Tuesday, January 20, 2009

ಹೊಸ ವರ್ಷ ಪರವಾಗಿಲ್ಲಾ :)

ಹೊಸ ವರ್ಷ ಪರವಾಗಿಲ್ಲಾ :) ಸ್ವಲ್ಪ ಬ್ಯುಸಿಯಾಗೇ ಇದೆ. ಕೆಲಸಗಳು ಒಂದು ಕಡೆ ಆಗ್ತಾ ಇದ್ರೆ, ನಾನು, ಇವುಗಳ ಮದ್ಯೆ, ತಿರುಪತಿ ಅಂತ ಹೋಗಿಬಂದಿದ್ದಾಯಿತು.ಕಾಕತಾಳೀಯ ಅಂದರೆ, ವಸುಧೇಂದ್ರರ "ಹಂಪಿ ಎಕ್ಸ್‍ಫ್ರೆಸ್" ನಲ್ಲಿ ಬರುವ "ಸೀಳು ಲೋಟ" ಕತೆ ಓದಿ ಸ್ವಲ್ಪ ದಿನಕ್ಕೇ ತಿರುಪತಿಗೆ ಹೋಗುವ ಅವಕಾಶ ಒದಗಿ ಬಂತು. ತಿರುಪತಿಯಲ್ಲಾ ವಸುಧೇಂದ್ರ ಕತೆಯ ಒಳಗೇ ಇದ್ದ ಅನುಭವ. ನನಿಗೆ ತಿರುಪತಿ ದೇವರಿಗಿಂತ ಅವನ ಪ್ರಸಾಧ ಬಹಳ ಇಷ್ಟ. ನಮ್ಮಳೊಗಿರುವ ನಂಬಿಕೆಯೇ ದೇವರು ಅಂದರೇ, ನಮ್ಮ ನಮ್ಮ ನಂಬಿಕೆ ಗಳಿಗೆ ಅನುವಾಗಿ ನಾವು ದೇವರನ್ನು, ತಂದೆಯಲ್ಲೋ, ತಾಯಿಯಲ್ಲೋ,ನಾವು ಮಾಡುವಕೆಲಸದಲ್ಲೋ ನಮಗೆ ಅನುಕೂಲವಾಗುವ ರೂಪದಲ್ಲಿ ನೋಡಿ ಆನಂದಿಸುತ್ತೇವೆ. ಅವರ ಅವರ ಅನುಭವ,ವಿದ್ಯ,ಲೋಕಾನುಭವಕ್ಕೆ ತಕ್ಕ ಹಾಗೆ ಕೆಲವರಿಗೆ ಮಾರಿಯಮ್ಮ ಕುಲದೈವ,ಕೆಲವರಿಗೆ ತಿರುಪತಿ ತಿಮ್ಮಪ್ಪ. ಇನ್ನು ಸ್ವಲ್ಪ ಸೌಮ್ಯಸ್ವಭಾವದ, ರಿಯಾಲಿಟಿಗೆ ಹತ್ತಿರವಾದ,ಸ್ವಲ್ಪ ವೈರಾಗ್ಯದ ಕಡೆಗೆ ಒರಗಿದ ಜನಕ್ಕೆ ರಾಘವೇಂದ್ರ ಸ್ವಾಮಿ, ಸಾಯಿಬಾಬ ಇವರು ಅತಿ ದೋಡ್ಡವರು. ಹಾಗೇ, ತಿರುಪತಿ ತಿಮ್ಮಪ್ಪನ್ನನ್ನು ಬಹಳ ನೆಚ್ಚುವ ನನ್ನ ಆತ್ಮೀಯರೋಬ್ಬರು ಕರೆದರು, ನಾನೂ ಬಾಲವಾಗಿ ಹೋಗಿ ತಿಮ್ಮಪ್ಪನ ದರ್ಶನ ಮಾಡಿ, ಲಾಡು ತಿಂದು ಬಂದೆ. :) ಅಲ್ಲಿಗೆ ಹೋಗಿದ್ದ ನನ್ನ ಅನುಭವ ಅನಿಸಿಕೆ ಮತ್ತೋಮ್ಮೆ ಧಾಖಲಿಸುತ್ತೇನೆ.
ಸದ್ಯಕ್ಕೆ, ಹೊಸದೋಂದು ಪುಸ್ತಕ ಹಿಡಿದು ಬಂದೆ. ಶ್ರೀನಿವಾಸ ವೈದ್ಯರ "ಹಳ್ಳ ಬಂತು ಹಳ್ಳ" ಇನ್ನೂ ಓದಿಲ್ಲಾ. ಮಿತ್ರ ಸಚ್ಚಿದಾನಂದ ಹೆಗಡೆಯವರ "ಕಾರಂತಜ್ಜನಿಗೆ ಒಂದು ಪತ್ರ" ಸದ್ಯ ಕೈಯಲ್ಲಿದೆ. ಮೊದಲನೇ ಕತೆ ಓದಿ ಮುಗಿಸುವುದಕ್ಕೊ,ಅವರು ಫೋನು ಮಾಡುವುದಕ್ಕೂ ಸರಿಯಾಯಿತು. ಮೊದಲನೇ ಕತೆ ಚೆನಾಗಿದೆ ಸ್ವಾಮಿ, ಬ್ರಾಮ್ಹಣ್ಯದಲ್ಲೂ ಇರಬಹುದಾದ ಇಂದ್ರಿಯಸಂಬಂದಿ ಕ್ರೌರ್ಯ ಬೆಚ್ಚಿಬೀಳಿಸುವಹಾಗೆ ಬರೆದಿದ್ದೀರ ಅಂತ ಹೇಳಿದೆ. ನಂತರ ಅವರೋಟ್ಟಿಗೆ ಒಂದು ಸ್ವಲ್ಪ ಹೋತ್ತು ಫೊನಿನಲ್ಲಿ ಹರಟೆಯಾಯಿತು.
ಈ ಮದ್ಯ ನನ್ನ ಸಂಸ್ಕೃತ ಕಲಿಯುವ ಆಸೆಗೆ ಮೊದಲ ತಿಂಗಳು :). ಸಂಸ್ಕೃತ ಕಲಿಯುವ ಪುಸ್ತಕಗಳನ್ನೆಲ್ಲಾ ತಂದು ಇಟ್ಟು ಕೊಂಡು ಅಕ್ಷರಕ್ಕೆ ಅಕ್ಷರ ಸೇರಿಸಿಕೋಂಡು, ಮಕ್ಕಳ ಹಾಗೆ ಉಚ್ಚರಿಸುತ್ತಾ, ಅದರ ಮಜಾ ತೆಗೋತಾ ಇದ್ದೀನಿ. ಇನ್ನೋಂದು ವರ್ಷದಲ್ಲಿ ಆ ಭಾಷೆಯಲ್ಲೇ ಮಾತಾಡಾಬೇಕು, ಜಯದೇವ ಕವಿ ಅಷ್ಟಪದಿಯನ್ನು ಅರ್ಥ ಮಾಡಿ ಕೊಳ್ಳಬೇಕು ಎಂಬ ಹಂಬಲ.
ಇದರ ನಂತರದ ಸರದಿ ಉರ್ಧುವಿನದು, ಇಲ್ಲೇ ಗೌರ್ನಮೆಂಟ್ ಉರ್ದು ಶಾಲೆಗೆ ಹೋಗಿ ಯಾವುದಾದರು ಗಡ್ಡದ ಮೇಷ್ಟ್ರನ್ನ ಪರಿಚಯ ಮಾಡಿಕೊಂಡು ಆ ಭಾಷೆಯನ್ನ ಕಲೀಬೇಕು ಅಂತ ಆಸೆ. ಗಾಲಿಭನ ಎಲ್ಲಾ ಕವಿತೆಗಳನ್ನ ಇಳಿ ಸಂಜೆಯಲ್ಲಿ, ಮದಿರೆಯ ಜೋತೆಗೆ ಸಂಪೋರ್ಣ ಸವಿಯುವ ಆಸೆ.
ಮತ್ತೋಂದು ಸುದ್ದಿ ಹಂಚಿಕೊಳ್ಳಬೇಕು,ಇದು ನನಗೆ ಬಹಳ ಸಂತೋಷದ ವಿಷಯ. ಯಾವದಾದರೂ ಬೇರೆ ಊರಿಗೆ ಕೆಲಸದ ಮೇಲೆ ಹೋಗಿದ್ದಾಗ, ಯಾರೋ ಪರಿಚಿತರಾದಾಗ ನನ್ನಂತಹ ಫೋಟೋಗ್ರಾಫರಿಗೆ ಬರುವ ಮೊದಲ ಬೇಡಿಕೆ ’ಹೆ..ನಮ್ಮದೂ ಒಂದು ಫೋಟೋ ತೆಗಿಯಪ್ಪಾ" ಅಂತ. ಹಾಗೆಲ್ಲಾ ತೆಗೆದ ಎಷ್ಟೋ ಚಿತ್ರಗಳು ಪ್ರಿಂಟಿನ ಹಂತಕ್ಕೆ ಹೋಗದೇ, ನನ್ನ ಪ್ರಿಂಟಿಗಾಗಿ ಕಾದು ಕುಳಿತವರು ಹಲವರಿದ್ದಾರೆ. ನನ್ನ ಸಮಸ್ಯೆ ಅಂದರೆ, ಇಲ್ಲಿ, ಬೆಂಗಳೂರಿನಲ್ಲಿ, ಇಂಥಹ ಟ್ರಾಫಿಕ್ಕಿನಲ್ಲಿ ಯಾವುದೋ ಮೂಲೆಗೆ ಹೋಗಿ, ಪ್ರಿಂಟ್ ಮಾಡಿಸಿ ಅದನ್ನ ಪ್ಯಾಕ್ ಮಾಡುವುದನ್ನೆ ನೆನಸಿಕೋಂಡಾಗಲೆಲ್ಲಾ, ನಾಳೆ ಮಾಡುವ ಎಂದೆನಿಸಿ, ಆ ನಾಳೆ ಬರದೇ ಎಷ್ಟು ಜನಕ್ಕೆ ಬೇಜಾರು ಮಾಡಿದ್ದೇನೋ ದೇವರೇಬಲ್ಲ.
ಆದರೆ ಈಗ ಹೊಸದೊಂದು ಕಂಪನಿ ಬಂದಿದೆ ಕ್ಯಾನ್ವೆರ ಅಂತ. ಅವರಿಗೆ, ನಾವು ಮಾಡಿಸಲಿಚ್ಚಿಸುವ ಪ್ರಿಂಟಿನ ಜೆ-ಪೆಗ್ ಗಳನ್ನು ಆನ್ ಲೈನ್ ಮುಖಾಂತರ ಕಳಿಸಬಹುದು. ಕ್ರೆಡಿಟ್ ಕಾರ್ಡಿನಲ್ಲಿ ಹಣ ಕಟ್ಟಿ, ತಲುಪ ಬೇಕಾದವರ ವಿಳಾಸ ತಿಳಿಸಿದರೇ, ಅವರೇ ಚಂದದ ಪ್ಯಾಕಿಂಗ್ ಮಾಡಿ ಕಳಿಸಿ ಕೊಡುತ್ತಾರೆ. ಇನ್ನು ಮುಂದಾದರೂ ಕೆಲವರ ಹತ್ತಿರ ಒಳ್ಳೆಯವನಾಗುವ ಆಸೆ.

ನಾನು ಮೋದಲು ಒಂದು ಚಿತ್ರ ಕಳಿಸಬೇಕೆಂದಿರುವುದು, ಮನಾಲಿ [ಹಿಮಾಚಲ ಪ್ರದೇಶ] ಯಲ್ಲಿರುವ ಒಂದು ಹುಡುಗಿಗೆ. ನಾನು ಅಲ್ಲಿಗೆ ಹೋಗಿದ್ದಾಗ, ಯಾವುದೋ ಬೆಟ್ಟದ ಚಿತ್ರತೆಗೆದು ಮುಗಿದ ನಂತರ ಯಾವುದೋ ಯೋಚನೆಯಲ್ಲಿ ಒಂದು ಲೆನ್ಸ್ ಅಲ್ಲೆ ಬಂಡೆಕಲ್ಲಿನ ಮೇಲೆ ಬಿಟ್ಟು ರೂಮಿಗೆ ಬಂದಿದ್ದೆ. ಮಾರನೆ ದಿನ ದಡಬಡಿಸಿ ಓಡಿ ಹುಡುಕಾಡುತಿದ್ದಾಗ, ಅಲ್ಲೇ ಬಟ್ಟೆ ಒಗೆಯುತ್ತಿದ್ದ ಆ ಹದಿನೈದು ವರ್ಷದ ಹುಡುಗಿ "ಎ ಆಪ್ಕಾ ಹೈ ಕ್ಯಾ" ಅಂತ ಕರೆದು ಕೊಟ್ಟಳು. ಕುಷಿಯಾಯಿತು, ಅದೇ ಲೆನ್ಸ್ ಹಾಕಿ, ಅಲ್ಲಿಯೇ ಹತ್ತಿರದಲ್ಲಿದ್ದ ಅವರಮ್ಮನನ್ನೂ ಸೇರಿಸಿ ಒಂದು ಚಿತ್ರ ತೆಗೆದೆ. ವಿಳಾಸ ತೆಗೆದುಕೊಂಡು ಚಿತ್ರ ಕಳಿಸುತ್ತೇನೆಂದು ಹೇಳಿ, ಒಂದೇ ಒಂದು ಚಿತ್ರ ಹೇಗೆ ಪ್ಯಾಕ್ ಮಾಡಿ ಕಳಿಸುವುದು ಅನ್ನೋ ಗೊಂದಲದಲ್ಲಿ ಹಾಗೇ ಬಿಟ್ಟಿದ್ದೇ. ಮೋದಲು ಆ ಹುಡುಗಿಯ ಋಣ ತೀರಿಸಬೇಕು.
ಸದ್ಯ ಒಂದೆರಡು ಶೊಟ್ ನಲ್ಲಿ ಬ್ಯುಸಿ. ಎಲ್ಲಾ ಪುಸ್ತಕ ಓದಿ ಪುನಃ ಬರುತೇನೆ.
:)

1 comment:

Srinidhi said...
This comment has been removed by the author.
Related Posts with Thumbnails