Sunday, May 30, 2010

ನಮ್ಮ ಮನಸ್ಸಿನಲ್ಲೂ ಅವರು ಮನೆ ಶಿಫ್ಟ್ ಮಾಡಬೇಕು.......

"ಈಗ ಬೆಳಗಿನ ಮೀಟೀಂಗ್ ನಲ್ಲಿ ಇರಬಹುದು ಕಿರಣ್...ನಂತರ ಊಟಕ್ಕೆ ಹೋಗ್ತಾನೆ..ಅಮೇಲೆ ಫೋನ್ ಮಾಡಣ."


"ಕರೆಕ್ಟಾಗಿ ಈಗ ಮಗೂನ ಸ್ಕೂಲ್ ವ್ಯಾನ್ ಹತ್ತಿಸಿ ಬಂದಿರ್ತಾಳೆ, ಇನ್ನೂ ತಿಂಡಿ ತಿಂದಿರಲ್ಲ. ಈಗ ಮಾತಾಡಿದ್ರೆ ಅಷ್ಟೇ"

" ಏಳೂ ವರೆ ಅಲ್ಲವ, ವೈಟ್ ಫೀಲ್ಡ್ ಬಿಟ್ಟಿರಬಹುದು, ಹೆಚ್ಚಂದ್ರೆ ಎಂಟೂ ವರೆಗೆ ಮನೆ ಹತ್ತಿರಾನೇ ಸಿಕ್ಕಬಹುದು"

"ಏನಿವತ್ತು ಆನ್ ಲೈನ್ ಇಲ್ಲ....? ಓಹ್..ಕರೆಕ್ಟ್ ಪ್ರಾಜೆಕ್ಟ್ ಮೇಲೆ ಹೈದ್ರಾಬಾದಿಗೆ ಹೋಗಿರಬೇಕು ಕೀರ್ತಿ"

"ಬಾಲು..ಶನಿವಾರ ಬಂದ್ರೆ ಊರಿಗೆ..ಮತ್ತೆ ಸೋಮವಾರವೇ ಸಿಕ್ಕುವುದು"

ಹೀಗೆ, ನಮ್ಮೆದುರಿಗೆ ಇಲ್ಲದಿದ್ದರೂ, ನಮಗೆ ಬೇಕಾದವರ ದಿನ ಚರಿ ಒಂದು ರೀತಿಯಲ್ಲಿ ನಮಗೂ ಬಾಯಿಪಾಠವಾಗಿ, ಎಷ್ಟೋ ಮೈಲಿ ದೂರದಲ್ಲಿದ್ದರೂ, ಇಲ್ಲೇ ಇದ್ದಾರೆ ಅನ್ನೋ ಅಷ್ಟು ಅತ್ಮೀಯವಾಗಿರುತ್ತದೆ. ನನ್ನ ಎಷ್ಟೋ ಅತ್ಮೀಯರು ಆನ್ಲೈನ್ ಕಂಡರೂ ನಾನು ಮಾತಾಡಲು ಹೋಗುವುದಿಲ್ಲ, ಆ ಸಮಯದಲ್ಲಿ ಅವರು ಏನು ಮಾಡುತ್ತಿರಬಹುದೆಂಬ ಒಂದು ಸಣ್ಣ ಅರಿವು ನನಗೆ ಇರುವುದರಿಂದ, ಅವರು ಆನ್ಲೈನ್ ಇದ್ದಾರೆ ಅಂದರೆ ಅದು ಮಾತಾಡಲಿಕ್ಕೇ.. ಎಂದು ಯೋಚಿಸುವುದಿಲ್ಲ.

ಇವರಲ್ಲಿ ಬಹಳಷ್ಟು ಜನರನ್ನ ನಾನು ನಿಯಮಿತವಾಗಿ ಬೇಟಿ ಕೂಡ ಆಗುವುದಿಲ್ಲ..ಹಾಗೇ ಕೆಲವರನ್ನು ಇನ್ನೂ ಮುಖತಃ ಬೇಟಿ ಕೂಡ ಆಗಿಲ್ಲ.ಆದರೂ ಅವರು ನನ್ನ ಪಕ್ಕದ ಬಿಲ್ಡಿಂಗ್ ನಲ್ಲೇ ಇದ್ದಾರೆ, ನನಗೆ ಅವರ ಬಗ್ಗೆ ಗೊತ್ತು ಎಂಬ ಆತ್ಮೀಯ ಜಂಬ.

ಹೀಗೆಲ್ಲಾ ಇರುವ ಮದ್ಯ, ಕೆಲವರು ಜಾಗ ಬದಲಾಯಿಸುತ್ತಾರೆ. ಯಾವುದೋ ಅನಿವಾರ್ಯಕ್ಕೆ ಸಿಕ್ಕಿ ಒಂದೂರಿನಿಂದ ಇನ್ನೊಂದೂರಿಗೋ, ಒಂದು ಏರಿಯಾದಿಂದ ಇನ್ನೋಂದು ಏರಿಯಾಕ್ಕೊ ಹೋರಟು ಬಿಡುತ್ತಾರೆ. ಆಗ ಸ್ವಲ್ಪ ದಿನ ತಬ್ಬಿಬ್ಬು. ಏನೋ ಕಳಕೊಂಡ ಸಣ್ಣ ಬೇಜಾರು. ಮೊದಲೂ ಅವರು ಎದುರಿಗೇನೂ ಇರುತ್ತಿರಲಿಲ್ಲ...ಈಗಲೂ ಇಲ್ಲ...ಆದರೂ....

ನನ್ನ ಸ್ನೇಹಿತನೊಬ್ಬ ಅಮೆರಿಕ್ಕಕ್ಕೆ ಹೊರಟ ಮೇಲೆ, ಅವನು ಆನ್ ಲೈನ್ ಇದ್ದರೂ ನಾನು ಮಾತಾಡು ತಿರಲಿಲ್ಲ. ಅವನು ಯಾವ ಸಮಯಕ್ಕೆ ಏನು ಮಾಡುತಿರುತ್ತಾನೆ ಎಂಬ ಅಂದಾಜು, ಅಲ್ಲಿ ಮತ್ತು ಇಲ್ಲಿಯ ಸಮಯದ ವೆತ್ಯಾಸದಲ್ಲಿ, ಗೊತ್ತಾಗುತ್ತಿರಲಿಲ್ಲ ವಾದ್ದ ರಿಂದ ಮಾತೇ ನಿಲ್ಲಿಸಿ ಬಿಟ್ಟೇ. ಅವನು ನನಿಗೆ ಸ್ವಲ್ಪ ಕೊಬ್ಬು ಅಂತ ಬೈದು ಕೊಂಡಿದ್ದ.

ಸಚ್ಚಿದಾನಂದ ಹೆಗಡೆ ಮೊನ್ನೆ ಮೊನ್ನೆಯ ವರೆವಿಗೂ ನನ್ನ ಮನೆಯ ಹತ್ತಿರವೇ ಇದ್ದರು. ಗೆಳಯ ಬಾಲು ಮಂದರ್ತಿ ಒಮ್ಮೆ ನಮ್ಮ ಮನೆಗೆ ಬಂದಾಗೆ " ರಿ ನಿಮ್ಮ ಮನೆಯ ಹತ್ತಿರವೇ ನನ್ನ ಫ್ರೆಂಡ್ ಇದ್ದಾರೆ, ಲೇಖಕರು" ಅಂತ ಪರಿಚಯ ಮಾಡಿಕೊಟ್ಟಿದ್ದರು. ಆಗಲಿಂದ ಸಚ್ಚಿ ನನ್ನ ಯೋಚನೆಯ ಒಂದು ಭಾಗ. ಒಹ್..ಇವತ್ತು ಭಾನುವಾರ "ಇವತ್ತು ಒಂದು ಒಳ್ಳೆ ಸಂಗೀತ ಕಾರ್ಯಕ್ರಮ ಇದೆ ಬನ್ರಿ" ಅಂತ ಸಚ್ಚಿಯಿಂದ ಫೋನೋ, ಎಸ್ ಎಮ್ ಎಸೋ ಬರಬಹುದು. ಇಲ್ಲಾ ಅಂದರೆ ಹಾಗೇ ಕಾರಲ್ಲಿ ಅಡ್ಡಾಡಕ್ಕೆ ಹೊರಟು ಒಂದೆರಡು ಹೊಸ ಪುಸ್ತಕದ ಬಗ್ಗೆಯೋ, ಅಥವ ಅವರು ಬರೆಯುವ ಹೊಸ ಕಥೆಯ ಬಗ್ಗೆಯೋ ಮಾತಾಡಬಹುದು. ಹೀಗೆ ಹತ್ತಿರದಲ್ಲೇ ಇರುವರು ಅನ್ನುವ ಒಂದು ಸಮಾಧಾನ. ದಿನವೂ ಸಿಕ್ಕದಿದ್ದರೂ..ಏನೂ ಕೊರತೆ ಅನ್ನಿಸುತಿದ್ದದ್ದಿಲ್ಲ. ಅವರೂ ಮತ್ತವರ ದಿನಚರಿಯ ಸಣ್ಣ ಪರಿಚಯವಿದ್ದರಿಂದ..ಅಪರೂಪ ಅನ್ನಿಸುತ್ತಿರಲಿಲ್ಲ.
ಸಚ್ಚಿ ಮೊನ್ನೆ ಮೊನ್ನೆ...ಅವರ ಆಫೀಸಿಗೆ ಹತ್ತಿರ ಅಂತ್ ಹೇಳಿ ವೈಟ್ ಫೀಲ್ಡ್ ಗೆ ಜಾಗ ಬದಲಾಯಿಸಿದ್ದಾರೆ. ಅವರು ಇಲ್ಲಿಂದ ಹೋಗಿರುವ ಮಾನಸಿಕ ದೂರದ ಅಬ್ಯಾಸ ಇನ್ನೂ ಅಗಿಲ್ಲ. ಮೊದಲಿನ ಹಾಗೆ.."ಒಹ್! ಏಳೂ ವರೆ..ಈಗ ಮನೆ ದಾರಿಯಲ್ಲಿ, ಬಸ್ಸಿನಲ್ಲಿ ಬರುತ್ತಿರಬಹುದು ಸಚ್ಚಿ" ಅಂತ ಅಂದು ಕೊಳ್ಳುವುದಕ್ಕೆ ಆಗುವುದಿಲ್ಲ. ಸ್ವಲ್ಪ ದಿನ ಹೋದರೆ, ಅದು "ಸೆಟ್" ಆಗಬಹುದು. ಮೊನ್ನೆ ಫೊನ್ ಮಾಡಿದ್ದ ಸಚ್ಚಿ, ಬರುವ ಭಾನು ವಾರ ನಮ್ಮ ಹೊಸ ಮನೆಗೆ ಬನ್ರಿ ಅಂದ್ರು...ಬರುತ್ತೇನೆ ರೀ..ಬರುತ್ತಾ ದಾರಿಗೆ ಆಗ್ಲಿ ಅಂತ ಬುತ್ತೀ ನೂ ಕಟ್ಟಿ ಕೊಂಡು ಬಂದು. ಎಲ್ಲಾದರೂ ಸ್ವಲ್ಪ ಹೋತ್ತು ನಿಲ್ಲಿಸಿ, ರೆಸ್ಟ್ ತೆಗೊಂಡು ಬರುತ್ತೇನೆ ಅಂತ ತಮಾಷೆ ಮಾಡಿದೆ. ಬನಶಂಕರಿಯಿಂದ ವೈಟ್ ಫೀಲ್ಡ್ ಏನು ಸಾಮಾನ್ಯವಾ...ದಾರಿ..
ಅವರು ಜಾಗ ಬದಲಾಯಿಸಿದರಷ್ಟೇ ಸಾಕಾ...ನಮ್ಮ ಮನಸ್ಸಿನಲ್ಲೂ ಅವರು ಮನೆ ಶಿಫ್ಟ್ ಮಾಡಬೇಕು ಮತ್ತೆ ನಮಗೆ ಹೊಸ ಅಡ್ರೆಸ್ ಸಿಕ್ಕಬೇಕು..ಅಲ್ಲಿ ತನಕ ಕಷ್ಟ. :)

No comments:

Related Posts with Thumbnails