ್ತೇನೆ.

Related Posts with Thumbnails