Thursday, October 30, 2008

"ಇಲ್ಲೇ ಹತ್ತಿರದಲ್ಲಿ ಒಂದು ಬಯಲು ಗಣಪತಿ ದೇವಸ್ಥಾನ ಇದೆ,

ಹೊಸ ಕಾರು ಬಂದಿತ್ತು, ಸ್ವಲ್ಪ ಜೊಶಿತ್ತು, ಸರಿ ಊರಿಗೆ ಹೋಗಿದ್ದವಲ್ಲ? ಇಲ್ಲೆ ಸುತ್ತ ಮುತ್ತ ಎಲ್ಲಾದ್ರು ಹೋಗಿಬರಾಣ ಅಂದೆ ನನ್ನ ಸ್ನೇಹಿತನ ಹತ್ತಿರ. ಅವರಿಗೂ ಹೌದು ಅನ್ನಿಸಿತು ಹೋಗಣ ಅಂದ್ರು. "ಇಲ್ಲೇ ಹತ್ತಿರದಲ್ಲಿ ಒಂದು ಬಯಲು ಗಣಪತಿ ದೇವಸ್ಥಾನ ಇದೆ, ನನಗೂ ಪ್ರಾರ್ಥನೆ ಮಾಡಬೇಕು, ಹೋಗಿ ಬರಾಣ ಬಾ" ಅಂದ್ರು.


ಬೆಳಿಗ್ಗೆ ಎದ್ದವರು, ಮಕ್ಕಳನ್ನೂ ಹೊರಡಿಸಿಕೊಂಡು ಮನೆ ಬಿಡುವಾಗ ಸೂರ್ಯ ಡ್ಯುಟಿಯಲ್ಲಿದ್ದ. ನಾವು ಹೊರಟದ್ದು ಸೌತೆದಡ್ಕಕ್ಕೆ. ಗುಂಡ್ಯದಿಂದ, ದರ್ಮಸ್ಥಳದ ದಾರಿಯಲ್ಲಿ, ಮದ್ಯದಲ್ಲಿ ಎಡಗಡೆಗೆ ಹೋಗುವ ರಸ್ತೆ ಹಿಡಿದು ಹೋರಟರೆ, ಒಂದು ಪುಟ್ಟ ಮೈದಾನದ ಮದ್ಯ ನನ್ನ ಪ್ರಿಯ ದೈವ, ಗಣಪ, ಪ್ರತ್ಯಕ್ಷ. ಸಣ್ಣದೊಂದು ಕಟ್ಟೆ, ಕಟ್ಟೆಯ ನಡುವೆ ಎತ್ತರದಲ್ಲಿನ ಪೀಠದಲ್ಲಿ ಸುಂದರ ವಿಘ್ನವಿನಾರಕ. ತಲೆಯ ಮೇಲೆ ಸೂರೇ ಇಲ್ಲ. ಗುಡಿಯಿಲ್ಲ, ಅಂಗಣವಿಲ್ಲ.

ಅಲ್ಲಿಯ ಸ್ಥಳಪುರಾಣವೆಂದರೇ, ಹಿಂದೆ, ದನಕಾಯುವ ಪುಟ್ಟ ಪುಟ್ಟ ಹುಡುಗರು, ಬಯಲಿನಲ್ಲಿದ್ದ ಈ ಗಣಪತಿ ವಿಗ್ರಹಕ್ಕೆ ಅಲ್ಲೇ ಹೇರಳವಾಗಿ ಬೆಳದಿದ್ದ ಸೌತೇಕಾಯಿಗಳ ನೈವೇದ್ಯ ಮಾಡುತಿದ್ದರಂತೆ. ಏನ್ ಚಂದ ಅಲ್ಲವ? ದಕ್ಷಿಣ ಕನ್ನಡದಲ್ಲಿ ಇಂತಹ, ಆತ್ಮೀಯ ಅನ್ನಿಸುವಂತಹ ಬಹಳ ದೇವಸ್ಥಾನಗಳಿವೆ. ಎಲ್ಲಾದಕ್ಕೂ ಹೋಗಬೇಕೆನಿಸಿತು.
ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ಹರಿಕೆ ತೀರಿಸುವವರೆಲ್ಲಾ ಅವರವರ ಶಕ್ತ್ಯಾನುಸಾರ, ಚಿಕ್ಕ ಅಥವ ದೊಡ್ಡ ಘಂಟೆಗಳನ್ನು ಅರ್ಪಿಸುವುದು. ಹಾಗೆ ಕೊಟ್ಟ ಘಂಟೆಗಳನ್ನೆಲ್ಲಾ ದೇವರ ಸುತ್ತಾ, ಅಂಗಳದಲ್ಲಿ ಕಟ್ಟಿದ್ದಾರೆ. ಪೂಜೆನಡೆದಾಗಲೆಲ್ಲಾ, ಹರಕೆ ತೀರಿದವರ ಘಂಟೆಗಳ ಧನ್ಯಭಾವದ ನಿನಾಧ.
ಪ್ರಸಾದಕ್ಕೆ, ಬೆಲ್ಲಾ ಅವಲಕ್ಕಿ, ನನ್ನನ್ನ ನಂಬಿ, ಅಂತಹ ರುಚಿಯಾದ ಅವಲಕ್ಕಿಯನ್ನ ನಾನೆಲ್ಲೂ ತಿಂದೆ ಇಲ್ಲಾ. ಅಧ್ಬುತವಾದ ದೈವೀಕ ಅವಲಕ್ಕಿ.


ದೇವಸ್ತಾನದಲ್ಲೊಬ್ಬ ಮಾಣಿ, ಪ್ರಸಾದ ಕೊಡಲಿಕ್ಕೆ ಮಾತ್ರ ಹೊರಗೆ ಬರುವ ಈ ಯುವಕ, ಥೇಟ್ ಹಿಂದಿಯ ಶಾಹಿದ್ ಕಪೂರನ ಹಾಗೇ ಇದ್ದಾನೆ. ಅವನದೂ ಒಂದೆರಡು ಫೊಟೊ ತೆಗೆದೆ. ಮಾಡ್ಲಿಂಗೊ ಪಿಕ್ಚರೊ ಮಾಡಬಾರದ ಅಂದಳು ನನ್ನ ಹೆಂಡತಿ, ಈಗೆಷ್ಟೋ ನೆಮ್ಮೆದಿಯಾಗಿದ್ದಾನೆ ಯಾಕೆ ಅವನ ನೆಮ್ಮದಿ ಹಾಳು ಮಾಡೋದು ಬಿಡು ಆಂದೆ.


ಪ್ರಸಾದವಾಗಿ ಊಟವೂ ಇದೆ. ಒಳ್ಳೆ ಬಿಸಿಲಿನಲ್ಲಿ, ಹಸಿದ ಹೊಟ್ಟೆಯಲ್ಲಿ, ಊಟಕ್ಕೆ ಕೂತವರಿಗೆ, ಘಮ್ ಅನ್ನೊ ಸಾಂಬಾರ್ ಬಂತು ನೋಡಿ, ಬಾಯಿಗೆ ಏನೇನೊ ಕಲ್ಪನೆ. ಬಹಳ ರುಚಿಯಾಗಿತ್ತು.
ಇವರ ಪೂಜೆ ವಿಧಾನಗಳೂ ನೊಡಲಿಕ್ಕೆ ಸುಂದರ.
ವಾಪಸ್ ಹೊರಟಾಗ, ಮನೇಗೆ ಹೋಗೂದೋ? ಧರ್ಮಸ್ಥಳಕ್ಕೆ ಹೋಗೂದೋ ಅಂತ ಯೊಚನೆ ಶುರುವಾಯಿತು. ಇರಲಿ, ಧರ್ಮಸ್ಥಳಕ್ಕೆ ಹೋಗೇ ಬರುವ, ಹತ್ತಿರದಲ್ಲೇ ಇದೆ ಅನ್ನಿಸಿ ಹೊರಟ್ವಿ. ದಾರಿಯಲ್ಲಿ ದೊಡ್ಡ ಮಳೆ. ಮಂಜುನಾಥನಿಗೆ ಬಹಳ ಡಿಮಾಂಡು. ಬಯಲಿನ ಗಣಪನ ಹಾಗಲ್ಲ. ಎಲ್ಲೆಲ್ಲೂ ಜನ, ಜಂಗುಳಿ. ದೇವಾಸ್ಥಾನದ ಒಳಗೆ ಹೋಗಿಬರುವ ಸಾದ್ಯತೆಗಳು ಬಹಳ ಕಷ್ಟವಿತ್ತು, ಅಷ್ಟು ಜನ. ಸರಿ, ಇನ್ನೊಮ್ಮೆ ಹೋಗುವ ಅಂತ ಹೇಳಿ, ಹೊರಗಿನಿಂದಲೇ ಕೈಮುಗಿದು, ಅಲ್ಲೇ ನೆಲೆ ನಿಂತಿರುವ ನನ್ನ ಒಬ್ಬ ಗೆಳೆಯನನ್ನು ಭೇಟಿ ಮಾಡಿ ಬಂದೆ. ಕುಶಿ ಆಯಿತು.






No comments:

Related Posts with Thumbnails