Anonymous
@ 4 years: My Daddy can do anything!
7 years: My Dad knows a lot…a whole lot.
8 years: My father does not know quite everything.
12 years: Oh well, naturally Father does not know that either.
14 years: Oh, Father? He is hopelessly old-fashioned.
21 years: Oh, that man-he is out of date!
25 years: He knows a little bit about it, but not much.
30 years: I must find out what Dad thinks about it.
35 years: Before we decide, we will get Dad's idea first.
50 years: What would Dad have thought about that?
60 years: My Dad knew literally everything!
65 years: I wish I could talk it over with Dad once more.
ನನ್ನ ಅಪ್ಪ, ಹಿತ್ತಾಳೆ ತಗಡಿನ ಮೇಲೆ, ಅಂದ ಚಂದದ ಕೆತ್ತನೆ ಮಾಡುತಿದ್ದ. ದೇವರ ಸುತ್ತ ಇಡುತಿದ್ದ ಪ್ರಭಾವಳಿ ಮಾಡುವುದರಲ್ಲಿ ಎತ್ತಿದ ಕೈ. ತಾನಾಯಿತು ತನ್ನ ಉಳಿ ಸುತ್ತಿಗೆಗಳಾಯಿತು. ಘಂಟೆಗಟ್ಟಲೆ ಒಬ್ಬನೇ ಕೂತು ರೇಖೆಗಳಿಗೆ ದಾರಿ ತೋರಿಸಿ, ಲೋಹದ ಮೇಲೆ ಹೂ ಅರಳಿಸುತ್ತಿದ್ದ.
ನನ್ನ ನಾಲ್ಕನೇ ಕ್ಲಾಸಿನಲ್ಲೆ ತಾಯಿ ತೀರಿಹೋದಮೇಲೆ, ಒಬ್ಬನೇ, ತನ್ನದೇ ಪ್ರಪಂಚದಲ್ಲಿ ಸನ್ಯಾಸಿಯ ಹಾಗಿದ್ದ.
ಎಂದಿಗೂ ನೀನು ಹೀಗಾಗಬೇಕು, ಹಾಗಾಗ ಬೇಕು ಎಂದು ಘಂಟೆಗಟ್ಟಲೆ ಭಾಷಣ ಬಿಗಿದವನಲ್ಲ. ಎದೆಯಲ್ಲಿ ಮಗನ ಬಗ್ಗೆ ಏನೇ ಮಮತೆ ಇದ್ದರೂ, ಅಳತೆ ಮೀರಿ ಅದನ್ನು ತೋರಿದವನಲ್ಲ. ನನ್ನ ವಿತ್ರರೆಲ್ಲರ ಅಪ್ಪಂದಿರು, ಅವರನ್ನು ಸ್ಕೂಟರಿನಲ್ಲಿ ಕೂರಿಸಿಕೊಂಡು ಉತ್ತಮ ಕಾಲೇಜಿಗಾಗಿ ಅಲೆದು, ಟ್ಯುಷನ್ನಿಗೆ ಸೇರಿಸಿ, ಸಿ ಇ ಟಿ ಎಂಟೆರೆನ್ಸ್ ಎಗ್ಸಾಮು ಗಳಿಗೆ ಅಪ್ಲಿಕೇಷನ್ ಫಾರಂ ತಂದು ಮಕ್ಕಳ ಭವಿಷ್ಯವನ್ನು ತಮ್ಮ ಪ್ರತಿಷ್ಠೆ ಆಗಿಸಿಕೊಂಡು ತಿರುಗಾಡುತ್ತಿರುವಾಗ, ನನ್ನಪ್ಪ ಮಾಡುತಿದ್ದ ಒಂದೇ ಕೆಲಸ ವೆಂದರೆ ನಾನು ತಂದ ಯಾವುದೋ ಕಾಲೇಜಿನ ಅಪ್ಲಿಕೇಷನ್ನಿಗೆ "ಉಪೇಂದ್ರ ಆಚಾರ್" ಎಂದು ಅಂದವಾಗಿ ಸಹಿ ಹಾಕಿ, ಅದಕ್ಕೆ ಬೇಕಾಗುತಿದ್ದ ಹಣ ನೀಡುತಿದ್ದ.
ಅವನ ದೃಷ್ಠಿಯಲ್ಲಿ ಅಥವ ಅವನಿಗಿದ್ದ ಪ್ರಾಪಂಚಿಕ ಅರಿವಿನಲ್ಲಿ ಬೆಳೆದು ದೊಡ್ಡವನಾಗುವುದು ಅಂದರೆ ಒಬ್ಬ ಒಳ್ಳೆಯ ಮನುಷ್ಯನಾಗುವುದೆಂದೇ ಅರ್ಥ, ಅಷ್ಟೇ. ಯಾವುದೋ ಬೇಕೆಂದು ಹಠಕ್ಕೆ ಬಿದ್ದು, ಅದನ್ನು ಗಳಿಸುವ ತನಕ ಹೋರಾಡಿ ನೆಮ್ಮದಿ ಕೆಡಸಿಕೊಳ್ಳುವುದು ಆತನಿಗೆ ತಿಳಿದೇ ಇರಲಿಲ್ಲ.
ಎಷ್ಟೇ ದೂರವಿದ್ದರೂ ಒಂದರ್ಧ ಘಂಟೆ ಮುಂಚೆ ರೆಡಿಯಾಗಿ, ನಡೆದೇ ಹೊರಟು ಬಿಡುತಿದ್ದ. ರಿಕ್ಷಕ್ಕೆ ದುಡ್ಡು ಕೊಡಬೇಕಾಗುತ್ತದೆ ಅಂತ ಜಿಪುಣತನ ಮಾಡಿ ಅಲ್ಲ. ನಡೆದು ಹೋಗುವ ಸ್ವಾತಂತ್ರ ಕೊಡುವ ಆನಂದಕ್ಕೆ ಸಮವಿಲ್ಲವೆಂಬುದು ಅವನ ವಾದ. ಅವನನ್ನು ನಾನು ಅರ್ಥಮಾಡಿಕೊಳ್ಳಲು ಸಾದ್ಯವಾದದ್ದು, ನಾನು ತಂದೆ ಯಾದ ನಂತರ ಮಾತ್ರ.
ಅವನು ಹೇಳಿಕೊಡದೇ, ಹಾಗೇ ಮೌನದಲ್ಲಿ ನನಗೆ ವರ್ಗಾಯಿಸಿದ ಈ ಯೋಚನಾ ಲಹರಿ, ಒಮ್ಮೊಮ್ಮೆ ನಾನು ಕೆಲಸ ಮಾಡುವ Advertising ಪ್ರಪಂಚದ ತಳುಕು ಬಳುಕಿನ ಗೆಳೆಯರಲ್ಲಿ, ನನ್ನ ಬಗ್ಗೆ ಆಶ್ಚರ್ಯ ಮೂಡಿಸುತ್ತದೆ. ಒಂದಿಷ್ಟರಲ್ಲಿ ಕೆಲಸವಾಗುತ್ತದಾದರೆ, ಮತ್ತಷ್ಟಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವುದು ಆತನ ಸಿದ್ಧಾಂತ.
ನಾನು, ಇತ್ತೀಚೆಗೆ, ಯಾವಾಗಲಾದರೊಮ್ಮೆ ಕಾಫಿ ಡೇ ಗೆ ಹೋದರೆ, ಹೇಳುವುದು ಒಂದು ಕೆಫೆ ಲಾಟೆ. ಸಿಂಪಲ್ಲಾಗಿ ಹೇಳಬೇಕಂದರೆ, ಅದು ಒಂದು ಕಪ್ ಕಾಫಿ ಅಷ್ಟೇ. ಅಲ್ಲಿರುವ ಬೇರೆ ಏನೇನೋ ತರದ ಕಾಫಿಗಳನ್ನು ಬಯಸಿ ಕುಡಿಯಬೇಕು ಅನ್ನಿಸಿದ್ದಿಲ್ಲ.
ಕಾರ್ನರ್ ಹೌಸಿಗೆ ಹೋದರೆ ಒಂದು ಫ್ರೂಟ್ ಸಲಾಡ್.
ಯಾವುದೇ ಹೋಟೇಲಿನ ಬಫೇ ಟೇಬಲ್ಲಿನ ಮೇಲೆ ಇರುವ ಎಷ್ಟೇ ತರಹದ ವೈರೈಟಿ ಆಹಾರ ನೋಡಿದರೂ, ಕಣ್ಣು ಕೊನೆಗೆ ಯಾವುದೇ ಸಂಕೋಚವಿಲ್ಲದೇ ಹುಡುಕುವುದು ಒಂದಿಷ್ಟು ಅನ್ನ, ಸಾರು ಮತ್ತು ಮೊಸರು. ಜೊತೆಯಲ್ಲಿ ಯಾರೇ ಇದ್ದರು ಸರಿ.
ಏ ಸಿ ಬಸ್ಸಿನ ದಮ್ಮು ಕಟ್ಟುವ ಚಳಿಯನ್ನು ಬಿಟ್ಟು, ಗಾಳಿ ಆಡುವ ಕಿಟಕಿ ಇರುವ ಬಸ್ಸು ಹತ್ತುವುದು.
ದೇವಸ್ಥಾನದಲ್ಲಿ, ಯಾವುದ್ಯಾವುದೋ ಪೂಜೆ ಪುನಸ್ಕಾರಗಳನ್ನು ಮಾಡಿಸದೇ,ಮೌನವಾಗಿ ಒಂದೆಡೆ ಕುಳಿತು ಪ್ರಾರ್ಥಿಸುವುದು.
ಎಷ್ಟೋ ದಿನದಿಂದ ಒಂದು ದೊಡ್ಡ ಕಾರು ತೆಗೆದು ಕೊಳ್ಳುವ ಅನ್ನುವ ಯೋಚನೆ ಮೂಡಿಬಂದಿದ್ದರೂ, ಇರುವ ಆಲ್ಟೋ ಏನಾಗಿದೆ, ಇರಲಿ ಬಿಡು. ಗ್ಲೊಬಲ್ ವಾರ್ಮಿಂಗ್ ಕಡಿಮೆ ಆಗುತ್ತೆ ಅಂತ ದೊಡ್ಡ ಕಾರನ್ನು ಬದಿಗಿಡುವುದು.
ಇದೆಲ್ಲಾ ನಾನು ಯೋಚನೆ ಮಾಡಿ ನಡೆಸುವ ಪ್ರಕ್ರಿಯೆ ಅಲ್ಲ,"ಒಂದಿಷ್ಟರಲ್ಲಿ ಕೆಲಸವಾಗುತ್ತದಾದರೆ, ಮತ್ತಷ್ಟಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ನನ್ನಪ್ಪನ ಸಿದ್ಧಾಂತ" ನನ್ನಲ್ಲಿ ನನಗರಿವಿಲ್ಲದೇ ಬೇರು ಬಿಟ್ಟಿರುವುದರ ಪರಿಣಾಮ ಅನ್ನಿಸುತ್ತದೆ.
ಕೆಲವರಿಗೆ ಅಪ್ಪ ಬಿಟ್ಟು ಹೋಗುವುದು
ಅವನದೇ ರೂಪು ಅಥವ ರೋಗ
ಅವನದೇ ದರ್ಪ
ಅವನದೇ ಇತಿಹಾಸ
ಅಥವ ಆಸ್ತಿ
ನನ್ನಪ್ಪ ನನಗೆ ಬಿಟ್ಟದ್ದು ಇದೊಂದೇ ಗುಣ,ಇಷ್ಟೇ.
ಇದು ಇವತ್ತಿನ ಪ್ರಪಂಚಕ್ಕೆ ಸರಿಯೋ ತಪ್ಪೋ? ಮುಂದೊಂದು ದಿನ ನನ್ನ ಮಗಳೇ ಹೇಳಬೇಕು.
ಇವತ್ತು ಫಾದರ್ಸ್ ಡೇ, ಬೆಳಿಗ್ಗೆ ಎದ್ದಾಗ, ಬೆನ್ನಿಗೆ ಬಂದು ಬಿದ್ದ ನನ್ನ ಮಗಳ ಕೈಯಲ್ಲಿ ಒಂದು ಗ್ರೀಟಿಂಗ್ ಕಾರ್ಡು.
"ಹ್ಯಾಪಿ ಫಾದರ್ಸ್ ಡೇ ಪಪ್ಪ" ಅಂದಳು
ಇನ್ನು ಮೂವತ್ತು ವರ್ಷವಾದ ಮೇಲೆ ನನ್ನ ಬಗ್ಗೆ ನನ್ನ ಮಗಳು ಏನು ಬರೆಯುತ್ತಾಳೋ ಗೊತ್ತಿಲ್ಲ,ಆದರೆ, ಟೀವಿ,ಲಗ್ಷುರಿ ಕಾರು, ಏಸಿ ಬಸ್ಸು, ಮೊಬೈಲ್ ಫೋನು, ಕ್ರೆಡಿಟ್ ಕಾರ್ಡು, ಬ್ಯಾಂಕ್ ಬ್ಯಾಲನ್ಸು, ಪ್ಯಾನ್ ಕಾರ್ಡು ಇಂಥಹ ಯಾವುದೇ ತಲೆ ಬಿಸಿಗಳನ್ನು ತಂದು ಕೊಳ್ಳದೇ, ತನ್ನದೇ ಸರಳತೆಯಲ್ಲಿ ಬದುಕಿ, ಬಾಯಿ ಬಿಟ್ಟು ಹೇಳದೇ, ಎಷ್ಟೋ ದೊಡ್ಡ ವಿಷಯಗಳನ್ನು ನನ್ನೊಳಗಿಟ್ಟು ಹೋಗಿ ಸ್ವರ್ಗದಲ್ಲಿರುವ ನನ್ನ ತಂದೆ ಗೂಂದು ನಮಸ್ಕಾರ.
ಅಪ್ಪ ನೀನಿವಾಗ ಇರಬೇಕಿತ್ತು, ಮೊಮ್ಮಗಳೊಂದಿಗೆ ಯಾವುದಾದರೂ ಹೋಟೇಲಿಗೆ ಕರಕೊಂಡು ಹೋಗಿ, ನಿನ್ನ ಮನಸ್ಸಿಗೆ ಹಿಡಿಸುವ ಊಟ ಮಾಡಿಸಿ..."ಹ್ಯಾಪಿ ಫಾದರ್ಸ್ ಡೇ ಅಪ್ಪ" ಅಂದು, ನಿನ್ನ ಮುಖದಲ್ಲಾಗುವ ಸಂತಸವೋ, ಆಶ್ಚರ್ಯವೋ ಏನನ್ನೋ ಒಂದನ್ನು ನಾವು ನೋಡಬೇಕಿತ್ತು.
ಎನಿವೇ ಥ್ಯಾಂಕ್ಸ್ ಅಪ್ಪ.
No comments:
Post a Comment