




ನಾನು ಈ ಹುಡುಗಿ ಬಗ್ಗೆ ಅಷ್ಟು ತಲೆ ಕೆಡಿಸಿ ಕೊಳ್ತೀನಿ ಅಂದುಕೊಂಡಿರಲಿಲ್ಲ. ಅವಳು ನನ್ನ ಜೀವನದಲ್ಲಿ ಬಂದು, ನಾಳೆ ಒಂದನೇ ತಾರೀಖಿಗೆ ಎಂಟು ವರ್ಷತುಂಬತ್ತೆ, . ಬಂದ ಮರುಕ್ಷಣದಿಂದ ನನ್ನ ಎಲ್ಲಾ ಯೋಚನಾ ಲಹರಿಯನ್ನು ಅಲ್ಲಲ್ಲಿ ಆವರಿಸಿಕೊಂಡು ನಾನಿದ್ದೀನಿ ಅಂತ ಅಲ್ಲಲ್ಲಿ ಹೇಳಿ ನನ್ನನ್ನು ತನ್ನ ಜೋತೆಗೇ ಬೆಳೆಸಿದ್ದಾಳೆ ನನ್ನ ಮಗಳು, ಸಿಮ್ರನ್
ಒಬ್ಬ ಮಗಳು ಹುಟ್ಟಿದ ದಿನವೇ ಒಬ್ಬ ತಂದೆಯೂ ಹುಟ್ಟುತ್ತಾನಂತೆ. ಇದು ಬಹಳ ದಿನಗಳವರೆಗೆ ನನಿಗೆ ಗೊತ್ತಿರಲಿಲ್ಲ.ಹೀಗೆ ಚಳಿತುಂಬಿದ ಡಿಸಂಬರಿನ ಕೊನೆಯದಿನ, ಇನ್ನೂ ಏಳುದಿನ ಇತ್ತು ನನ್ನ ಹೆಂಡತಿಯ ಹೆರಿಗೆಗೆ. ವೈದ್ಯರು ಹಾಗೆ ಹೇಳಿದ್ದರು. ಅವಳು ಅವರ ಅಕ್ಕನ ಮನೆಯಲ್ಲಿದ್ದಳು. ಏಳುದಿನ ಬಿಟ್ಟು ಹೋಗಬೇಕಿದ್ದ ನಾನು, ಹಳೇ ವರ್ಷದ ಕೋನೆಯದಿನದ ಕಾರಣ, ಅವಳ ಜೋತೆಯೇ ಕಾಲ ಕಳೆಯುವ ಅಂತ ಹೇಳಿ ಅವರ ಮನೆಗೆ ಹೋದೆ. ಹೋದ ಸಂಜೆ, ಅವಳಿಗೆ ಸಣ್ಣ ಸಣ್ಣ ಬಯಕೆ. "ಮೀನು ತಿನ್ನಬೇಕು ಅನ್ನಿಸುತ್ತೆ ರೀ ತರುತ್ತಿರ?" ಅಂದಳು. ಮೊದಲೇ ಗಿಡ್ಡ ಹುಡುಗಿ, ತುಂಬು ಗರ್ಭಿಣಿ ಆದಾಗಲಂತೂ, ಯಾವುದೋ ಪುಟ್ಟ ಪೋರ ಅಳತೆ ಮೀರಿ ಊದಿದ ಬಲೂನಿನ ಹಾಗಾಗಿದ್ದಳು. ಮುದ್ದು ಮುದ್ದಾಗಿದ್ದ ಅವಳು, ನನ್ನ ಬದುಕಿಗೇನೋ ತರುತ್ತಾಳೆ ಅನ್ನೋ ಅವ್ಯಕ್ತ ಸಂಭ್ರಮ. "ಅದಕ್ಕೇನಂತೆ ತರುತ್ತೇನೆ" ಅಂತ ಹೊರಟು ಕೈಗೆ ಸಿಕ್ಕ ಮೀನುಗಳ ವೈರೈಟಿಯನ್ನೇ ತಂದೆ. ಅವರ ಅಕ್ಕನ ಮನೆಯಲ್ಲಿ ಮೀನಿನ ಪದಾರ್ಥ ಮಾಡುವವರಾರು ಇರಲ್ಲಿಲ್ಲ. ಅವರಿಗೆ ಅಭ್ಯಾಸವಿಲ್ಲ. ಸರಿ ನಾನೆ ಎಲ್ಲಾವನ್ನೂ ಮಾಡಲು ಶುರುಮಾಡಿದೆ. ನಿಲ್ಲಲೂ ಕಷ್ಟವಾದರೂ, ದಪ್ಪ ದಪ್ಪ ಹೆಜ್ಜೆಯನ್ನು ನಿಧಾನವಾಗಿ ಇಟ್ಟು, ಆಗಾಗ ಕೈಗಳನ್ನು ಸೊಂಟದ ಹಿಂದಿಟ್ಟು ಸಾವರಿಸಿಕೊಳ್ಳುತ್ತಾ, ನನ್ನ ಹೆಂಡತಿಯೂ, ಈರುಳ್ಳೀ ಹೆಚ್ಚುವುದೋ, ಮತ್ತೊಂದೂ ಅಂತ ಚಿಕ್ಕ ಪುಟ್ಟ ಸಹಾಯ ಮಾಡುತಿದ್ದಳು. ತುಂಬು ಹೊಳಪಿನ ಮುಖ ನೋಡಲಿಕ್ಕೇ ಚಂದ.
ಅಂದು ಮನಸಾರೆ ಊಟ ಮಾಡಿ ಎಲ್ಲರೂ ಮಾತಾಡುತ್ತಾ ಕುಳಿತಿದ್ದೆವು. ಮಗು ಗಂಡು ಅಂತ ಒಂದು ಪಂಗಡ ಮತ್ತು ಅವರ ಲೆಕ್ಕಾಚಾರ, ಇಲ್ಲ ಹೆಣ್ಣು ಅಂತ ಮತ್ತೊಂದು ಪಂಗಡ, ಹೀಗೆ ಹನ್ನೆರಡಾಗುವುದನ್ನೆ ಕಾದು ಕುಳಿತಿದ್ದೆವು. ಹೊಸ ವರ್ಷವೂ ಬಂತು, ಯಾಕೂ ಇದ್ದಕಿದ್ದಂತೆ ಸುಸ್ತಾದಂತೆ ಕಂಡ ನನ್ನ ಹೆಂಡತಿ "ನಾನು ಮಲಗುತ್ತೇನೆ" ಅಂತ ಎದ್ದಳು.
ಬೆಳಿಗ್ಗೆ ನಾನು ಕಣ್ಣು ಬಿಟ್ಟದ್ದು ಅವಳ ಅಕ್ಕ ಬಂದು "ಅವಳನ್ನ ಸ್ವಲ್ಪ ಆಸ್ಪತ್ರೆಗೆ ಕರ್ಕೊಂಡ್ ಹೋಗ್ಬೇಕೇನೋ, ಯಾಕೋ ಹೊಟ್ಟೆ ನೋವು ಅಂತಾಳೆ" ಅಂದಾಗ. ನಾನು ಗಾಬರಿ. ಬೇಡ ಅಂದರೊ, ಮೀನು ಅಂತ ಹೇಳಿ ಹೆಚ್ಚು ತಿಂದು ಏನಾದರೂ ತೊಂದರೆ ಆಯಿತಾ? ಅಂತ ದಡ ಬಡಾಯಿಸಿ ಎದ್ದು, ಕಾರಿನಲ್ಲಿ ಆಸ್ಪತ್ರೆಗೆ ಓಡಿದೆವು.
ಅರ್ಧ ಘಂಟೆಯಲ್ಲಿ ನನ್ನ ಹೆಂಡತಿ ಇನ್ನ್ಯಾರದೋ ಪೇಶಂಟ್ ಆದಳು. ಅಲ್ಲಿಂದ ಮುಂದೆ ಎಲ್ಲಾ ಅವರು ಹೇಳಿದ ಹಾಗೆ. ಕೈ ಕೈ ಕಿವುಚಿಯೂ, ಮುಖ ಹಿಂಡಿಯೋ ಎದರು ನಡೆಯುವ ಘಟನೆಗಳನ್ನ ಗಮನಿಸಿ "ದೇವರೇ, ಯಾವುದೇ ಹೆಚ್ಚು ಕಡಿಮೇ ಮಾಡಬೇಡಪ್ಪಾ" ಅನ್ನುವುದಷ್ಟೇ ನನ್ನ ಕೆಲಸವಾಗಿ ಹೋಯಿತು. ಘಳಿಗೆಗೊಮ್ಮೆ ಯಾವುದೋ ಸ್ಕ್ಯಾನು, ಯಾವುದೂ ಔಷದಿ, ಹೀಗೆ ಮದ್ಯ್ಹಾನಃದ ವರೆವಿಗೂ ನಡೆಯಿತು.
ಅಲ್ಲೇ ಯೆಲ್ಲೋ ಮೂಲೆಯಲ್ಲಿ ನನ್ನ ಗೆಳೆಯರಿಗೆಲ್ಲ ಪರಿಸ್ಥಿಯನ್ನು ವಿವರಿಸಿ ಎಸ್ ಎಮ್ ಎಸ್ ಕಳಿಸುತ್ತಿದ್ದ ನನಗೆ " ರೇಣುಕಾ ಅಂತ ಪೇಶಂಟ್ ಕಡೆಯವರು ಯಾರು, ಯಾರಾದ್ರು ಇದ್ದೀರ ಅವರ ಕಡೆಯವರು...ಇದು ಎಮರ್ಜೆನ್ಸಿ" ಅಂತ ಅಂದಿದ್ದು ನಿಧಾನವಾಗಿ ಆವರಿಸಿ ಬೆಚ್ಚಿಸಿ, ಬೆನ್ನು ಮೂಳೆಯನ್ನು ತಣ್ಣಗಾಗಿಸುವ ಚಳಿಗಾಳಿಯಂತೆ ಅಪ್ಪಳಿಸಿತು. ಗರಬಡಿಸಿ..."ನಾನು ಅವರ ಹಸ್ಬೆಂಡ್ ಹೇಳಿ" ಅಂದೆ. ಡಾಕ್ಟರ್ ಬಂದು, "ನೋಡಿ, ಸಣ್ಣ ಕಾಂಪ್ಲೀಕೇಷನ್ ಆಗಿದೆ, ಮಗು ಹೊಟ್ಟೆಯಲ್ಲಿ ಉಸಿರಾಡ್ತಾಇಲ್ಲಾ ಅನ್ನಿಸುತ್ತೆ. ಹಾಗೂ, ಅದರ ಪೊಷಿಶನ್ ಸ್ವಲ್ಪ ತಿರುಗಿರುವ ಹಾಗೂ ಇದೆ, ಸಿ ಸೆಕ್ಷನ್ ಮಾಡ್ಬೇಕಾಗುತ್ತೆ. ಕೆಲವು ಪೇಪರ್ ಗಳಿಗೆ ನಿಮ್ಮ ಸಹಿ ಬೇಕು ದಯವಿಟ್ಟು ಫಾರ್ಮಾಲಿಟಿಯನ್ನು ಪೂರ್ತಿಮಾಡಿ ನಾನು ಆಪ್ರೇಷನ್ನಿಗೆ ತಯಾರು ಮಾಡ್ತೀನಿ" ಅಂದು ಹೊರಟರು.
ಮೊಟ್ಟ ಮೊದಲ ಬಾರಿ ನನ್ನ ಜವಾಬುದಾರಿಯ ಅರಿವಾಯ್ತು ನನಗೆ. ಇನ್ನೋಬ್ಬರ ಜೀವಕ್ಕೆ ನಾನು ವಾರಸುದಾರ ಅನ್ನುವ ಸತ್ಯ ಆ ಕ್ಷಣದಲ್ಲಿ ನನ್ನ ಮಾನಸಿಕ ಬೆಳವಣಿಗೆಯ ಮರ ಟಿಸಿಲೋಡೆದು ದೊಡ್ಡದಾಗುತ್ತಿರುವ ಅನುಭವ ನೀಡಿತು. ಎಲ್ಲೋ ಹುಟ್ಟಿದ, ಯಾರದೋ ಕಣ್ಮಣಿ ಯಾಗಿದ್ದ ಹೆಣ್ಣುಮಗಳ ಜೀವ ಉಳಿಸುವ ಅಥವ ಉಳಿಸುವ ಆಟದಲ್ಲಿ ಅಳಿಸಲೂ ಬಹುದಾದ ಜೂಜಿಗೆ ನನ್ನ ಸಹಿಯ ಒಪ್ಪಿಗೆ, ಹೇಗಪ್ಪ ಇದು ಸಾದ್ಯ ಅನ್ನಿಸಿತು.
ಸ್ಟ್ರೆಚರ್ ಮೇಲೆ ಶಾಂತವಾಗಿ ಮಲಗಿದ್ದ ನನ್ನ ಹೆಂಡತಿ ನನ್ನ ಕೈ ಹಿಡಿದು ನನಗೇ ಸಮಾಧಾನ ಮಾಡಿದಳು. "ಏನಾಗಲ್ಲ ಬಿಡ್ರಿ, ಭಯ ಪಡಬೇಡಿ" ಆಂದು ಆಪರೇಷನ್ ತೇಟರಿಗೆ ಹೊರಟಳು. ಮುಂದಿನ ಕೆಲವು ಘಂಟೆಗಳು, ಕಾಮದ ಮೇಲೆ ಜಿಗುಪ್ಸೆ ಹುಟ್ಟಿಸುವಂತಹ ಕಾತರದ ಕ್ಷಣಗಳು. ಅಷ್ಟರಲ್ಲಿ ಒಬ್ಬಬ್ಬರಾಗಿ ನೆಂಟರೆಲ್ಲಾ ಸೇರಿಯಾಗಿತ್ತು. ಎಲ್ಲಾ ಬಂದು ಸಮಾಧಾನ, ಕಂಗ್ರಾಟ್ಸು ಮಾಡಿ ಹುರಿದುಂಬಿಸುತಿದ್ದರು.
ಅಪರೇಷನ್ ತಿಯೇಟರನ ಅಂತ್ಯವಿಲ್ಲದ ಕಾರೀಡಾರಿನ ಯಾವುದೋ ಒಂದು ಕೊನೆಯ, ಮರದ ಬಾಗಿಲನ, ಮದ್ಯಕಿಂತ ತುಸು ಎತ್ತರದಲ್ಲಿದ್ದ, ಸಣ್ಣ ಗಾಜಿನ ಕಿಂಡಿಯ ದಸೆಯಿಂದ, ಹೊರಗಿದ್ದ ನಮಗೆ, ಒಳಗಿನ ನಿಗೂಡ ಜಗತ್ತಿನ ಚಟುವಟಿಕೆಗಳ ಅಷ್ಪಶ್ಟ ದರ್ಶನ. ಯಾರೊ ನೀಲಿ ಬಣ್ಣದ ಬಟ್ಟೆ ತೊಟ್ಟು ಅಚೀಂದ ಈಚೆಗೆ ಹೋಗುವಾಗ "ಅವರು ನರ್ಸು, ಆಗ ಹೋದವರು ಡಾಕ್ಟರು" ಹೀಗೆ ಗುರುತೇ ಸಿಗದ ಮುಖಗಳನ್ನು ಗುರುತಿಸಲು ಪ್ರಯತ್ನಿಸಿ, ಹಾಗೆ ಗುರುತು ಸಿಕ್ಕವರು ಆ ಕ್ಷಣ ದಲ್ಲಿ ಅವರು ಅಲ್ಲಿ ಮಾಡುತಿದ್ದ ಕ್ರಿಯೆಗಳಿಗೆ ನಮ್ಮದೇ ಅರ್ಥ ಕಲ್ಪಿಸಿ, ಈಗ ಬರಬಹುದು ಆಗ ಬರಬಹುದು ಅಂತ ಕಾಯುತ್ತಾ ಚಡಪಡಿಸುತ್ತಿದ್ದೆವು.
ತುಸು ನಿಶಬ್ಧದ ನಂತರ, ಒಂದು ಸ್ಟೀಲ್ ಬಟ್ಟಲಿನಂತಹುದರಲ್ಲಿ ಏನನ್ನೋ ತಂದು ಹೊರಗಿಟ್ಟರು ನರ್ಸು. ಪುನಃ, ಏನನ್ನೋ ಮರೆತಂತೆ ಒಳಹೋದಳು.
ಆ ಅಗಲವಾದ ಬಟ್ಟಲನ್ನೇ ಗಮನಿಸುತ್ತಿದ್ದ ನನ್ನ ಕಣ್ಣುಗಳನ್ನು ತಟ್ಟನೆ ಅರಳಿಸಿದ್ದು ಸಣ್ಣಗೆ ಅಲುಗಾಡುತಿದ್ದ ಪುಟ್ಟ ಪಾದ. ತಲೆ ನನ್ನ ಕಡೆಗಿದ್ದುದ್ದರಿಂದ ಪಾದದ ಕುಡಿಯಷ್ಟೆ, ಮಗು ಕಾಲು ಆಡಿಸಿದಾಗ ಕಾಣುತಿತ್ತು. ಮೈ ಜುಮ್ ಅಂತು.
ಈಗ ಇನ್ನೊಂದು ಸಮಸ್ಯ, ಜೀವನವೆಲ್ಲಾ ನನ್ನೊಂದಿಗಿರುವ ಈ ಮಗು ತುಸು ದೂರದಲ್ಲಿದ್ದರೂ ಅದು ಗಂಡೋ, ಹೆಣ್ಣೊ ಗೊತ್ತಿರಲಿಲ್ಲ. ಅಷ್ಟರಲ್ಲಿ, ಸ್ಟ್ರೆಚರ್ ತಳ್ಳಿಕೊಂಡು ನರ್ಸ್ ಮತ್ತು ಡಾಕ್ಟರ್ ಇಬ್ಬರೂ ಹೊರಬಂದರು. ಹಸಿರು ಬಣ್ಣದ ಹೊದಿಕೆ ಹೊದ್ದಿಸದ್ದ ನನ್ನ ಹೆಂಡತಿ, ಮೈಗೆಲ್ಲಾ ಯಾವುದಾವುದೋ ಪೈಪ್ ಗಳನ್ನು ಲಗತ್ತಿಸಿಕೋಂದು ತೇಲುತ್ತಾ ಬಂದಳು.
"ಜೋರಾಗಿ ಮಾತಾಡ್ಸಿ ಮಾತಾಡ್ತಾರೆ, ಈಗ ತಾನೆ ಅನ್ತೇಶಿಯದಿಂದ ಹೊರಗೆ ಬರ್ತಾಇದ್ದಾರೆ. ನೀವೇ ಹೇಳಿ ಹೆಣ್ಣು ಮಗು ಅಂತ" ಅಂದ್ರು ಡಾಕ್ಟ್ರು.
ರೇಣುವನ್ನು ತುಸು ಅಲುಗಾಡಿಸಿ "ಹೇಗಿದ್ದೀಯ, ನೋವಾ?" ಅಂದೆ. ಮಂಪರಿನಲ್ಲಿದ್ದ ಅವಳು "ಏನಾಯಿತು?" ಅಂದಳು "ನಮ್ಮಮ್ಮನೇ ಬಂದಿದಾರೆ ಅನ್ಸುತ್ತೆ, ನಿನಗೆ ಅತ್ತೆ ಇರಲಿಲ್ಲವಲ್ಲ ಅದಿಕ್ಕೆ" ಅಂದು ನಕ್ಕೆ. ಸಣ್ಣಗೆ ಕಣ್ಣು ತೇಲಿಸಿ ಪುನಃ ಮಂಪರಾದಳು.
ಅವತ್ತು ತಾರೀಖು 01-01-01 :)
Happy Birthday Simren
from Pappa.
2 comments:
idu avalu odabayku..:) long live blogspot
>> ಆ ಅಗಲವಾದ ಬಟ್ಟಲನ್ನೇ ಗಮನಿಸುತ್ತಿದ್ದ ನನ್ನ ಕಣ್ಣುಗಳನ್ನು ತಟ್ಟನೆ ಅರಳಿಸಿದ್ದು ಸಣ್ಣಗೆ ಅಲುಗಾಡುತಿದ್ದ ಪುಟ್ಟ ಪಾದ. ತಲೆ ನನ್ನ ಕಡೆಗಿದ್ದುದ್ದರಿಂದ ಪಾದದ ಕುಡಿಯಷ್ಟೆ, ಮಗು ಕಾಲು ಆಡಿಸಿದಾಗ ಕಾಣುತಿತ್ತು. ಮೈ ಜುಮ್ ಅಂತು.
ಓದುತ್ತ ಓದುತ್ತ ಕಣ್ಣು ಮಂಜಾಯಿತು ಸಿಮ್ಮಾ.
Post a Comment