Wednesday, November 26, 2008

ಪುಸ್ತಕ ಪುರಾಣ

ಸುಮಾರು ಪುಸ್ತಕಗಳನ್ನ ತಂದು ಇಟ್ಟುಕೊಂಡಿದ್ದೆ ಓದಲಿಕ್ಕೆ. ವ್ಯಾಸರ "ಸ್ನಾನ", ಜೋಗಿಯವರ ಎರಡು ಹೊಸ ಪುಸ್ತಕಗಳಾದ "ಕಾಡು ಹಾದಿಯ ಕತೆಗಳು" ಮತ್ತು "ಯಾಮಿನಿ" ಓಶೊನ "ಉಮೆನ್" ಬೈರಪ್ಪನವರ "ಧರ್ಮಶ್ರೀ"
ಆಮೇಲೆ ಎರಡು - ಮೂರು ಇಂಗ್ಳಿಷ್ ಪುಸ್ತಕಗಳಾದ "ಕೈಟ್ ರನ್ನರ್" "ಶಾಂತರಾಮ್" ಮತ್ತು ಆರ್ ಕೆ ನಾರಾಯಣರ " ಮಾಲ್ಗುಡಿ ಡೇಸ್".
ಎಲ್ಲೆಲ್ಲೊ ಹೋದಾಗ ಹಾಗೆ ಕೈಯಲ್ಲಿ ಹಿಡಿದುಕೋಂಡು ಬಂದು ಕೋಣೇ ತುಂಬಿಕೊಂಡಿದ್ದೆ.
ಮೊದಲು ಶುರು ಮಾಡಿದ್ದು "ಕೈಟ್ ರನ್ನರ್", ಬೇಗ ಓದಿಸಿಕೊಂಡು ಹೋಗಿ ತಕ್ಕ ಮಟ್ಟಗಿನ ಕುಷಿಕೊಟ್ಟ ಪುಸ್ತಕ.
ಯುದ್ಧ ನಮಗೆ ಅಂತಹ ಹತ್ತಿರದ ವಿಷಯ ಅಲ್ಲ. ಅದರಲ್ಲೂ ದಕ್ಷಿಣ ಭಾರತದವರಿಗೆ ಯುದ್ಧ ಅಂದ್ರೆ ಅದೆಲ್ಲೂ ಕಶ್ಮೀರದ ಗಡಿಯಲ್ಲೆಲ್ಲೂ, ನಡಿಯೂ ನಿತ್ಯದ ಗೋಳು ಅಷ್ಟೆ. ಆದ್ರೆ ಅಫಘನಿಸ್ಥಾನದಲ್ಲಿ ಅದು ನಿತ್ಯ ಏಕಾದಶಿ. ಇದ್ದ ದೌಲತ್ತಿನಲ್ಲಿ ಲಾರ್ಡ್ಗ್ ಗಿರಿಯನ್ನು ಬೆಳೆಸಿಕೊಂಡು ದೊಡ್ಡ ಬಂಗಲೆಯಲ್ಲಿ ಆರಾಮವಾಗಿದ್ದ ಒಬ್ಬ ಶ್ರೀಮಂತನ ಮನೆಯಿಂದ ಕತೆ ಶುರು. ಅವನ ಮತ್ತು ಅವನ ಮಗನ ಸಂಭಂದ, ನಡುವಿನಲ್ಲಿಯೇ, ಶ್ರೀಮಂತನ ಅನೈತಿಕ [ ಸಂಬಂಧ ಆ ಮಟ್ಟಕ್ಕೆ ಬೆಳೀಬೇಕಾದ್ರೆ ಅದನ್ನ ಅನೈತಿಕ ಅನ್ನುವುದು ಹೇಗೆ ಅನ್ನುವುದು ನನ್ನನ್ನ ಆಗಾಗ ಕಾಡುವ ವಿಷಯ] ಸಂಬಂದದಲ್ಲಿ ಹುಟ್ಟಿದ ಕೆಲಸದ ಹುಡುಗನೊಂದಿಗೆ, ಶ್ರೀಮಂತನ ಮತ್ತು ಅವನ ನೈತಿಕ ಮಗನ,ಹೇಳಿಕೊಳ್ಳಲಾಗದ, ಒಪ್ಪಿಕೊಳ್ಳಲಾಗದ ಸಂಬಂಧದ, ಒಳಗಿನ ಗುದುಗುದಿ. ಮುಂದೆ ಯುದ್ಧ ಶುರು. ಅಲ್ಲಿಂದ ಎಲ್ಲಾ ಅನಾಹುತ, ಹೀಗೆ ಮನ ಮುಟ್ಟುವ ಹಾಗೆ ನಮ್ಮನ್ನ ಕಟ್ಟಿ ಹಿಡಿದು ಕೊಂಡೊಯುತ್ತಾನೆ ಲೇಖಕ.


ಕಂಡದ್ದು, ಅನುಭವಿಸಿದ್ದು, ಮನಸಿಗೆ ತಟ್ಟಿದ್ದನ್ನು, ಸುಂದರ, ಸರಳವಾಗಿ ಪ್ರಾಮಾಣಿಕವಾಗಿ, ಅವರಿಗಷ್ಟೇ ಸಿದ್ಧಿಸಿರುವ ಕತೆಹೇಳುವ ಕಲೆಯಿಂದ, ಪರಿಯಿಂದ, ಲೇಖಕ ಹೇಳುತ್ತಾ ಹೋಗುವ ಕತೆ ಬಹಳ ಹತ್ತಿರವಾಗುತ್ತೆ. ಕತೆ ಹೇಳಲಿಕ್ಕೇ "ಅನುಕೂಲಕರ" ಕಲ್ಪನೆಗೆ ಮೊರೆಹೋಗಿ, ವಿಮರ್ಶಕರಿಗೆ ಹಿಡಿಸುವಂತಹ ಪಾತ್ರಗಳನ್ನು ಶೃಷ್ಟಿ ಮಾಡಿ, ಆ ಪಾತ್ರಗಳ ಬಾಯಲ್ಲಿ ಗ್ಲೊಬಲ್ ವಾರ್ಮೀಂಗ್ ನಿಂದ ಹಿಡಿದು, ಬಾಲ ಕಾರ್ಮಿಕರ ಪರಿಸ್ಥಿತಿಯವರೆಗೆ ಲೇಖಕರಿಗೆ ಅರಿವಿರುವ "ಗ್ಯಾನ್" ಗಳನ್ನು ಹೇಳುವ ಬಹಳಷ್ಟು ಇತ್ತೀಚಿನವರಲ್ಲಿ "ಕೈಟ್ ರನ್ನರ್" ನ "ಖಲೀದ್ ಹುಸೈನಿ" ಆತ್ಮೀಯವಾಗುತ್ತಾನೆ.


ನಂತರ ಕೈಹಿಡಿದದ್ದು "ಶಾಂತರಾಮ್". ಈಗಲೂ ಮೈ ಉರಿಯುತ್ತಾ ಇದೆ, "ಹ್ಯಾವ್ ಯು ರೆಡ್ ಶಾಂತರಾಮ್? ಹೊ ನೊ, ಹೌ ಕಮ್?" ಅಂತ ಉದ್ಗರಿಸಿ, ಆ ಪುಸ್ತಕ ಓದದೇ ಇಲ್ಲದವರನ್ನೆಲ್ಲಾ ಯಾವುದೋ ಉಪ ಪಂಗಡದಲ್ಲಿ ಸರಕಾರದವರು ಸೇರಿಸಿಬಿಡುತ್ತಾರೆ, ಟ್ಯಾಕ್ಸ್ ಹಾಕುತ್ತಾರೆ ಅನ್ನೊಹಾಗೆ ಆಡಿದ ನನ ಆಂಗ್ಲ ಪ್ರಿಯ, ಮೆಟ್ರೋಸೆಕ್ಶುಯಲ್ ಗೆಳೆಯರೆಲ್ಲರ ಮೇಲೆ ಮೈ ಉರಿಯುವಷ್ಟು ಕೋಪ ಬರುತ್ತಿದೆ. ಕೊಟ್ಟ ಕಾಸಿಗೆ ಮೋಸ ಆಗಬಾರದು ಅಂತ ಆಗಾಗ ಅ ಪುಸ್ತಕ ಹಿಡಿದು ಓದಲಿಕ್ಕೆ ಶುರು ಮಾಡಿದರೂ, ಎರಡು ಪೇಜ್ ಗಳ ಮೇಲೆ ಓದಿಸಿಕೊಳ್ಳದೇ ಹಿಂಸೆ ಮಾಡುತ್ತೆ. ರಾಮಾಯಣ ದರ್ಶನಂ ನ ಎರಡಷ್ಟರಿರುವ ಈ ಪುಸ್ತಕ ದ ಮದ್ಯಭಾಗಕ್ಕೆ ಬಂದಿದ್ದರೂ, ಹೇಳಿಕೊಳ್ಳುವಂತಹದ್ದೇನಿಲ್ಲ. ಮುಂಬೈನ ಹಳೆ ಮುಸ್ಲಿಂ ಖೋಲಿಗಳನ್ನು ಕಂಡರಿಯದ ಈ ಆಷ್ಟ್ರೇಲಿಯದ ಅಪರಾದಿ [ಲೇಖಕ : ಗ್ರೆಗೊರಿ ಡೇವಿಡ್ ರಾಬರ್ಟ್ಸ್] ಎರಡು ಅಥವ ಮೋರು ಪೇಜುಗಳಲ್ಲಿ ಬರೀ ಮನೆಯ ಮುಂಬದಿಯನ್ನು ವಿವರಿಸಿ, ಯಾವುದೋ ಮೇಸ್ತ್ರೀ ವರದಿ ಒಪ್ಪಿಸುವಂತೆ ತಲೆ ಚಿಟ್ಟು ಹಿಡಿಸುತ್ತಾನೆ. ಪಿಚ್ಚರ್ ನೋಡುವಾಗ ಫಾಸ್ಟ್ ಫಾರ್ವ್‍ಡ್ ಮಾಡುವ ಹಾಗೆ ನಾನು ಅವನು ಚಿಕ್ಕ ಚಿಕ್ಕ ವಸ್ತುಗಳ ವಿವರಣೆಗೆ ನಿಂತಾಗಲೆಲ್ಲಾ ಪೇಜುಗಳನ್ನು ಎಗರಿಸಿದರೂ ಇನ್ನೊ ಮುಗಿದಿಲ್ಲ. ಕೊಂಡ ಪಾಪಕ್ಕೆ ಓದಿ ಪರಿಹಾರ ಅಂತ ಓದುತಾಇದ್ದೇನೆ. ನಿಮಿಗೂ ಹೀಗೆ ಅನ್ನಿಸಿತಾ?



ಇವನ ಬರವಣಿಗೆ ಯಲ್ಲಿ ನಾಲಿಗೆ[?] ಕೆಡಿಸಿಕೊಂಡಂತಾಗಿ ನಾನು ಮಾಡಿದ ಕೆಲಸ ವೆಂದರೇ, ತೇಜಸ್ವಿಯವರ "ಕರ್ವಾಲೋ" ಕೊಂಡು ತಂದು ಬಿಡದೇ ಒದಿದ್ದು. ಪುಣ್ಯಾತ್ಮ, ಯಾವಾಗಲೂ ಕೈ ಹಿಡಿಯುತ್ತಾರೆ. ಏನ್ ಬರೀತಾರೆ ರೀ, ಯಾರೋ ಗೆಳೆಯನ ಜೊತೆ ಒಂದು ಲಾಂಗ್ ಡ್ರೈವ್ ನಲ್ಲಿ ಹರಟೆ ಹೊಡೆದ ಹಾಗೆ ಇದ್ದದ್ದನ್ನು, ಕಂಡದ್ದನ್ನು, ಅನುಭವಿಸದ್ದನ್ನು ಯಾವುದೇ "ಸ್ಕೂಲ್ ಒಫ್ ತಾಟ್"ಗೆ ಅಂಟಿಕೋಳ್ಳದೇ ಸುಲಲಿತವಾಗಿ ಬರೆದು ಅವರು ಇದ್ದಾಗ ನಾವು ಹುಟ್ಟಿದ್ದು ಪುಣ್ಯ ಅನ್ನುವ ಹಾಗೆ ಮಾಡುತ್ತಾರೆ. ಕತೆ ಹೇಳ್ತಾನೆ ಪರಿಸರದ ಬಗ್ಗೆ ಅವರ ಕನ್‍ಸರ್ನ್ ಗಳನ್ನ ನಮಗೇ ಗೊತ್ತಿಲ್ಲದೇ ನಮ್ಮಾದಾಗಿಸುತ್ತಾರೆ.

ಅದಾದ ನಂತರ, ಜೋಗಿಯವರ ಎರಡು ಪುಸ್ತಕ. "ಕಾಡು ಹಾದಿಯ ಕತೆಗಳು" ಮೊದಲು ಓದಿದ್ದು. ಹಾದರ, ಮುಟ್ಟು, ಮುದಿ, ಮೈಲಿಗೆ, ಹೆಣ, ಸಾವು ಇವಿಷ್ಟು ವಿಷಯಗಳನ್ನು ಇಟ್ಟುಕೊಂಡು, ಎಲ್ಲಾ ವಿಮರ್ಶಕರ ಮನಸ್ಥಿತಿಯನ್ನು ಅರಿತುಕೊಂಡು, ಅವರಿಗೆ ಹೇಗೆ ಬರೆದರೆ ನಮ್ಮ ಸ್ಥಾನ ಮಾನ ಏರಬಹುದೆಂಬ ಲೆಕ್ಕಾಚ್ಚಾರಗಳನ್ನು ಮೊದಲೇ ಚಾರ್ಟ್ ಮಾಡಿಕೊಂಡು ಬರೆದಿರೋ ಹಾಗಿದೆ. ಅತಿಯಾದ ಲೆಫ್ಟಿಸಂ, ಜೋಗಿ ಕತೆಗಳ ಜೋಗಿ ಇವರೇನ ಅನ್ನು ವಷ್ಟು ಹೆದರಿಕೆ ಆಗಿ ಹೋಯಿತು. ಇನ್ನು "ಯಾಮಿನಿ" ಯಾವುದೋ ಕಾಲ್ಪನಿಕ ಕನವರಿಕೆ. ಪುನಃ ಬಾಯಿ ಕೆಟ್ಟಿದೆ.
ಈ ಸರಿ ಊರು ಬಿಟ್ಟು ಎಲ್ಲಾದ್ರು ಹೋಗಣ ಅಂತಾಇದ್ದೀನಿ. ಜೋಗ ಕರಿಯುತ್ತಾ ಇದೆ. ನೋಡಣ...ಗೋವ ಜಾಸ್ತಿ ಸೆಳೆಯುತ್ತಾ ಅಂತ.

[ವಿ ಸೊ : ನಾನು ವಿಮರ್ಶಕನಲ್ಲ, ಮೇಲೆ ಬರೆದಿರುವುದೆಲ್ಲಾ ನನ್ನ ವಯುಕ್ತಿಕ ಅಭಿಪ್ರಾಯಗಳು. ಈ ಅಭಿಪ್ರಾಯಗಳು, ನನ್ನ ಪ್ರಾಪಂಚಿಕ ಜ್ಞಾನ, ಮತ್ತು ಅದನ್ನು ಅನ್ವಯಿಸಿ ನಾನು ಇತರ ಕ್ರಿಯಾತ್ಮಕ ಕ್ರಿಯೆಗಳಿಂದ ಪಡೆಯಬಹುದಾದ, ಅನಂದ, ಆನುಭವದ ಮೇಲೆ ಅವಲಂಬಿತವಾಗಿದೆ. ಇದೇ ಪುಸ್ತಕಗಳು ನಿಮಗೆ ಸರಿ ಅನ್ನಿಸಬಹುದು, ಬಹಳ ಚೆನ್ನಾಗಿದೆ ಅನ್ನಿಸಬಹುದು, ಹಾಗಾಗಿ, ಈ ಪುಸ್ತಕಗಳ ಬಗ್ಗೆ ಯಾವುದೇ ನಿರ್ಧಾರಗಳಿಗೆ ಬರುವುದರ ಮೊದಲು, ನಿಮ್ಮಲ್ಲಿಯೇ ಹೆಚ್ಚು ಓದಿದವರ ಅಭಿಪ್ರಾಯವನ್ನೂ ಕೂಡ ಪಡೆಯಿರೆಂದು ನನ್ನ ಬಿನ್ನಹ. ನಾನು ಏನೋ ಬರೆದು ಅದು ಅಲ್ಪವಾಗಿದ್ದು, ಅದರಿಂದ ಲೇಖಕರಿಗೆ ಅನ್ಯಾಯವಾಗಬಾರದು.]

1 comment:

ವಿ.ರಾ.ಹೆ. said...

i agree with ur view about all those books. even i felt the same.
thanQ

Related Posts with Thumbnails