ಸೋನಿ - ಮೈಸೂರಿನ ಹುಡುಗಿ. ಮೊನ್ನೆ ಮೊನ್ನೆ ಎಲ್ಲರ ಹಾಗೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿ ಕನಸುಗಳ ಪುಟ್ಟ ಸೌಧ ಕಟ್ಟುತಿದ್ದ ಮತ್ತೊಬ್ಬ ಹೆಣ್ಣು ಮಗಳು. ಆತ್ಮಹತ್ಯೆ ಮಾಡಿಕೊಂಡಳು.
ಅಪ್ಪ ಅಮ್ಮನಗೋಳು ನೋಡಿದರೆ ಅಯ್ಯೋ ಅನ್ನಿಸುತ್ತದೆ. ಯಾರೋ ನೀಚರು ಕೊಟ್ಟ ಕಿರುಕುಳಕ್ಕೆ ಎಲ್ಲರನ್ನೂ ಬಿಟ್ಟು ಹೋಗೇ ಬಿಟ್ಟಳು ಪುಟ್ಟ ಹುಡುಗಿ.
ಇವತ್ತಿನ ಪೇಪರಿನಲ್ಲಿ ಬರೆದಿದ್ದಾರೆ, ಅವಳನ್ನು ಕೆಲಸವೇ ಇಲ್ಲದೆ ಕೂರಿಸಿದ್ದರಂತೆ, ಒಂದು ವಾರ. ಕೆಲವು ಹೆಚ್ಚು ಅಂಕಗಳನ್ನು ಗಳಿಸಲೇಬೇಕಿದ್ದ ಆಕೆ, ಆ ಅಂಕಗಳಿಗಾಗಿ ಕೆಲಸ ಮಾಡಲೇಬೇಕಿತ್ತು. ಹೊರದೇಶದ ಕನಸಿತ್ತು.
ಏನನ್ನಿಸಿತ್ತೋ ಏನೊ, ಮನಸ್ಸು ಮುದುಡಿದ ಆ ಕ್ಷಣದಲ್ಲಿ ಪತ್ರ ಬರೆದಿಟ್ಟು ಪುಸ್ತಕ ಎತ್ತಿಟ್ಟು ಹೋಗಿಬಿಟ್ಟಳು.
ಇಷ್ಟೆಲ್ಲದರ ಮದ್ಯ ನನಗೆ ಕೊರೆಯುವ ಒಂದೇ ವಿಚಾರ ಅಂದರೆ ಸಾಯುವ ಮುಂಚೆ ತನ್ನನ್ನ ಹೊತ್ತು,ಹೆತ್ತು,ಸಾಕಿ ಸಲಹಿ, ತನ್ನ ಬಗ್ಗೆ ನೀರೀಕ್ಷೆ ಇಟ್ಟ ಅಪ್ಪ ಅಮ್ಮ ನೆನಪಿಗೆ ಬರಲಿಲ್ಲವೇ?ಗೊತ್ತಿಲ್ಲ.
ನನಿಗನ್ನಿಸೋದು, ತಂದೆ ತಾಯಿಗಳು, ಮಕ್ಕಳು ಪುಟ್ಟವರಿರುವಾಗಲಿಂದ ಆಗಾಗ ಮಕ್ಕಳ ಮನಸ್ಸನ್ನು ತುಂಬುವುದು ಅವರ ಭವಿಷ್ಯದಬಗ್ಗೆ ಇವರಿಗಿರುವ ಹೆದರಿಕೆಗಳನ್ನ. "ನೋಡು ಚೆನ್ನಾಗಿ ಓದಬೇಕು, ಒಳ್ಳೆ ಕೆಲಸ ಮಾಡಬೇಕು,ದೊಡ್ಡ ಮನುಷ್ಯ ಆಗಬೇಕು" ಇತ್ಯಾದಿ. ಸ್ವಲ್ಪ ದೊಡ್ಡವರಾದ ಮೇಲೆ, ಮತ್ತೊಂದು ತರಹದ ಒತ್ತಡ,"ನಿಮ್ಮ ಚಿಕ್ಕಪ್ಪನ ಮಕ್ಕಳು ನೋಡು ಹೇಗಿದ್ದಾರೆ, ನೀನು ಹಾಗಾಗ ಬೇಕು" ಅಥವ "ನಿಮ್ಮ ದೊಡ್ಡಪ್ಪನ ಮಕ್ಕಳಹಾಗೆ ನೀನೂ ಸಂಪಾದಿಸಬೇಕು" ಇಷ್ಟೆ. ಹೀಗೆ ಬೆಳೆದ ಮಕ್ಕಳಿಗೆ, ಕೆಲಸ, ಸಂಪಾದನೆ ಬಹಳ ಮುಖ್ಯ ಆಗಿ, ಮಿಕ್ಕೆಲ್ಲಾ ಪುಟ್ಟ ಪುಟ್ಟ ಸಂತೋಷಗಳು ಗೌಣವಾಗುತ್ತದೆ.
ಯಾವಾಗ ತಾವು ಹುಟ್ಟಿಬೆಳೆದ ಬಹು ಮುಖ್ಯ ಗುರಿ ಕೈತಪ್ಪಿ ಹೋಗುತ್ತಿದೆ ಅನ್ನಿಸುತ್ತದೋ, ದಿಕ್ಕುತೋಚದಂತವರಾಗಿ ಹೀಗಾಗುತ್ತದೆ.
ಹೀಗಲ್ಲದೇ, "ನೋಡು ಕೆಲಸ ಮುಖ್ಯ, ಹಸಿವು ನೀಗಿಸಕ್ಕೆ, ಸಂಬಂದ ಉಳಿಸಿಕೊಳ್ಳಕ್ಕೆ, ಜಗತ್ತಿನ ಪುಟ್ಟ ಪುಟ್ಟ ಸಂತೊಷಗಳನ್ನ ನೋಡಿ ಅನುಭವಿಸುವುದಕ್ಕೆ ಬೇಕಾಗುವ ಹಣ ಸಂಪಾದನೆ ಮಾಡಲಿಕ್ಕೆ ಅಷ್ಟೇ ಕೆಲಸ ಮುಖ್ಯ. ಒಬ್ಬ ವೆಕ್ತಿ ಮನೆಯಿಂದ ಹೊರಗೆ ಕೆಲಸ ಅಂತ ಹುಡುಕಿ ಹೊರಡುವುದು, ತನ್ನ ಮನೆಯ ಸಂತೊಷಕ್ಕಾಗಿ ಮತ್ತು ಅಲ್ಲಿರುವ ನಗುವಿಗೆ ನೀರೆರೆದು ಪೋಷಿಸುವುದಕ್ಕೆ. ಆದರೆ, ಮನೆಯೇ ನೆನಪಿಗೆ ಬಾರದಷ್ಟು ಕೆಲಸಕ್ಕೆ ಗುಲಾಮನಾಗಬೇಕಿಲ್ಲ. ಅಂತಹ ಕೆಲಸದಿಂದ ಬರುವ ಹೇರಳ ಹಣ ಯಾವ ಪುರುಷಾರ್ಥಕ್ಕೆ?" ಅಂತ ಒಮ್ಮೆ ಮಕ್ಕಳಿಗೆ ಹೇಳುವ ಧೈರ್ಯ ನಮ್ಮಲ್ಲಲ್ಲವೇಇಲ್ಲ. ಒಳ್ಳೆ ಸ್ಕೂಲು ಅಂತ, ಊರಹೊರಗಿನ ಕಾನ್ವೆಂಟಿಗೆ, ಬೆಳಂಬೆಳಿಗ್ಗೆ ತಗಡಿನ ಡಬ್ಬಿಯಂತಹ ವ್ಯಾನಿನಲ್ಲಿ ಮಕ್ಕಳನ್ನ ಹಾಕಿ ಕಳಿಸುವುದರಿಂದ ಮೊದಲ್ಗೊಳ್ಳುವ ನಮ್ಮ ಅತಿ ಆಸೆ,ಮೊಂದೊಂದು ದಿನ ದುರಂತ ವಾಗಬಹುದೆಂದು ನಾವು ಅರಿಯುವುದೇ ಇಲ್ಲ. ಮಕ್ಕಳನ್ನು, ಯಾವುದೋ ಕಂಪನಿಯ ಮುಖ್ಯ ಬಿಡಿಬಾಗ ಮಾಡುತ್ತಿರುವ ನಾವು, ತಂದೆ ತಾಯಿಗಳು ಇವತ್ತು ಇಂತಹ ಘಟನೆಗಳಿಂದ ಕಲಿಯುವ ಪಾಠ ಏನೆಂದರೆ....ನಾವು ಬೆಳೆಸುತ್ತಿರುವ ಮಕ್ಕಳಿಗೆ ಅವರದೇ ಆದ ವೆಕ್ತಿತ್ವವೇ ಇಲ್ಲ. ಒಂದೋ, ಅವರು ಮ್ಯಾನೇಜರು, ಇಂಜಿನರೂ ಆಗಿರುತ್ತಾರೊ ಹೊರತು, ಒಬ್ಬ ಮಗ, ಮಗಳು, ಒಳ್ಳೆ ಗಂಡ, ಹೆಂಡತಿ ಆಗುವುದೇಇಲ್ಲ.
ಸೋನಿಗೆ ಇಂತಹ ಮಾತನ್ನ ಮೊದಲೇ ಹೇಳಿದ್ದರೇ, ಯಾರೋ ಕಿರುಕೊಳ ಕೊಟ್ಟಾಗ, "ಇದೆಲ್ಲಾ ಇದ್ದದ್ದೇ, ಎರಡು ದಿನ ಮನೇಗೆ ಹೋಗಿ ಅಮ್ಮನ ಅಡಿಗೆ ಉಂಡು ಅಮೇಲೆ ಏನ್ ಆಗುತ್ತೆ ನೋಡಣ" ಅಂತ ಅಮ್ಮನ ಹತ್ತಿರ ಹೋಗುತಿದ್ದಳೊ ಏನೊ....
1 comment:
ನಮಸ್ತೆ ಮಹೆನ್ ಸಿಂಹ ಅವರಿಗೆ....
ನಿಮ್ಮ ಫೋಟೋಗಳು ತುಂಬಾ ವಿಭಿನ್ನವಾಗಿವೆ. ಬ್ಲಾಗ್ ಕೂಡಾ ಅಷ್ಟೇ ಚೆನ್ನಾಗಿದೆ. ನಿಮ್ಮ ಛಾಯಾಯಾತ್ರೆ ಹೀಗೆಯೇ ಮುಂದುವರೆಯಲಿ.
Laxmikanth
yekantha.blogspot.com
Post a Comment