
ಹಾಕಿದ ಜರಿ ಸೀರೆಯ ಸೆರಗಿನಡಿಯಲ್ಲಿ ಅರೆತೆರೆದು ಕಾಣುತಿದ್ದ ಹೊಸನಮೂನೆಯ ಚಿನ್ನದ ಸರವನ್ನ ನವಿರಾಗಿ ಹೊರಗೆಳೆದು "ಇದು...ನಮ್ಮ ಮುಲ್ಯರ ಅಂಗಡಿಯಲ್ಲಿ ಕೊಂಡದ್ದ? ಬಹಳ ಶೊಕ್ ಉಂಟು" ಎಂದು ಕಣ್ಣರಳಿಸಿ ಹೊಟ್ಟೆಕಿಚ್ಚು ಮಿಶ್ರಿತ ಮೆಚ್ಚುಗೆಯಲ್ಲಿ ಕೈಯಲ್ಲಿ ಹಿಡಿದು ಆನಂದಿಸುತಿದ್ದ ಗೃಹಣಿ, ವೀಡಿಯೋದವನ ಬರುವಿಕೆಯನ್ನು ಮೈಮೇಲೆ ಬಿದ್ದ ಪಕ್ಕದವರ ನೆರಳಿನಿಂದ ಸೂಕ್ಷ್ಮವಾಗಿ ಗಮನಿಸಿ, ಆ ಕ್ಷಣವೇ, ಕಿವಿಯನ್ನು ಮಾತ್ರ ತಾನು ಕೇಳಿದ ಪ್ರೆಶ್ನೆಗೆ ಉತ್ತರಕ್ಕಾಗಿ ಇಟ್ಟು, ಕಣ್ಣನ್ನು ಅಗಲವಾಗಿಸಿ, ಒಂದು ಕೃತಕ ನಗೆಯೊಡನೆ ವಿಡಿಯೋದ ಕ್ಯಾಮಾರವನ್ನೆ ದಿಟ್ಟಿಸ ಹತ್ತಿದಳು.
ಯಾವುದೊ ಮಾಂತ್ರಿಕ ಅರೆಕ್ಷಣ ತನ್ನ ಜಾಲದಲ್ಲಿಟ್ಟಂತೆ ಸ್ಥಬ್ಧವಾಗಿದ್ದ ಇಬ್ಬರೂ ಗೃಹಿಣಿಯರು, ವೀಡಿಯೋದವನು ಮುಂದೆ ಸರಿದಂತೆ ಅವರ ಮಾತು, ಚಿನ್ನದ ಡಿಸೈನು, ಧಾರಣೆ, ಶುರುವಾಗುತಿದ್ದ ಬೇಸಿಗೆ, ಮಕ್ಕಳ ಎಕ್ಸಾಮು, ಮೊನ್ನೆ ಕೇರಳಕ್ಕೆ ಓಡಿಹೋದ ರಬ್ಬರ್ ತೋಟದ ಮೇರಿ [ಮೊದಲು ಅವಳ ಹೆಸರು ಕೂಸಮ್ಮ ಆಗಿತ್ತಂತೆ] ಹೀಗೆ ಯಾವುದ್ಯಾವುದೋ ಹಳಿಹಿಡಿದು ಹರಿಯತೊಡಗಿತು.
ಊರಲ್ಲಿ ಒಂದು ಗೃಹಪ್ರವೇಶ, ಅಲ್ಲ ನಮ್ಮ ಹೊಸಮನೆಗೆ ಹೊಕ್ಕುವ ಪರಿಯ ಗೃಹಪ್ರವೇಶವಲ್ಲ. ದೂರದ ಮುಂಬೈ ನಲ್ಲಿ, ಅಲ್ಲಿಯೇ ಬೇರುಬಿಟ್ಟಿದ್ದ ಉಡುಪಿ ಮೂಲದ ಹೆಣ್ಣನ್ನು ಮದುವೆಯಾದ ಶ್ರೀಕಾಂತ, ತನ್ನೂರಿನಲ್ಲಿ ವಧುವಿನ ಪರಿಚಯವನ್ನು ಬಂಧು ಮಿತ್ರರಿಗೆ ಮಾಡಿಸುವುದಕ್ಕೂ, ಮದುವೆಗೆ ಕರೆದು ಊಟಕ್ಕೆ ಹಾಕಲಿಲ್ಲವಲ್ಲ ಎಂಬ ಎಲ್ಲರ ಜಠರಾಗ್ನಿಯನ್ನು ತಣ್ಣಗೆ ಮಾಡಲು, ಪುತ್ತೂರಿನ ಒಂದು ಮಠದಲ್ಲಿ ಇಟ್ಟುಕೊಂಡಿದ್ದ ಸಮಾರಂಭ, ಗೃಹಪ್ರವೇಶ.
"ಮದುವೆ ಸ್ವಲ್ಪ ಗಡಿಬಿಡಿಯಲ್ಲಿ ಆಯಿತು ಮಹೇಂದ್ರ, ನಿಘಂಟಾಗಿ ಹದಿನೈದು ದಿನಕ್ಕೆ ಮದುವೆ ಆಗಿ ಮುಗಿಯಿತು. ಯಾರನ್ನೂ ಕರೆಯಲ್ಲಿಕ್ಕೆ ಆಗಲಿಲ್ಲ. ಹಾಗೆ, ಪುತ್ತೂರಿನಲ್ಲಿ ಒಂದು ಸಣ್ಣ ಕಾರ್ಯಕ್ರಮ, ನೀವು ಪರಿವಾರ ಸಹಿತ ಬರಬೇಕು" ಅಂತ ಫೋನು ಮಾಡಿದ್ದ ಶ್ರೀಕಾಂತ. "ಹುಡುಗಿ ಒಳ್ಳೆ ಮಾಡಲ್ ನ ಹಾಗಿದ್ದಾಳಂತೆ" "ಒಬ್ಬಳೇ ಮಗಳಂತೆ" "ಫ್ಯಾಷನ್ ಡಿಸೈನಿಂಗ ಮಾಡಿದ್ದಾಳಂತೆ" "ನಮ್ಮೂರಿನ ಮಳೆಗಾಲಕ್ಕೆ ಓಡಿಹೋದಾಳೂ" ಹೀಗೆ ಏನೇನೋ ಮಾತು ಊರಿನಲ್ಲಿ ಎಲ್ಲರ ಬಾಯಲ್ಲೂ ಹರಿದಾಡತೊಡಾಗಿತು. "ನಮ್ಮಿಡೀ ಪರಿವಾರಕ್ಕೆ ಇದು ಹೆಮ್ಮೆಯ ವಿಷಯ ನೋಡಿ" ಅಂತ ಸಮಾರಂಭಕ್ಕೆ ಬಂದಿದ್ದ, ಕಿವಿಯತುಂಬಾ ಬಿಳೀ ಕೂದಲು ಇಣುಕುತಿದ್ದ ಹಿರಿಯರು ಹೆಮ್ಮೆಯಿಂದ ಹೇಳಿದರು.
ಒಂದು ಮದುವೆ ಇಷ್ಟು ಸಂಚಲನ ಉಂಟು ಮಾಡುವುದಿಲ್ಲ ನಿಜ. ಆದರೆ, ಇತ್ತೀಚಿನ ದಿನಗಳಲ್ಲಿ ಶಿವಳ್ಳಿಯವರಲ್ಲೋ, ಹವ್ಯಕರಲ್ಲೋ, ಸ್ವಲ್ಪ ವಯಸ್ಸಾದ ಹುಡುಗನಿಗೆ ಮದುವೆ ಎಂದರೇ, ಮಂಜುನಾಥನಿಗೆ ಹರಕೆ ತೀರಿಸಿ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ಇದೆ. ಇದೇ ಶ್ರೀಕಾಂತನ ಮನೆಯ ಎದುರಿರುವ ಹಳ್ಳದ ಆಚೆ ತೋಟದ ಚಿಕ್ಕಪ್ಪನ ಎರಡನೇ ಮಗನಿಗೆ, ಹತ್ತಿರ ಹತ್ತಿರ ನಲವತ್ತಾದರೂ ಮದುವೆಯಿಲ್ಲ. ಚಿಕ್ಕಪ್ಪನ ಮೊದಲನೇಮಗ, ಶಂಕರನಿಗೆ, ನಮ್ಮ ಐಟಿ, ಬೀಟಿ ಗೌಜಿ ಶುರುವಾಗುವ ಮೊದಲೇ ಬೆಳ್ತಂಗಡಿಯಿಂದ ಚಂದದ ಹುಡುಗಿ ತಂದು, "ಸದ್ಯ, ಇನ್ನೋಂದು ಎರಡು ವರ್ಷ ತಡ ಮಾಡಿದ್ದರೇ, ಮೊಮ್ಮಗನನ್ನು ನೋಡದೇ ಕಣ್ಣುಮುಚ್ಚುತಿದ್ದೆವೇನೋ" ಅಂತ ಕಣ್ಣು ಮೇಲೆ ಮಾಡಿ ಕೈಮುಗಿಯುತ್ತಾರೆ ಚಿಕ್ಕ ಪುಣಿಚಿತ್ತಾಯರ ಹೆಂಡತಿ. ನಮ್ಮ ಶ್ರೀಕಾಂತ, ಅವನ ತಮ್ಮ ಗಿರೀಶ, ತಮ್ಮದೇ ಪಂಗಡದಲ್ಲಿ ಹೆಣ್ಣು ಹುಡುಕಿ ಹುಡಿಕಿ, ಸಾಕಾಗಿ "ಬೇರೆ ಯಾವುದಾದರೂ ಆಯಿತು ಮಾರಾರೆ, ಮಠದಲ್ಲಿ ನೀರು ಹಾಕಿಸಿ ಜಾತಿ ಬದಲಾಯಿಸಿದರೆ ಆಯಿತು, ಹೆಣ್ಣಿದ್ದರೆ ಹೇಳೀ" ಅಂತ ತಿಳಿದವರಲ್ಲಿ ಹೇಳ ಹತ್ತಿದ್ದರು.
ಅದರಲ್ಲೂ, ನಮ್ಮ ಶ್ರೀಕಾಂತನ ಕೇಸು ಸ್ವಲ್ಪ ಕಷ್ಟದ್ದೇ. ತೋಟದ ಕೆಲಸ ಏಕತಾನತೆಗೆ ಬೇಸತ್ತೋ, ಇರುವ ಇಷ್ಟು ಚಿಕ್ಕ ಜಾಗಕ್ಕೆ ಅಣ್ಣ ತಮ್ಮ ಇಬ್ಬರೂ ಕಾದು ಕೂತರೇ, ಯಾರಿಗೆ ಎಷ್ಟು ದಕ್ಕೀತು? ಎಂದು, ತೊಂಬತ್ತರ ಮದ್ಯಭಾಗದಲ್ಲೇ ಊರು ಬಿಟ್ಟಿದ್ದ. ಬೆಂಗಳೂರಿಗೆ ಸೇರಿ ಯಾವುದೋ ಜನ ನಿಭಿಡ ಏರಿಯಾದಲ್ಲಿ ಒಂದು ಬೇಕರಿ ಕಂ ಟೀ ಅಂಗಡಿ ಕಂ ಚಿಲ್ಲರೇ ಅಂಗಡಿ ಅಂತಹ ಒಂದು ಮಲ್ಟಿ ಪರ್ಪಸ್ ವ್ಯಾಪಾರ ಆರಂಬಿಸಿದ್ದ. ತೆಳ್ಳಗೆ ಬೆಳ್ಳಗೆ, ನೋಡಿದರೇ ಶುಚಿತ್ವದ ಕುರುಹುವಿನಂತಿದ್ದ ನಮ್ಮ ಮಾಣೀ, ಬೆಂಗಳೂರಿನಲ್ಲಿ, ಅವನ ಏರಿಯಾದಲ್ಲಿ ಸಣ್ಣ ಮಟ್ಟದ, ಎದುರಿಗೆ ಸಿಕ್ಕರೆ ಮುಗುಳ್ನಗೆ ಹುಟ್ಟಿಸುವ ಮಟ್ಟಿಗೆ ಜನಪ್ರಿಯನಾಗಿದ್ದ. "ಏ...ಸಾಹೆಬ್ರಿಗೆ ಸಕ್ಕರೆ ಕಡಿಮೆ ಹಾಕಿ ಒಳ್ಳೆ ಚಾ ಕೊಡೋ" "ಅಗಲಿ ಅಮ್ಮ ಬೀಗ ಇಲ್ಲೇ ಇರುತ್ತೆ, ನಾನಿಲ್ಲ ದಿದ್ದರೆ ನಮ್ಮ ಹುಡುಗರಿರ್ತಾರೆ, ನಿಮ್ಮ ಮಗಳು ಬಂದರೆ ಕೊಡ್ತಾರೆ" "ಹೇಂಗಿತ್ತೂ ಗುರೂ ಪಿಕ್ಚರು, ತಲೆ ತಿಂತಾ, ಹೋಗಲಿ ಬಿಡು ಬಾ..ಒಳ್ಳೆ ಟಿ ಕುಡಿಯುವಿಯಂತೆ" ಹಿಂಗೆ, ಅವನ ಅಂಗಡಿಯ ಮುಂದೆ ನಿಂತರೆ, ಆತ ಆ ಸುತ್ತ ಮುತ್ತಲಿನ ಜನದೊಂದಿಗೆ ಬೆರೆತ ಸಾಕ್ಷಿಯಾಗಿ ಮಾತುಕತೆಗಳು ಕೇಳಿಸುತಿತ್ತು.
ಊರಿನ ಯಾವುದಾದರು ಮದುವೆಯೋ, ಮುಂಜಿಯೋ ಇಂತಹ ಸಮಾರಂಭಗಳಲ್ಲಿ ಎದುರಿಗೆ ಸಿಕ್ಕುತಿದ್ದ ಶ್ರೀಕಾಂತ, ಬೆಂಗಳೂರಿನವನಾದ ನನ್ನನ್ನ ಕಂಡರೆ ಸಂಕೋಚದಿಂದ ಕರಗಿ ಹೋಗುತಿದ್ದ. ಸ್ವಲ್ಪ ಹೊತ್ತಿಗೆ ಗುಂಪಿನಲ್ಲಿ ಮರೆಯಾಗಿ ಹೋಗುತಿದ್ದ. ಎಲ್ಲಿ ನಾನು ಅವನ ಬೇಕರಿ ವಿಷ್ಯ ಎಲ್ಲರ ಮುಂದೆ ದೊಡ್ಡದನಿ ಯಲ್ಲಿ ಮಾತಾಡಲು ಶುರುಮಾಡುತ್ತೇನೋ ಎಂದಿರಬೇಕು. "ಎಲ್ಲಾ ಬಿಟ್ಟು ಬೆಂಗಳೂರಲ್ಲಿ ಲೋಟ ತೊಳೆಯಕ್ಕೆ ಹೋಗಬೇಕ ಮಾರಾರೆ?" ತೋಟದಲ್ಲಿ ದುಡಿಯಲು ಏನು ಧಾಡಿ?" ಅಂತ, ಅಡಿಕೆ ರೇಟು ಏರುಮುಖವಿದ್ದು, ಒಂದೆರಡು ಕಾರುಗಳನ್ನು ಬುಕ್ಕು ಮಾಡಿದ್ದ ಸಂಭಂದಿಕರು ಸುರೇಶನ ಬೆನ್ನ ಹಿಂದೆ ಮಾತಾಡುವುದು ಅವನಿಗೂ ತಿಳಿದಿತ್ತು. ಅವನಪ್ಪನಿಗೂ ಬ್ರಾಮ್ಹಣರ ಹುಡುಗ ಹೀಗೆ ಏನೋ ಮಾಡುವುದು ಸ್ವಲ್ಪ ಸಂಕಷ್ಟಕ್ಕೆ ಈಡು ಮಾಡಿತ್ತು. ಆದರೂ, ಚೆನ್ನಾಗೇ ದುಡಿಯುತ್ತಿದ್ದನಾದ್ದರಿಂದ, ಮಗಳ ಮದುವೆ ಹತ್ತಿರವಿದ್ದರಿಂದ, ಅವರ ಪಾಲಿಗಿದ್ದ ತೋಟ ಚಿಕ್ಕದಿದ್ದರಿಂದ, ದೇವರ ಮೇಲೆ ಭಾರ ಹಾಕಿ ಎಲ್ಲಾ ಅವನಿಗೇ ಬಿಟ್ಟಿದ್ದರು.
ನನಗೂ ಶ್ರೀಕಾಂತ ಮರೆತು ಹೋಗಿದ್ದ. ಬಹಳದಿನಗಳಾಗಿತ್ತು, ಇದ್ದಕಿದ್ದ ಹಾಗೇ ತನ್ನ ಹೋಟೇಲು ಮುಚ್ಚಿ "ಏಲ್ಲೋ ಬಾಂಬೆ ಕಡೆ ಹೋದನಂತಪ್ಪಾ" ಅಂತ ಊರಲ್ಲಿ ಮಾತಾಡುವುದನ್ನು ಕೇಳಿದ್ದೆ. ನಂತರ ತಿಳಿದದ್ದು, ಐಟಿ ಜ್ವರ ಏರುತಿದ್ದ ಬೆಂಗಳೂರಿನಲ್ಲಿ, ಬೇಕರೀ ಜಾಗ ಉಳಿಸಿಕೊಳ್ಳಲೂ ಅವನಿ ಕಷ್ಟವಾಗಿತ್ತು. ಬಾಡಿಗೆ ಆ ಮಟ್ಟಕ್ಕೆ ಏರಿತ್ತು. ಒಳ್ಳೆ ಮಾತು, ಒಳ್ಳೆ ತನ ಏನೇ ಇದ್ದರೂ, ಬಾಡಿಗೆ ಕೊಡದೇ ಮಾಲೀಕ ಬಿಡಬೇಕಲ್ಲ?.
ಮುಂದೆ, ಗೌರಿಹಳ್ಳದಲ್ಲಿ ಬಹಳಷ್ಟು ನೀರು ಹರಿದಿತ್ತು. "ಬಾಂಬೆಗೆ ಹೋದಿದ್ದಾನಪ್ಪ" "ಯಾವುದೋ ಹೋಟೇಲು ನಡಿಸ್ತಾನಂತೆ" ಹೀಗಿ ಯಾವಾಗಲದರೊಮ್ಮೆ ಶ್ರೀಕಾಂತನಬಗ್ಗೆ ಕೇಳುತಿದ್ದೆ. ಇತ್ತ, ಊರಿನಲ್ಲಿ ಅಡಿಕೆ ರೇಟು, ಪೂರ್ಣ ಚಂದ್ರನ ಹುಣಿಮೆಯನಂತರ, ಉರಿದು ಬೀಳೋ ನಕ್ಷತ್ರದಂತೆ ಧರೆಗಿಳಿಯುತಿತ್ತು. ದೇವರ ಮುಂದೆ ನೈವೇದ್ಯಕ್ಕೂ ಸಕ್ಕರೆ ಲೆಕ್ಕ ಹಾಕಿ ಉಪಯೋಗಿಸುವ ಕಾಲ ಬಂದಿತ್ತು. ಒಮ್ಮೆ ಮಳೆ ಕಡಿಮೆ ಯಾದರೆ ಇನ್ನೊಮ್ಮೆ ತೋಟದ ಬದಿಯ ಪುಟ್ಟ ನದಿಯಲ್ಲಿ ಬೊಳ್ಳಬಂದು ಹಾನಿ, ಹೀಗೆ ಅಡಿಕೆ ನಿರಾಶೆಯನ್ನು ತಲೆಗಿಟ್ಟು ಕೊಂಡು ತೂಗಾಡಲು ಶುರುವಿಟ್ಟಿತ್ತು.
ಶ್ರೀಕಾಂತ ಬಿಟ್ಟುಹೋಗಿದ್ದ ಊರು ಸಂಪ್ರದಾಯದ ಬೇರಿನೊಂದಿಗೆ ಅದೇ ನೆಲದಲ್ಲಿ ಹೂತು ಹೋಗಿತ್ತು.
ಹೋದಸಲದ ನವರಾತ್ರಿಗೆ ಊರಿಗೆ ಹೋಗಿದ್ದಾಗ, ಶ್ರೀಕಾಂತ ಕಂಡ. ಮನೆಗೆ ಬರಲೇಬೇಕು ಅಂತ ಕರೆದು ಒತ್ತಾಯಮಾಡಿದ. ನಾನು ಹೋದೆ. ಒಳಗೇ ಕಾಲಿಟ್ಟ ತಕ್ಷಣ ಮೂಗಿನ ತುಂಬಾ ಸೆಂಟಿನ, ಡಿ ಓಡರೆಂಟಿನ ಘಮ ಘಮ. ಹಳೆ ಹಂಚಿನ ಮನೆಗೆ ಒಂದು ಹಂತದ ಎಕ್ಷಟೆನ್ಷನ್ ಮಾಡಿ, ಸಿರಾಮಿಕ್ ಟೈಲ್ಸ್ ಹಾಕಿದ್ದ, ಹೊಳೆಯುವ ನೆಲದ ಒಂದು ಹಾಲು ಎರಡು ರೂಮು ಬಂದಿತ್ತು. ತಿಂಡಿತಂದಿಟ್ಟ ನಂತರ "ಕೈ ತೋಳೆದು ಬನ್ನಿ" ಎಂದು ಎರೆಡೆರೆಡು ಸಲ ಒತ್ತಾಯಿಸಿದ ಗುಟ್ಟು, ಹೊಸ ಆದುನಿಕ ಟಾಯ್ಲೆಟ್ ನ ಸಿಂಕ್ಕಿನಲ್ಲಿ ತಣ್ಣೀರು ಕೈಗೆ ಬಿದ್ದಾಗ ತಿಳಿಯಿತು. "ಹೀಗೆ, ಮನೆಯಲ್ಲಾ ಸ್ವಲ್ಪ ಚಂದ ಮಾಡಿದ್ದೇವೆ. ಹಳೇ ಮನೆ, ಕೃಷಿಕರೂ ಅಂದರೇ ಹೆಣ್ಣೇ ಕೊಡುವುದಿಲ್ಲ ಈಗ. ಎಲ್ಲಿ ಹೋದರೂ, ಹೆಣ್ಣಿನ ಕಡೆಯವರು ನೀವು ಇನ್ಫೊಸಿಸ್ ನಲ್ಲಿದ್ದೀರ? ಅಂತ ಕೇಳುತ್ತಾರೆ" ಅಂತ ತನ್ನ ಪರಿಸ್ಥಿತಿ ಹೇಳಿಕೊಂಡ ಶ್ರೀಕಾಂತ. ಅವನು ಆಗಲೇ ದುಬೈನಲ್ಲಿದ್ದ. ಮುಂಬೈ ಹಿಂದೆ ಹೋಗಿತ್ತು. ಅಲ್ಲಿ ಒಂದು ಉಡುಪಿ ಹೋಟೇಲಿಟ್ಟು ಕೈತುಂಬಾ ದುಡಿದು, ಮನೆ ಚಂದ ಮಾಡಿ, ಸೆಂಟಿನಲ್ಲಿ ಅದ್ದಿದ ಕರ್ಟನ್ ಹಾಕಿಸಿದ್ದ. ಹೆಣ್ಣಿನವರಿಗೆ ಎಷ್ಟೇ ಸಂಪತಿದ್ದರೂ, ಹೋಟೇಲು ಇಟ್ಟಿದ್ದೇನೆ, ಊರಿನಲ್ಲಿ ತೋಟ ಇದೆ ಅನ್ನುವ ಮಾತು "ಸಾಫ್ಟವೇರ್" ನಷ್ಟು ಹಿತಕೊಡುತಿರಲಿಲ್ಲ.
ಮತ್ತೂ ಒಂದೆರಡು ವರ್ಷ ಮದುವೆ ನಡೆಯಲಿಲ್ಲ. ಮನೆಯ ಪಕ್ಕದ ಗುಡ್ಡದಲ್ಲಿ ರಬ್ಬರ್ ತೋಟ ಮಾಡಿದ್ದೂ ಆಯಿತು. ಕ್ಯಾಷ್ ಕ್ರಾಪ್ ಆದ್ದರಿಂದ ಸ್ವಲ್ಪ ಮರ್ಯಾದೆ ಹೆಚ್ಚಿ ಹೆಣ್ಣು ಬಲಗಾಲಿಟ್ಟು ಮನೆಗೆ ಬರಬಹುದೆಂಬ ಸಣ್ಣ ನಂಬಿಕೆ ರಬ್ಬರ್ ಗಿಡದಂತೆ ಸಣ್ಣಗೆ ಉದ್ದವಾಗುತಿತ್ತು, ರಬ್ಬರ್ ಧಾರಣೆ ಬೀಳುವ ವರೆಗೆ.
"ರೀ, ಶ್ರೀಕಾಂತ, ಊರಿನಿಂದ" ಅಂತ ನನ್ನ ಹೆಂಡತಿ, ಆಗತಾನೆ ಸ್ನಾದ ಮನೆಯಿಂದ ಹೊರಗೆ ಬಂದ ನನಗೆ ಮೊಬೈಲು ಕೈಗೆ ಕೊಟ್ಟಾಗ "ಯಾವ ಶ್ರೀಕಾಂತ?" ಅಂತಾನೇ ಪೋನು ಹಿಡಿದಿದ್ದೆ. "ಮದುವೆ ಸ್ವಲ್ಪ ಗಡಿಬಿಡಿಯಲ್ಲಿ ಆಯಿತು ಮಹೇಂದ್ರ............" ಅಂತ ಆಚೆ ಕಡೆಯಿಂದ ಮಾತಾಡುತಿದ್ದ, ಶ್ರೀಕಾಂತ.
ಮೊನ್ನೆ ಮೊನ್ನೆ ಐಟಿ ಕಂಪನಿಗಳಲ್ಲಿ ಕೆಲಸ ಕಳೆದು ಕೊಂಡ, ಅಥವ ಕಳೆದುಕೊಳ್ಳುವ ಭೀತಿಯಲ್ಲಿದ್ದ, ನನ್ನ ಸ್ಥಳೀಯ ಗೆಳೆಯರಲ್ಲಿ ಅವರ ಆತಂಕಗಳನ್ನು, ಬೆಂಗಳೂರಿನಲ್ಲಿ ಬೀಳುತಿದ್ದ ರಿಯಲ್ ಎಸ್ಟೇಟ್ ರೇಟಿನೋಂದಿಗೇ ಸೇರಿಸಿ ಕೋಂಡು ಹಂಚಿಕೋಂಡಿದ್ದ ನನಗೆ "ಅಹ್ ಶ್ರೀಕಾಂತನಿಗೆ ಇದು ಶುಕ್ರದೆಸೆ"ಅನ್ನಿಸಿತು. ಶ್ರೀಕಾಂತನ ಮದುವೆ, ಅದೇ ಊರಿನ ಹಲವು ಎಳೆಯ ಅವಿವಾಹಿತ "ಅಂಕಲ್" ಗಳಿಗೆ ಒಂದು ಆಶಾಕಿರಣ ಹುಟ್ಟಿಸಿತ್ತು. ಅವರೆಲ್ಲಾ ಪಂಚೆ ಎತ್ತಿ ಕಟ್ಟಿ ಊಟ ಬಡಿಸುವಾಗ ಕಾಲಲ್ಲಿ ಏನೋ ಉತ್ಸಾಹ. ತಮ್ಮ ಮದುವೆಗಳ ಕನಸೂ ಹೋಳಿಗೆಗೆ ಹಾಕುತಿದ್ದ ಬಿಸಿತುಪ್ಪದಂತೆ ಘಮ್ ಅಂತಿತ್ತು.
ಕಾಲ, ಒಂದು ಸಣ್ಣ ಸೈಕಲ್ ಹೊಡೆದಿತ್ತು. ಹೆಣ್ಣು ಹೆತ್ತವರಿಗೆ ಬೇರೆಯವರೂ ಕಾಶಿಗೆ ಹೊರಟು ನಿಂತದ್ದು ಕಾಣಿಸಹತ್ತಿತ್ತು. ಅಮೆರಿಕಕ್ಕೆ ಹೊರಟವರ ಕೈಕಾಲು ಹಿಡಿಯುವುದನ್ನು ಬಿಟ್ಟಿದ್ದರು.
ಮದುವೆ ಹೆಣ್ಣಿಗೆ " ಯು ಹ್ಯಾವ್ ಬ್ರಾಟ್ ಎ ಚೇಂಜ್ ಅಂಡ್ ಹೋಪ್ ಟು ದಿಸ್ ಕಮ್ಯುನಿಟಿ ಯಾಸ್ ವೆಲ್ ಯಾಸ್ ದಿಸ್ ವಿಲೇಜ್" ಆಂತ ಎರಡು ಕೈ ಮುಗಿದೆ. ತಕ್ಷಣಕ್ಕೆ ಅವಳಿಗೂ ಅರ್ಥವಾಗಲಿಲ್ಲ ಅನ್ನಿಸುತ್ತೆ, ಮಂಗಳ ವಾದ್ಯ ಜೋರಿತ್ತು.
1 comment:
ಅಡಿಕೆ ಬ್ರಾಂಬ್ರ ಬದುಕಿನ ತಲ್ಲಣ, ನಿಮ್ಮ ಬರಹ ಓದಿ ತಣ್ಣಗೆ ಕಾಡಲು ಶುರುವಾಯಿತು. ಒಂದು ಕಾಲದಲ್ಲಿ ಹೆಣ್ಣುಗಳು ಮದುವೆಗೆ ಬಾಕಿ ಉಳಿದು ಹೆತ್ತವರ ಗೋಳು ಹರಡಿಕೊಂಡಿತ್ತು. ಇದೆಲ್ಲ ಕೂಡ ಒಂದು ಸೈಕಲ್ಲೇ.
Post a Comment