ಗಾಜಿನ ಬಳೆ ಏನಕ್ಕೋ ನೆನಪಾಯಿತು. ಈಗಷ್ಟು ಹೆಚ್ಚಿಗೆ ನೋಡಲು ಸಿಗೊಲ್ಲ. ಏನೆಲ್ಲಾ ಮಾಡ್ತಾ ಇದ್ವಿ ನಾವು ಅದರಲ್ಲಿ ಚಿಕ್ಕವರಿದ್ದಾಗ. ನನಗೆ ನೆನಪಿದ್ದ ಹಾಗೆ, ಮನೆ ಮುಂದೆ ಬೀದಿಯಲ್ಲಿ ಬಿದ್ದ ಗಾಜಿನ ಬಳೆಗಳನ್ನ ಆರಿಸಿಕೋಂಡು ಬರಲು ನಾವೆಲ್ಲಾ ಹೋಗ್ತಾ ಇದ್ವಿ..ಕೆಂಪು ಹಳದಿ ಹಸಿರು ಅದರ ಮೇಲೆ ಡಿಸೈನು ಹೀಗೆ ಏನೇನೊ. ಯಾರಿಗೆ ಎಷ್ಟು ಸಿಕ್ತು ಅಂತ ಸ್ಪರ್ದೆ. ಮನೆಯಲ್ಲಿ ದೊಡ್ಡಕ್ಕನೋ ಅತ್ತೆಯೋ ಆ ತುಂಡು ಬಳೆಗಳಲ್ಲಿ ಯಾವುದಾದ್ರು ಕಲಾತ್ಮಕ ವಸ್ತುಗಳನ್ನು ಮಾಡುತಿದ್ದರು. ಬಳೆಗಳ ಪಕ್ಷಿ, ಎತ್ತಿನ ಗಾಡಿ ಮತ್ತೆ ಅದರಲ್ಲೇ ತುಂಬಾ ಸುಂದರವಾದದ್ದು ಅಂದ್ರೆ, ಬಾಗಿಲ ಮುಂದಿನ ತೋರಣ. ಮೇಣದ ಬತ್ತಿಯನ್ನು ಹೊತ್ತಿಸಿ, ಎರಡು ತುಂಡು ಬಳೆಗಳನ್ನು ಒಂದನ್ನು ಒಂದು ಮುಟ್ಟಿಸಿ ಬಿಸಿಯಲ್ಲಿ ಜೋಡಿಸಿ ಯಾವುದೋ ಆಕಾರ ತಂದು ಸುಂದರವಾದ ಒಂದು ಗಾಜಿನ ತೋರಣ ಮಾಡುತಿದ್ದರು. ನಮಗೆ, ಅತೀ ಉತ್ತಮ ಅಂದರೆ ಮೀನಿನ ಒಂದು ಆಕಾರ ಮಾಡಲು ಬರುತಿತ್ತು. ಮದ್ಯಾನಃದ ಬಿಸಿಲಿನಲ್ಲಿ ಫಳ್ ಅಂತ ಹೋಳೆಯುತಿದ್ದ ಗಾಜಿನ ತುಂಡನ್ನು, ಓರಗೆಯವರಿಗಿಂತ ಮುಂದೆ ಹೋಗಿ ಹೆಕ್ಕುವುದು ಒಂದು ಆಟ.
ಅಮ್ಮ ಅಡುಗೆಮನೆಯಲ್ಲಿ ಏನು ಮಾಡ್ತಾಇದ್ದಾಳೆ ಅಂತ ಬಳೆಗಳು ಮಾಡುತಿದ್ದ ಸದ್ದಿನಲ್ಲೇ ಹೇಳಬಹುದಿತ್ತು. ಪಾತ್ರೆಗಳ ಒಳಗೆ ಕೈ ಹಾಕಿ ಆಡಿಸುವಾಗಲೇ ಒಂದು ಸದ್ದು, ತರಕಾರಿ ಹೆಚ್ಚುವಾಗಲೇ ಒಂದು ಸದ್ದು. ಕೋಪ ಬಂದಿದ್ದಾಗ ಒಂದೆರಡು ಬಳೆಗಳ ಒಡೆವ ಸದ್ದು.
ಒಂದೊಂದು ಸಣ್ಣ ಸಣ್ಣ ವಸ್ತುಗಳು ಜೀವನದ ಜೊತೆ ಎಷ್ಟು ಸೇರಿರುತ್ತವೆ ನಮ್ಮೋಟ್ಟಿಗೆ..ಹೇಗೆ ಎಲ್ಲಿ ಮಾಯವಾಗುತ್ತದೋ, ಗುಬ್ಬಚ್ಚಿಯ ಹಾಗೆ.
ಹಾಗೆ ಮಾಯವಾದ ಕೆಲವು ವಸ್ತುಗಳು..
ಸೈಕಲ್ಲಿಗೆ ಹಾಕುತಿದ್ದ ಹಳೇ ಡೈನಾಮೋ
ಮರದ ಕಡ್ಡಿಯ ಛತ್ರಿ
ಚೀತಾ ಫೈಟ್ ಬೆಂಕಿ ಕಡ್ಡಿ
ಸಂತೋಷಿಮಾ ಫೋಟೊ
ಪರೀಕ್ಷೇ ರಟ್ಟು.
ಇಂಕ್ ಬಾಟ್ಲು
ಸರ್ಕಾರಿ ಕ್ಲಿನಿಕ್ಕುಗಳಲ್ಲಿರುತಿದ್ದ ಇಂಜೆಕ್ಷನ್ ಸಿರೇಂಜುಗಳನ್ನು ಕುದಿಸಲು ಉಪಯೋಗಿಸುತ್ತಿದ್ದ ಒಂದು ವಿಚಿತ್ರ ಸ್ಟೀಲ್ ಉಪಕರಣ.
ಗಾಳಿಪಟ
ದೊಡ್ಡ ಡೊಡ್ಡ ಜಾಹೀರಾತು ಬರೆಯುತಿದ್ದ ಸಣಕಲ ಕಡ್ಡಿ ಪೈಂಟರ್.
ಮಂಗಳೂರಿನ ಅಂಬಾಸಿಡರ್ ಟ್ಯಾಕ್ಸಿ ಕಾರು.
ನಿಮಿಗೆ ಎಷ್ಟು ನೆನಪಿದೆ?
No comments:
Post a Comment