ಸ್ನಾನ ಮಾಡಿ ಏನೊ ಬಟ್ಟೆ ಹುಡುಕಲು ಕಪಾಟಿನ ಬಳಿಹೋದ ನನಗೆ ತಕ್ಷಣ ನಾನು ಹುಡುಕಿದ "ಶೊರ್ಟ್ಸ್" ಸಿಕ್ಕಲಿಲ್ಲ. "ಎಲ್ಲಿ ಹೋಯಿತು ಇದು ಹಾಳಾದ್ದು" ಅಂದು ಕೊಂಡು ಅವಳನ್ನು ಕರೆಯಲು ಕೊರಳು ಏರಿಸುವ ಸಮಯದಲ್ಲಿ ಕೈಗೆ ತಗುಲಿತು ಮೃದುವಾದ,ಅಚ್ಚ ಬಿಳುಪಿನ ನನ್ನ ಪಂಚೆ.
ತಟ್ಟನೆ ನೆನಪುಗಳ ಪುಟ್ಟ ತಾಳೆಗರಿಯ ಪುಸ್ತಕವನ್ನು ಯಾರೋ ತೆಗೆದಿಟ್ಟ ಹಾಗಾಯಿತು.
ನನ್ನ ಚಿಕ್ಕಂದಿನಿಂದ ನನ್ನ ಜೀವನದ ಯಾವುದೋ ಅಂಗ ಎನ್ನುವಂತೆ, ನಾನು ಗಮನವಿಡದಿದ್ದರೂ ನನ್ನ ಸುತ್ತ ಇದ್ದದ್ದು ನನ್ನ ಅಪ್ಪನ ಅಚ್ಚ ಬಿಳುಪಿನ ಪಂಚೆ.
ಪುಟ್ಟ ಹುಡುಗನಿಗೆ, ಅಮ್ಮ, ಹಳದಿ ಬಣ್ಣದ ಸೊಪು ಬಾರಿನಿಂದ ಆಗತಾನೆ ಒಗೆದು, ನೀಲಿ ಹಾಕಿ ಕಬ್ಬಿಣದ ತಂತಿಯಮೇಲೆ ಒಣಗಲು ಹಾಕಿದ ಪಂಚೆಗಳು ಹಾರಾಡುವುದನ್ನು, ಆಕಾಶದ ನೀಲಿಯ ಹಿನ್ನೆಲೆಯಲ್ಲಿ ನೋಡುವುದು ಒಂದು ಸಂತಸ. ಬಿಳಿಮೊಡಗಳದಿನದಂದು ಮೊಡದ ಒಳಗೆ ಪಂಚೆ ಅಲ್ಲಲ್ಲಿ ಲೀನವಾದರೆ, ಗಾಳಿ ಬಿರುಸಾದ ದಿನ,ಭರ್ರನೇ ಹಾರಾಡುವ ಗಾಳಿಪಟ.
ಗಾಳಿಯಲ್ಲಿ ಒಣಗುತ್ತಾ ಹಾರಾಡುವ ಪಂಚೆಗಳ ಮದ್ಯದಲ್ಲಿ ಓಡಾಡುವಾಗ ಒದ್ದೆಯಾದ ಪಂಚೆಯ ಅಂಚು ಕೆನ್ನೆಗೆ ತಾಕಿ ಏನೊ ಸಂತಸ. "ಈಗ ಒಗೆದಿರೊ ಬಟ್ಟೆ, ಕೊಳೆಯಾಗುತ್ತೆ ಬಿಡೊ" ಅಂತ ಅಮ್ಮನ ಕೂಗು.
ಅಪ್ಪ ಯಾವಾಗಲು ಶುಬ್ರವಾದ ಪಂಚೆಯನ್ನೆ ಧರಿಸುತ್ತಿದ್ದದ್ದು. "ಭಿಷ್ಮ ಶ್ವೇತ ವಸ್ತ್ರಧಾರಿ ಗೊತ್ತ? ಬಿಳಿಬಟ್ಟೆ ನಮ್ಮ ಮನಸ್ಸಿನ ಸಂಕೇತ ಆಗಬೇಕು" ಅಂತ ಆಗೊಮ್ಮೆ ಈಗೊಮ್ಮೆ ತನ್ನ ಸ್ನೇಹಿತರಲ್ಲಿ ಮಾತಾಡುವಾಗ ಅಪ್ಪಹೇಳಿದ್ದನ್ನು ಕೇಳಿದ್ದೆ. ನಿಜ ಹೇಳಬೇಕೆಂದರೆ, ನಾನು ಅಪ್ಪ ಪ್ಯಾಂಟು ಹಾಕಿದ್ದನ್ನು ನೋಡೇ ಇಲ್ಲ.
ಪಂಚೆ ಎಂತಹ ಸಿಂಪಲ್ thought ಅಲ್ಲವ. ಒಂದು ಇಷ್ಟುದ್ದದ ಬಿಳಿಬಟ್ಟೆ. ಆಗ ನಮ್ಮ ಹಿರಿಯರು ಮಾಡುತಿದ್ದ ಕೆಲಸ ಕಾರ್ಯಗಳಿಗೆ ಬಹಳ ಸಹಜವಾಗಿ ಹೊಂದಿಕೊಂಡು ಹೋಗುತಿದ್ದ ದಿರಿಸು. ದೇವಸ್ಥಾನದ ಸರದಿಯಲ್ಲಿದ್ದಾಗ ಕಾಲಿನ ತುದಿಯವರೆಗೆ ಬಿಟ್ಟು ಕೈಮುಗಿದು ನಿಂತರೇ, ಏನೋ ಭಾರವಾದ ವಸ್ತುವನ್ನು ಹೆಂಡತಿ ಎತ್ತಿಡಲು ಕರೆದರೆ, ಪಂಚೆ ಮಂಡಿಯವರೆವಿಗೆ ಎತ್ತಿಕಟ್ಟುವ ಪರಿಯೇ ಮನಸ್ಸಿನ ಸಂಕಲ್ಪದ ಸಂಕೇತ. ಎಲ್ಲೊ ಹೋಳೆಯಲ್ಲಿ ಸ್ನಾನ ಮಾಡಿ ಹಾಗೆ ಒಂದು ರೌಂಡು ತಲೆ ವರೆಸಿ ಸುತ್ತಿದರೆ ಬೈರಾಸು [ಟವಲ್ಲು], ಮದ್ಯಾನಃದ ಬಿಸಿಲಿನಲ್ಲಿ ನೆಂಟರ ಮನೆಯ ಜಗಲಿಯಲ್ಲಿ ಹಾಸಿದರೆ ಅದೇ ಹಾಸಿಗೆ. ಅಧ್ಬುತವಾದ ಒಂದು ತುಂಡು ಬಿಳಿಯ ಪರಂಪರೆ, ಪಂಚೆ.
ನಾನು ಯಾವಾಗಲು ತೊಡುತಿದ್ದದ್ದು ಎಲಾಸ್ಟಿಕ್ ಚಡ್ಡಿ. ಊರಿಗೆ ಹೋದಾಗ ನನ್ನ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳೆಲ್ಲಾ ಆಗಲೇ ಪಂಚೆ ಉಡುತಿದ್ದರೂ ನಾನು ಮಾತ್ರ ಚಡ್ಡಿಯಲ್ಲಿ ವಿಭಿನ್ನವಾಗಿರುತಿದ್ದೆ. ಅದರ ಕಾರಣಕ್ಕಾಗಿ ನಾನು ಪೇಟೆಯಿಂದ ಬಂದವನೆಂಬ ಪ್ರಭೆಮೂಡಿ, ಆಟದಲ್ಲಿ ನನಗೆ ರಿಯಾಯಿತಿ. ಆದರೂ, ನನಗೆ ಪಂಚೆಯ ಸೆಳೆತ ಆಗಲೇ ಶುರುವಾಗಿತ್ತು. ಆ ಆ ಸಮಯಕ್ಕೆ ಸರಿಯಾಗಿ, ವಿಚಿತ್ತ್ರ ವಿಚಿತ್ರ ರೀತಿಯಾಗಿ ಪಂಚೆ, ಎತ್ತಿಕಟ್ಟಿ, ಸುತ್ತಿಕಟ್ಟಿ, ಉದ್ದಬಿಟ್ಟು, ಘಂಟು ಹಾಕಿ ನನ್ನ ಸ್ನೇಹಿತರೆಲ್ಲಾ ಓಡುವುದು,ಹಾರುವುದು,ಮರಹತ್ತುವುದು,ಈಜುವುದು ಮಾಡುವುದನ್ನ ನೋಡಿದರೇ ನನಗೆ ವಿಸ್ಮಯ. ಇದಕ್ಕೆಲ್ಲಾ ಬಹಳ ದಿನಗಳ ಅಬ್ಯಾಸವೇ ಬೇಕು, ನನ್ನಿಂದಾಗುವುದಿಲ್ಲ ಅನ್ನಿಸುತಿತ್ತು.
ಯಾವಗಲೋ ಒಮ್ಮೆ, ದುರ್ಗಾಪೂಜೆಯದಿನ, ರಾತ್ರಿಯ ಆರತಿಯ ಸಮಯದಲ್ಲಿ ಎಲ್ಲರೂ ಪಂಚೆಯಲ್ಲಿರಬೇಕೆಂಬ ನಿಯಮಕ್ಕೊ ಏನೊ, ಅಥವ ಅಷ್ಟು ಎತ್ತರವಿದ್ದ ನಾನು ಚಡ್ಡಿಯಾಲ್ಲಿ, ಒಬ್ಬನೇ, ಅಬಾಸದಂತಾಗುತಿದ್ದೇನೆ ಎಂದೋ, ಯಾರೊ "ಪೋದು ಒಂಜಿ ಮುಂಡು ತುತೊನ್ಲ ಮಾರಾಯ" [ಹೋಗಿ ಒಂದು ಪಂಚೆ ಉಟ್ಟುಕೊ ಮಾರಾಯ] ಅಂದರು. ಕೈಗೆ ಬಂದ ಪಂಚೆ, ಮೈಗೆಲ್ಲಾ ಸುತ್ತಿದರೊ ಏನೊ ಸರಿಯಾಗುತ್ತಿರಲಿಲ್ಲ. ಒಮ್ಮೊಮ್ಮೆ ಹೆಜ್ಜೆ ಇಡಲಾಗದಷ್ಟು ಬಿಗಿಯಾದರೇ, ಮತ್ತೊಮ್ಮೆ ಎಡವಿ ಬೀಳುವಷ್ಟು ಉದ್ದವಾಗಿ ಕಟ್ಟಿಕೊಳ್ಳುತಿದ್ದೆ. ಹೇಗೋ ಹಾಗೆ ಹೀಗೆ ಮಾಡಿ ಸುತ್ತಿಕೊಂಡು ತೊಡೆಯ ಸಂದಿಯಲ್ಲಿ ಗಾಯವಾದವರ ಹಾಗೆ ಕಾಲು ಆಚೆ ಈಚೆ ಇಟ್ಟು ನಡೆಯುವಾಗ ಎಲ್ಲರ ಗೇಲಿ.
{ಇನ್ನೂ ಇದೆ}
No comments:
Post a Comment