Monday, October 20, 2008

ಊರಿನ ಬ್ಯಾರಿಯ ಅಂಗಡಿಯ ಒಣ ಮೀನಿಗೂ, ಅಮೆರಿಕನ್ ಎಕಾನಮಿಗೂ

ನನ್ನ ಚಿತ್ರ..ಚಿಟ್ಟೆ ಚಿಟ್ಟೆ... ಬಣ್ಣದ ಚಿಟ್ಟೆ :)

ಊರಿನಿಂದ ಬಂದೆ...
ತುಂಬಿದ ಬಸ್ಸಿನಲ್ಲಿ ಎಲ್ಲೊ ಹೋಗಬೇಕಾದ್ರೆ,ಆ ಜನ,ಗದ್ದಲ,ಬೆವರು,ಬವಣೆ ಇವೆಲ್ಲದರ ಮದ್ಯೆ ನಾವು ಇಳಿಯೋ ಜಾಗ ಬಂತಾ ಅಂತ ಕಾತುರದಿಂದ ಕಾದು, ಇಳಿದು ತಕ್ಷಣ ಒಂದು ಧೀರ್ಘ ಸ್ವಾಸ ಎಳೀತೀವಲ್ಲ ಹಾಗೆ. ಗೊತ್ತು ಗುರಿ ಇಲ್ಲದೇ ಯಾವುದೋ ಊರಿಗೆ ಹೊರಟ ತುಂಬಿದ ಬಸ್ಸಿನಂತಹ ಬೆಂಗಳೂರಿನಿಂದ ತಪ್ಪಿಸಿಕೊಂಡು, ಊರಿನಲ್ಲಿ ಹೋಗಿ ಇಳಿದಾಗ, ಸಣ್ಣ ಸಮಾಧಾನ.
ಎಲ್ಲಾ ಹಸಿರಾಗಿದೆ, ಆಗ ತಾನೆ ನವರಾತ್ರಿ ಮುಗಿಸಿದ ದೇವಸ್ಥಾನಗಳ ದೀಪದಲ್ಲಿ ದೀಪಾವಳಿಗೆ ಹೊಸ ಬತ್ತಿ. ಬಣ್ಣ ಬಣ್ಣದ ಹೋವುಗಳು, ಗಾಡ ಹಸಿರು ಬಣ್ಣದ ನದಿಗಳು, ಎಂದೂ ಮೂಡದ ಚಿತ್ರದ ರಚನೆ ಯಲ್ಲಿರುವ ಮೋಡಗಳು.
ಆ ಕ್ಷಣಕ್ಕೆ ಬೇರೆಯದೆಲ್ಲಾ ಮರೆಸಿ, ನನ್ನನ್ನ ನನ್ನ ಊರಲ್ಲೇ ಅಥಿತಿಯಾಗಿಸಿತು. ಮಗಳಿಗಾಗಲೇ ರೆಕ್ಕೆ ಮೂಡಿತ್ತು. ನನ್ನವಳು, ಕಾಲಿಗಾಲೇ ಗೆಜ್ಜೆಕಟ್ಟಿದ ಪುಟ್ಟ ಕರುವಿನಂತಿದ್ದಳು.
ಪುತ್ತೊರಿನಿಂದ ಸ್ವಲ್ಪ ದೂರದ ಸವಣೂರು ನಾನು ಹೋಗಿದ್ದ ಊರು. ನನ್ನ ಹುಟ್ಟೂರಲ್ಲ, ಅದರೇ ನನ್ನನ್ನು ಅಗಾಧ ಮೋಡಿಮಾಡಿ ಮುಗ್ಧನನ್ನಾಗಿ ಮಾಡಿದ ಜಾಗ. ನನ್ನ ಆತ್ಮೀಯ ಸ್ನೇಹಿತ ನಾಗರಾಜರ ಊರು.
ಕಾಲೇಜಿನಲ್ಲಿದ್ದಾಗ ಒಮ್ಮೆ ಹೋಗಿದ್ದೇ ಹೋಗಿದ್ದು, ನಾನು ಇಲ್ಲಿಯವನೇನೊ, ಹೊದ ಜನ್ಮದಲ್ಲೆಲ್ಲೊ ಈ ತೋಟಗಳಲ್ಲಿ ಬಿಸಿಲೆಳೆಯಾಗಿದ್ದೆನೇನೊ ಅನ್ನಿಸುವಷ್ಟು ಹಿಡಿಸಿ ಹೋಯಿತು. ಅಲ್ಲಿಯೇ ಒಂದು ಜಾಗ ತೆಗೆದು ಮನೆ ಮಾಡುವ ಕನಸಿನಲ್ಲಿ ಮನೆಯೊಂದೇ ಬಾಕಿ ಉಳಿದಿದೆ.
ಒಂದಷ್ಟು ಚಿತ್ರಗಳಿವೆ, ಹಂತ ಹಂತ ವಾಗಿ ಹಂಚಿ ಕೊಳ್ಳುತ್ತೇನೆ.
ಅಂದ ಹಾಗೆ ಊರಿನಲ್ಲಿ ಕಂಡದ್ದು ಕೇಳಿದ್ದು.
೧. ಊರಿನ ಬ್ಯಾರಿಯ ಅಂಗಡಿಯ ಒಣ ಮೀನಿಗೂ, ಅಮೆರಿಕನ್ ಎಕಾನಮಿಗೂ ಸಂಭಂದ ಇದ್ದದ್ದು ಕಂಡು ಆಶ್ಚರ್ಯ ಆಯಿತು. ಅಮೆರಿಕದಲ್ಲಿ ಆದ ತಲ್ಲಣದಿಂದ ಊರಿನ ರಬ್ಬರಿಗೆ ಬೆಲೆಕಡಿಮೆಯಾಗಿದೆ, ಹಾಗಾಗಿ, ಅಲ್ಲಿಯ ರಬ್ಬರ ತೋಟದ ಕೆಲಸದವರಿಗೆ ದಿನಗೂಲಿ ಕಡಿಮೆಯಾಗಿದೆ. ಮತ್ತು ಅವರ ಆಪ್ತವಾದ ಒಣ ಮೀನು ಅವರಿಗೆ ತುಟ್ಟಿಯಾಗಿದೆ. ಒಣ ಮೀನು ಇದ್ಯಾವುದರ ಪರಿವೆ ಇಲ್ಲದೆ ಇನ್ನೊ ಅಂಗಡಿಯಲ್ಲೇ ಒಣಗುತ್ತಿದೆ.
೨. ಇತ್ತೀಚೆಗೆ ಸಿಡಿಲು ಬಡಿಯುವುದು ಊರಿನಲ್ಲಿ ತುಂಬಾ ಹೆಚ್ಚಿದೆ. ನಾನಲ್ಲಿರುವಾಗಲೇ ಅಲ್ಲಲ್ಲಿ ಸಿಡಿಲು ಬಡಿದು ಜಾನುವಾರು ಸತ್ತದ್ದು ಮತ್ತು ಮನೆಗಳೇ ಉರುಳಿಬಿದ್ದದ್ದು ಹೀಗೆ ಬಹಳ ಸುದ್ದಿ ಕೇಳಿದೆ. ಸ್ವಲ್ಪ ಮಳೆ ಹನಿಹಾಕಿದರೂ ತಲೆ ಹೊರಹಾಕಿ ನೋಡಲೂ ಹೆದರಿಕೆಯಾಗುತಿತ್ತು.
೩. ಹೆಚ್ಚು ಓದಿದ ತಲೆಮಾರೆಲ್ಲಾ ಸಾಫ್ಟ್ ವೇರು ಅದು ಇದು ಅಂತ ಊರು ಬಿಟ್ಟು ಹೆಚ್ಚು ಸಂಪಾದನೆ ಮಾಡಲು ಶುರುಮಾಡಿದಾಗ, ಅಲ್ಲೇ ಇರುವ ಪರಿಸ್ಥಿತಿ ಒದಗಿದ ಮಿಕ್ಕವರಿಗೆ, ಅಂತಹ ದುಡ್ಡು, ದೌಲತ್ತು, ಕಂಡು ಸ್ವಲ್ಪ ಮಂಡೆ ಬೆಚ್ಚ ಆಗಿದ್ದು ಸಹಜ. ಅಂತಹವರಿಗೆ ವರವಾಗಿ ಬಂದದ್ದು ರಬ್ಬರು. ಇದ್ದಕ್ಕಿದ್ದ ಹಾಗೆ ರಬ್ಬರು ಬಹಳ ಜೋರಾಯಿತು.
ಆಗ ನಡೆದದ್ದು ಶುದ್ಧ ದುರಂತ. ಅವರವರ ತೊಟದ ಅಂಚಿನಲ್ಲಿದ್ದ ಪುಟ್ಟ ಪ್ಪುಟ್ಟ ಕಾಡುಗಳನ್ನೂ ಕಡಿದು ಸಪಾಟು ಮಾಡಿ, ಕಾಗೆಕೂಡ ಗೂಡು ಕಟ್ಟದ ರಬ್ಬರು ಮರಗಳನ್ನು ಹಾಕಿದವರು ಹಲವರು. ಈ ಸಲ ಹೋದಾಗ, ಎಲ್ಲಾರ ತಲೆ ಮೇಲೆ ಕೈ. ಕಾರಣ, ರಬ್ಬರು ತನ್ನ ರೇಟು ಕಳೆದು ಕೊಂಡು ಪಾತಾಳಕ್ಕೆ ಇಳಿದಿತ್ತು. ಇವರು ಕಡಿದ ಕಾಡಿನಲ್ಲಿದ್ದ ಪುಟ್ಟ ಹಕ್ಕಿ ಅದ್ಯಾವಗಲೋ ಆತ್ಮ ವಷ್ಟೇ ಆಗಿ ಲೊಚಗುಡುತಿತ್ತು.
೪. ಈ ಎಕಾನಮಿ ಎಕ್ಕುಟ್ಟಿ ಹೋದದ್ದಕ್ಕೆ ಕುಶಿ ಪಡುವ ಕೆಲವರು ಊರಿನಲ್ಲಿದ್ದಾರೆ. ಅದೇ, ಊರುಬಿಟ್ಟು ಪರ ಊರು ಸೇರಿ ಊರನ್ನೆ ಮರೆತಿರುವ ಸಾಫ್ಟ್ ವೇರು ಗಳ ವೃದ್ಧ ತಂದೆ ತಾಯಿಗಳು. ಇನ್ನಾದರು ಮಗ ಸೊಸೆ, ದಣಪೆ ಯಾಚೆ ಎಲ್ಲಾದರೂ ಮೊಮ್ಮಗುವಿನ ಕೈ ಹಿಡಿದು ನಡೆದು ಬರುವುದು ಕಾಣುತ್ತದಾ ನೂಡುತಿದ್ದಾರೆ, ಮೊಮ್ಮಗನಿಗೆ ಮಿಂಚು ಹುಳು ತೋರಿಸಲಿಕ್ಕೆ.
೫. ಪಕ್ಕದ ಊರಿನ ಪುಟ್ಟ ಹುಡುಗಿ ಯೂಂದಕ್ಕೆ ಹಾವು ಕಚ್ಚಿ ಸತ್ತಿತಂತೆ. ಅಂಗಳದಲ್ಲಿ ಆಡುತಿದ್ದ ಮಗುವಿಗೆ ಮೃತ್ಯುವಾಗಿತ್ತು ಉರಗ. ದುಃಖ ಆಗಿದ್ದು ಏಕೆಂದರೇ, ಮನೆಯಲ್ಲಿ ಮಗು ಒಂದೇ ಇತಂತೆ "ಅಮ್ಮ ಹಾವು ಕಚ್ಚಿತೂ" ಅಂತ ಹೇಳಿದರೂ ಕೇಳಿಸಿಕೊಳ್ಳಲು ಅಮ್ಮ ಇರಲಿಲ್ಲವಂತೆ. ಸ್ವಲ್ಪ ಹೊತ್ತು ಪಕ್ಕದ ಮನೆ ಹೋಗಿದ್ದ ಅಮ್ಮ ಬಂದಾಗ ಬಹಳ ನಿಧಾನವಾಗಿತಂತೆ. ಮಗುವಿಗೆ ಎಂಟು ವರ್ಷ, ನನ್ನ ಮಗಳಿಗೂ ಅಷ್ಟೆ.

1 comment:

Unknown said...

ಮಹೇಂದ್ರ,
ನಿಮ್ಮ ಬರಹಗಳೂ ಕೂಡ ನಿಮ್ಮ ಮಾತುಗಳಂತೆ ತುಂಬ articulate ಆಗಿವೆ. ಎಲ್ಲೋ ಕಳಕೊಂಡ ಗೆಳೆಯನೊಬ್ಬ ಮತ್ತೆ ಇಲ್ಲೇ ಪಕ್ಕದ ರೂಮಿನಲ್ಲಿ ಇದ್ದಂತೆ ಭಾಸವಾಗಿ ಖುಷಿ ಆಯಿತು.

ಹೀಗೆ ಬರೀತಾ, ಸಣ್ಣಗೆ ದಿಗಿಲು ಸೃಷ್ಟಿಸುತ್ತಾ ಮುಂದುವರೆಸಿ,

ಗುರು ಬಾಳಿಗ
http://yaadukannada.blogspot.com/
http://bantwalkar.blogspot.com/

Related Posts with Thumbnails