Friday, May 22, 2009

ಯಾವ ಹೊಸ ತಾಯಿಯ, ಹಾಲು ತುಂಬಿದ ಎದೆ ಕಂಪಿಸಿತೋ ಕಾಣೆ.


"ನಾವು ಒಂದು ಒಳ್ಳೇ ಸ್ಟೋನ್ ಮ್ಯುಸಿಯಮ್ ಮಾಡಣಾ ಅಂತಾ ಇದ್ದೀವಿ"
"ನಮ್ಮ ಏರಿದಲ್ಲಿ ಸ್ಟೊನ್ಸ್ ಜಾಸ್ತಿ ಸಾರ್. ಇಲ್ಲಿ ವಾತಾವರಣ ಹಂಗಿದೆ. ಮತ್ತೆ ಇಲ್ಲಿ ಕ್ಯಾಲ್ಸಿಯಂ ಕಂಟೆಂಟ್ ಜಾಸ್ತಿ. ಹಾಗಾಗಿ ನಿಮಿಗೆ ಒಳ್ಳೆ ಒಳ್ಳೆ ಸ್ಟೋನ್ಸ್ ಸಿಗುತ್ತೆ ನೋಡಿ. ಹೆ ಹೆ ಹೆ..."
ಹಂಗಂದು ನನ್ನನ್ನ ಪಕ್ಕದ ರೂಮಿನಲ್ಲಿದ್ದ ಒಂದು ಟೇಬಲ್ಲಿನ ಮುಂದೆ ನಿಲ್ಲಿಸಿದರು. ಅಲ್ಲಿ ನಾಲ್ಕು ಸ್ಟೀಲ್ ತಟ್ಟೆ, ಮತ್ತು ಫಾರ್ಮಾಲ್ಡಿಹೈಡ್ ನ ಮೂಗು ತುರಿಸುವ ವಾಸನೆ.
ಒಂದರಲ್ಲಿ ಯಾರೂ ಗೋಟು ಅಡಿಕೆ ಅರ್ದಂಬರ್ದ ಅಗಿದು ಉಗಿದಿರುವ ಹಾಗೆ ಸಣ್ಣ ಸಣ್ಣ ಕಪ್ಪು ಚೂರುಗಳು. ಪಕ್ಕದ್ದರಲ್ಲಿ ನಾನಾ ಗಾತ್ರದ ಬಿಳಿ, ಹಳದೀ ಬಣ್ಣದ ಗೊಲಾಕೃತಿಯ ಉಂಡೆಗಳು. ಮತ್ತದರ ಪಕ್ಕದ ತಟ್ಟೆಯಲ್ಲಿ, ಒಂದು ಅಂಗೈ ಅಗಲದ, ಕೊಳೆತ ಮಾವಿನ ಕಾಯಿ ಹೋಲುವ ಏನೋ ವಸ್ತು.
"ಇದನ್ನ ಫೋಟೊಗ್ರಾಫ್ ಮಾಡಕ್ಕೆ ಆಗುತ್ತಾ?" ಅಂತದ್ರು ನನ್ನ ಪಕ್ಕ ಇದ್ದ ಡಾಕ್ಟ್ರು. "ಏನ್ ಸಾರ್?" ಇದು ಅಂದೆ, ಬೆರಗು ಗಣ್ಣಿನಿಂದ.
"ಇದೇ ಕಿಡ್ನಿ ಸ್ಟೋನು, ಅಲ್ನೋಡಿ ಅದು ಮೊನ್ನೆ ತೆಗೆದದ್ದು. ಇಟ್ಸ್ ಆಲ್ಮೋಷ್ಟ್ ಎ ಸೈಝ್ ಆಫ್ ಅನ್ ಟೆನ್ನಿಸ್ ಬಾಲ್" ಅಂದ್ರು.
ಬೆಳಿಗ್ಗಿನ ತಿಂಡಿ ಅರ್ದ ಹೊಟ್ಟೆಯಲ್ಲಿ ಕಲಸಿ ಹೋಯಿತು.
"ಅಲ್ಲಿಟ್ಟಿರೋದು ಅದೇ ಮನಷ್ಯನ ಕಿಡ್ನಿ, ಎಷ್ಟು ಡ್ಯಾಮ್ಯಾಜ್ ಆಗಿತ್ತು ಅಂದ್ರೆ, ನಾವು ಅದನ್ನ ತೆಗೀಲೇ ಬೇಕಾಯಿತು" ಅಂತ ಮಾವಿನ ಕಾಯಿ ಆಕಾರ ತೋರಿಸಿ ಹೇಳುವಾಗ ಕೈ ಯನ್ನ ಬಾಯಿಗೆ ಅಡ್ಡ ಇಟ್ಟು ಕಷ್ಟ ಪಟ್ಟು ಸಹಿಸಿ ಕೊಂಡೆ, ಅವಾಂತರ ಮಾಡಿಕೊಳ್ಳೋದನ್ನ.

ನನ್ನ ಕೆಲಸ, ಅಡ್ವರ್ಟೈಸಿಂಗ್ ಫೋಟೋಗ್ರಫಿ ಅಂದ ತಕ್ಷಣ ಬಹಳಷ್ಟು ಕಣ್ಣುಗಳು ಅಗಲವಾಗಿ, ತಮ್ಮ ಮೇಲಿರುವ ಹುಬ್ಬನ್ನು ಇನ್ನೂ ಎತ್ತರಕ್ಕೆ ಪುಶ್ ಮಾಡಿ ಒಂದು ಮುಗುಳುನಗು ಹೊರಡಿಸುತ್ತಾರೆ. ಅವರ ಕಲ್ಪನೆ, ನಾವು ಯಾವಗಲೂ ಸುಂದರಿಯರ ಒಡನಾಡಿಗಳು ಅಂತ. ಆದರೆ, ಮೆಡಿಕಲ್ ಕಾಲೇಜು, ಆಸ್ಪತ್ರೆ ಮುಂತಾದ ಕಡೆ ಫೋಟೋಗ್ರಫಿ ಮಾಡುವಾಗ ನಾನು ಪಡುವ ಕಷ್ಟಗಳು ಅಷ್ಟಿಷ್ಟಲ್ಲ.

ಪ್ರತಿಸರಿಯೂ ಏನಾದರೂ ಹೊಸದನ್ನು ನೀಡುವ ಇಂತಹ ಕೆಲಸಗಳು ಒಮ್ಮೂಮ್ಮೆ ರಂಜನೀಯ ಕೂಡ.

" ಏಲ್ಲಾ ತುಂಬಾ ಚೆನ್ನಾಗಿ ಡಿಸ್ಪ್ಲೇ ಮಾಡಿದ್ದೀವಿ ಸಾರ್, ಎಲ್ಲಾ ಡೀಟೈಲ್ಸೂ ಬಹಳ ಅದ್ಭುತವಾಗಿ ಗೊತ್ತಾಗೋ ಹಾಗೆ ಅರೇಂಜ್ ಮಾಡಿದ್ದೀವಿ...ನೀವು ಬಂದ ತಕ್ಷಣ್ ಒಂದು ಡೆಮೋ ಮಾಡ್ತೀವಿ ನೀವು ಫೋಟೋ ತೇಗಿಬಹುದು ಸಾರ್"

ಅಂತ ಮೆಲ್ಲನೇ ಏದುಸಿರು ಬಿಡುತ್ತಾ ಬಂದ ಒಬ್ಬ ಕುಳ್ಳನೆಯ,ಧಡೂತಿ ಹೆಂಗಸು, ತನ್ನ ಕತ್ತರಿಸಿದ ಮುಂಗುರುಳನ್ನ ಆಗಾಗ ಬದಿಗೆ ಸರಿಸುತ್ತಾ, ಸರಿಸುವಾಗ ಕೈಗೆ ತಗುಲಿದ ಲಿಪ್ ಸ್ಟಿಕ್ ಅನ್ನು ಸೀರೆಯಂಚಿನಲ್ಲಿ ಒರೆಸಿಕೊಳ್ಳುತ್ತಾ ನನ್ನ ಜೊತೆಗಿದ್ದ ಡಾಕ್ಟರಿಗೆ ಹೇಳಿದರು.
ಸರಿ,, ಇದು ಏನಿರಬಹುದೆಂದು ಕುತೂಹಲದಿಂದ ಅವರ ದಿಪಾರ್ಟ್ಮೆಂಟಿಗೆ ಬಂದು ನೋಡಿದಾಗ ಒಂದು ಸಣ್ಣ ಮುಜುಗರ. ಅದು ನಮಗೆ ಮಾತ್ರ...ಅಲ್ಲಿದ್ದ ಡಾಕ್ಟರಿಗೆ ಮತ್ತು ವಿದ್ಯಾರ್ಥಿಗಳಿಗೆಲ್ಲ ಅದು ನಿತ್ಯ ಸತ್ಯ.
ನಾವು ಆಗ ಮುಟ್ಟಿದ್ದು ಗೈನೆಕಾಲಜಿ ದಿಪಾರ್ಟ್ಮೆಂಟು. ಇನ್ನು ಅವರು ಚೆನ್ನಾಗಿ ಡಿಸ್ಪ್ಲೇ ಮಾಡಿದ್ದು ಏನನ್ನ ಅಂತ ನೀವೇ ಯೋಚನೆ ಮಾಡಿ.

ಫೊಟೋ ತೆಗೆದು ಹೊರಗೆ ಬರಬೇಕಾದರೆ ಅಲ್ಲಿದ್ದ ಡಾಕ್ಟರಿಗೆ ನನಗೆ ಗೊತ್ತಿದ್ದ ಒಂದು ಸಣ್ಣ ಜೋಕು ಹೇಳಿದೆ. " ಗೈನಿಯಾಕ್ ಇಸ್ ದಿ ಒನ್ ಹೂ ಲುಕ್ಸ್ ಫಾರ್ ಟ್ರಬಲ್ ಇನ್ ಅ ಪ್ಲೇಸ್ ವೇರ್ ಎವೆರಿ ಅದರ್ ಮೆನ್ ಲುಕ್ಸ್ ಫಾರ್ ಪ್ಲೆಷರ್" ಅಂತ.
ಗಹಗಹಿಸಿ ನಕ್ಕ ಡಾಕ್ಟರ್ ...ವಿ ಡು ಹ್ಯಾವ್ ಪ್ಲೆಶರ್ ಟೂ ಅಂತ ಕಣ್ಣು ಮಿಟುಕಿಸಿದರು.

"ಇದು ತುಂಬಾ ಇಂಟೆರೆಷ್ಟಿಂಗ್ ಕೇಸ್. ಇಲ್ಲಿ ನಾವು ಎಲ್ಲಾ ಅದುನಿಕ ಮತ್ತು ದುಬಾರಿ ಉಪಕರಣಗಳನ್ನು ಉಪಯೋಗಿಸಿದ್ದೇವೆ. ಇಲ್ಲಿ ನೀವು ಫೋಟೊ ತೆಗೆದ್ರೆ ತುಂಬಾ ಚೆನ್ನಾಗಿರುತ್ತೆ ನೋಡಿ"
ಅಂದ್ರು ಪಕ್ಕದಲ್ಲಿದ್ದ ನವಜಾತ ಶಿಶುಗಳ ವೈದ್ಯರು. ಎದುರಿಗೆ ನೀಲಿ ಬಣ್ಣದ ಟ್ಯುಬ್ ಲೈಟ್ ನ ಬಾಕ್ಸಿನಂತಿದ್ದ ಉಪಕರಣದೊಳಗೆ ಪುಟ್ಟ ಕಂದಮ್ಮ. ಕಣ್ಣಿಗೆ ಬಟ್ಟೇ ಸುತ್ತಿಕೊಂಡು, ಕತ್ತು ಪಕ್ಕಕ್ಕಿರಿಸಿ ಏನೋ ಕನಸು ಕಾಣುತಿತ್ತು.
ಸ್ವಲ್ಪ ಬೇಗ ಹುಟ್ಟುವ ಮಕ್ಕಳಿಗೆ ಈ ತರದ ಚಿಕಿತ್ಸೆ ಅಗತ್ಯವಂತೆ. ಹಾಗೇ ಸಾಲು ಸಾಲಾಗಿ ಮಲಗಿದ್ದವು ಒಂದು ಕೊಠಡಿಯ ತುಂಬಾ ಯಾರ್ ಯಾರದೋ ಕಂದಗಳು. ಮೈಗೆಲ್ಲಾ ಅಲ್ಲಲ್ಲಿ ಏನೇನನ್ನೋ ಲಗತ್ತಿಸಿಕೊಂಡಿದ್ದ ನನ್ನ ಎದುರಿಗಿದ್ದ ಮಗು, ತನ್ನ ಬದುಕಿರುವ ಕುರುಹನ್ನು ಒಂದು "ಬೀಪ್" ಮೂಲಕವೋ ಅಥವ ಮೇಲೆ ಕೆಳಗಾಗುವ ಲೈನು ಗಳ ಮುಖಾಂತರವೋ ತನ್ನ ಸುತ್ತಲೂ ಮುತ್ತಿರುವ ಸಣ್ಣ ಸಣ್ಣ ಟೀವಿಯಂತಹ ಉಪಕರಣಗಳ ಮುಖಾಂತರವೋ ಹೊರಜಗತ್ತಿಗೆ ಹೇಳುತಿತ್ತು.
ನನ್ನ ಎಲ್ಲಾ ಲೈಟು ಗಳನ್ನು ಸೆಟ್ ಮಾಡಿ ಫೋಟೋ ತೆಗೆಯಲು ಫ್ಲಾಶ್ ಮಾಡಿದಾಗ ಸಣ್ಣದಾಗಿ ಬೆಚ್ಚಿ ಬಿತ್ತು ಮಗು.
ಯಾವ ಹೊಸ ತಾಯಿಯ, ಹಾಲು ತುಂಬಿದ ಎದೆ ಕಂಪಿಸಿತೋ ಕಾಣೆ.

"ತುಂಬಾ ಚೆನ್ನಾಗಿದೆ ಸಾರ್ ಶಾಟ್...ಎಲ್ಲಾ ಎಕ್ವಿಪ್ಮೆಂಟು ಕಾಣಿಸ್ತಾ ಇದೆ. ವೆರಿ ಗುಡ್" ಅಂದು ಸಾರ್ಥಕ ಭಾವ ಪ್ರದರ್ಶಿಸಿದರು ಅಲ್ಲಿಯ ಡಾಕ್ಟರು. ಏನು ಸರಿಯೋ ಏನು ತಪ್ಪೋ ಕಾಣೆ...ನನ್ನ ಕೆಲಸ ಮಾಡ್ತಾ ಇದ್ದೇನೋ ಪುಟ್ಟ ಕಂದಮ್ಮನ್ನ ಉಪಯೋಗಿಸಿಕೊಳ್ಳುವಲ್ಲಿ ನಾನೂ ಸೇರಿದ್ದೇನೋ ತಿಳಿಯಲ್ಲಿಲ್ಲ...ಕೆಲಸವಷ್ಟೇ ಮಾಡಿದೆ.

ನನ್ನ ಕೆಲಸದ ಮತ್ತೊಂದು ದಿನ ಹೀಗೇ ಮುಂದು ವರೆಯಿತು.

3 comments:

MukundaTejaswi said...

ನಮಸ್ಕಾರ ಮಹೇನ್,

ನಿಮ್ಮ "ಯಾವ ಹೊಸ ತಾಯಿಯ, ಹಾಲು ತುಂಬಿದ ಎದೆ ಕಂಪಿಸಿತೋ ಕಾಣೆ." ಓದಿದೆ ತುಂಬಾ ಚೆನ್ನಾಗಿ ಇದೆ. ನನ್ನ ಮಗನನ್ನು ಕೂಡ ಹಾಗೆ ಇಟ್ಟಿದ್ದರು ಮೂರೂ ದಿನ, ನಿಮ್ಮ ಲೇಕನ ಓದಿ ಅದು ನೆನಪಾಯ್ತು. ಪುಟ್ಟ ಕಂದಮ್ಮಗಳನ್ನ ಹಾಗೆ ನೋಡುದು ತುಂಬಾ ಕಷ್ಟ. ನಿಮ್ಮ ಲೇಕನದ ಶೀರ್ಷಿಕೆ ತುಂಬಾ ಇಷ್ಟ ಆಯಿತು.

Rakesh S Joshi said...

ಸರ್ ಲೇಖನ ಚೆನ್ನಾಗಿದೆ. ಓದುವಾಗ ಒಮ್ಮೆ ಮೈ ಜುಮ್ಮ ಅಂತು. ಆಸ್ಪತ್ರೇಲಿ ಮಕ್ಕಳನ್ನ ಹಾಗೆ ನೋಡಿದ್ದು ನೆನಪಾಯಿತು. "ಯಾವ ಹೊಸ ತಾಯಿಯ ಎದೆ ಕಂಪಿಸಿತೋ ಕಾಣೆ" ಶೀರ್ಷಿಕೆ ತುಂಬಾ ಸೂಕ್ತವಾಗಿದೆ ಈ ಲೇಖನಕ್ಕೆ.

Mahen said...

Odi istapattidakke thanks Mr.Joshi

Related Posts with Thumbnails