Saturday, December 6, 2008

"ಎಷ್ಟು ದೃಷ್ಠಿ ಅಗಿತ್ತೊ ಮಗೂಗೆ"


ಚಟ....ಚಟ್...ಚಟಾರ್...ಚಟ....ಚಟ್...ಚಟಾರ್...
ಅಂತ ಮೂಲೆಯಲ್ಲಿ ಬೆಂಕಿ ಹಿಡಿದ ಪರಕೆ ಕಡ್ಡಿ ಅಗ್ನಿಗೆ ಆಹುತಿ ಆಗುತಿತ್ತು. ಅದರ ಬೆರಗು ಹುಟ್ಟಿಸುವ ಬೆಳಕಿಗೆ ಬೇಟೆಗೆ ಕೂತ ಬೆಕ್ಕಿನ ಹಾಗೆ ಕಣ್ಣು ಮಾಡಿ, "ಕಾಗೆ ಕಣ್ಣು, ಗೂಬೆ ಕಣ್ಣು, ನಾಯಿ ಕಣ್ಣು, ನರಿ ಕಣ್ಣು ಥು..ಥು..ಥೂ" ಅಂತ ನಿಂತಿರುತಿದ್ದ ಅಮ್ಮನ ಸೆರಗು ಹಿಡಿದು ನಿಂತು ನೋಡುತಿದ್ದೆ. ಸ್ವಲ್ಪ ಹೊತ್ತಿಗೆ, ಉರಿದು ಕಪ್ಪಾದ ಬೂದಿಯನ್ನ
ಹಣೆಗೆ ಹಚ್ಚಿ "ಇನ್ನೆಲ್ಲಾ ಸರಿ ಆಗುತ್ತೆ ಪುಟ್ಟ..ನೋಡು ಎಷ್ಟೊಂದು ಚಟ ಚಟ ಅಂತು ಅಂತ...ಎಷ್ಟು ದೃಷ್ಠಿ ಅಗಿತ್ತೊ ಮಗೂಗೆ" ರಮಿಸುತಿದ್ದಳು ಅಮ್ಮ.


ನಮ್ಮ ಮನೆಯ ಬಾಗಿಲ ಹಿಂದಿನ ಮೂಲೆ ಹೀಗೆ ದೃಷ್ಠಿ ತೆಗೆದು ತೆಗೆದು ಕಪ್ಪಾಗಿತ್ತು. ಬೇಡದೇ ಇದ್ದದ್ದನ್ನು ತಿಂದೋ, ಕೋಳಕು ನೀರಿನಲ್ಲಿ ಆಟ ಆಡಿಯೋ, ಯಾರದೊ ಜೊತೆಗಿನ ಜಗಳದ ಕವರಿಕೆ ಕನಸಿನಲ್ಲಿ ಮಾತಾಡಿಸಿದಾಗಲೋ ಇಲ್ಲ ಸ್ವಲ್ಪ ಜ್ವರ ಬಂದಾಗಲೂ, ಅಮ್ಮ ಮಾಡುತಿದ್ದ ಮೊದಲ ಕೆಲಸ "ದೃಷ್ಠಿ" ತೆಗೆಯೋದು.
ಇದೆಲ್ಲಾ ಯಾಕೆ ನೆನಪಾಯಿತು ಅಂದರೇ, ನನ್ನ ಮಗಳು, ಡಾನ್ಸಿಗೆ ಸೇರಿದ್ದಾಳೆ, ಹನುಮ್ಮಜ್ಜಯಂತಿಯ ಅಂಗವಾಗಿ ಮನೆಯ ಹತ್ತಿರದ ದೇವಸ್ಥಾನದಲ್ಲಿ ಅವಳದೊಂದು ಗ್ರೂಪ್ ಡಾನ್ಸ್. ಆ ಡಾನ್ಸಿಗಾಗಿ ಅವಳಿಗೆ ಹೊಸ ಲಂಗ, ಡಾಬು, ಗೆಜ್ಜೆ ಇತ್ಯಾದಿ. ಬಾನುವಾರ ಕಾರ್ಯಕ್ರಮ ಇದ್ದರೂ, ಇವತ್ತು ಡ್ರೆಸ್ ರಿಹರ್‍ಸಲ್. ಮೊದಲನೇ ಸಲ ಡಾನ್ಸಿಗೆ ಹಾಕೊ ಗೆಜ್ಜೆ ಹಾಕಿದ್ದೇ ತಡ ನನ್ನ ಮಗಳ ಕಾಲಿಗೆ ನವ ಚೈತನ್ಯ. ಘಲ್,ಘಲ್,ಘಲ್....ಮನೆಯಲ್ಲಾ ಸದ್ದು.
ಹಾಗೆ, ಅಲಂಕಾರ ಮಾಡಿಕೊಂಡು ಕ್ಲಾಸಿಗೆ ಹೊರಟಾಗ, ನಮ್ಮ ಪಕ್ಕದ ಮನೆಯವರೂ, ಓನರ್ರೂ, ಡಾನ್ಸ್ ಕ್ಲಾಸಿನ ಮಕ್ಕಳೂ, ಎಲ್ಲರೂ " ವಾವ್..ಸಿಮ್ರನ್...ಏನ್ ಚೆನ್ನಾಗಿದೆ...ಮುದ್ದಾಗಿದೆ ಕಣೇ" ಅಂತೆಲ್ಲಾ ಅಂದಿದ್ದೇ ತಡ, ನನ್ನ ಹೆಂಡತಿಗೆ ಚಡಪಡಿಕೆ ಶುರು. "ರಿ...ಮಗುಗೇ ದೃಷ್ಠಿ ಆಗುತ್ತೇನೋ ಕಣ್ರಿ, ಮನೇಗೆ ಬಂದ ಮೇಲೆ ದೃಷ್ಠಿ ತೆಗಿಬೇಕು" ಅಂದಳು. " ಅರೇ ಅದಕ್ಕೇನಂತೆ..ಒಂದಿಡೀ ಪರಕೇನೆ ಹಚ್ಚು ಆದ್ರೆ ಬಾಗಿಲ ಪಕ್ಕ ಕರ್ಟನ್ ಹುಷಾರು" ಅಂದು ನಕ್ಕೆ.
ಅವಳೂ ಮುಖ ಕೊಂಕಿಸಿ ನಕ್ಕಳು.

ನಮ್ಮ ದೇಶಕ್ಕೂ ಯಾರಾದ್ರು ದೃಷ್ಠಿ ತೆಗೀಬೇಕಿತ್ತೇನೋ ಅನ್ನುಸುತ್ತೆ...

1 comment:

Unknown said...

>> ನಮ್ಮ ದೇಶಕ್ಕೂ ಯಾರಾದ್ರು ದೃಷ್ಠಿ ತೆಗೀಬೇಕಿತ್ತೇನೋ ಅನ್ನುಸುತ್ತೆ...

ನಿಮ್ಮ ಇಡೀ ಬರಹದ ಮುಗ್ಧತೆ ಇಲ್ಲಿ ಸಡನ್ನಾಗಿ ತೆರೆದು ಕೊಂಡು ಚಾಟಿಯೇಟು ನೀಡುತ್ತೆ.

ಕೊಂಕಣಿಯಲ್ಲಿ ನಮ್ಮಮ್ಮ ಹಾಡುತ್ತಿದ್ದ ದ್ರಿಷ್ಟಿ ತೆಗೆಯುವ ಹಾಡಿನ ತುಣುಕು ಹೀಗಿದೆ.

ಆಲೆಲೋ ಮಾಲೆಲೋ
ದಿವ್ಯಾಚೆ ಕಾಜ್ಜಳೋ
ಅಮಣಾಲೆ ನಿಡ್ಲಾಕ
ಚಿಮಾಟ್ಲ್ಯೋ (ಹೀಗನ್ನುತ್ತ ದೇವರ ದೀಪದ ಮೇಲೆ ಕೈಯಾಡಿಸಿ ಮಗುವಿನ ಹಣೆಗೆ ಸವರುವುದು)

ಅದರ ಅರ್ಥ ಏನೆಂದು ಯೋಚನೆ ಮಾಡಬೇಕು.

Related Posts with Thumbnails