ಏ ಸಿ ಬಸ್ಸೂ ಮತ್ತು ನಂದಿ ಸಗಣಿಯೂ...
ಕನ್ನಡದ ಬಗ್ಗೆ ಹಗುರವಾಗಿ ಯಾರಾದ್ರು ಮಾತಾಡಿದ್ರೆ, ತಿರಸ್ಕಾರವಾಗಿ ನೋಡಿದ್ರೆ ಆಗೋ ಸಂಕಟಕ್ಕೆ ಚಿತ್ರಕಟ್ಟೋದು ಕಷ್ಟ. ಒಂದು ಸುಂದರ ಭಾಷೆ, ಯಾರಿಗೂ ತೊಂದರೆ ಕೊಡದ ಸಮೃಧ್ದ ಭಾಷೇ, ಅದನ್ನ ಅರ್ಥ ಮಾಡಿಕೊಳ್ಳದೇ ಹೇಗೆ ಉದಾಸೀನ ಮಾಡ್ತಾರೆ, ಅದರಲ್ಲೂ ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ನಮ್ಮಜನ ಅಂತ ಸ್ವಲ್ಪ ಬೇಸರವಾಗುತ್ತದೆ. ಅವಕಾಶ ಸಿಕ್ಕರೆ, ಕನ್ನಡದ ಸದ್ಗುಣ, ಹಿರಿತನ ಇವನ್ನೆಲ್ಲಾ ಸಿಕ್ಕವರಿಗೆ ಹೇಳಿ ಸ್ವಲ್ಪ ಕನ್ನಡ ಸೇವೆ ಮಾಡಿದೆ ಅನ್ನುವ ಧನ್ಯತೆ ಮಾಡಿಕೊಳ್ಳುವುದು ನನ್ನ ಅಬ್ಯಾಸ.
ಆದರೆ, ಕೆಲವೊಂದು ಸನ್ನಿವೇಶಗಳು ಹೇಗೆ ಆಗುತ್ತವೆ ಎಂದರೆ, ಅಂತಹ ಜಾಗದಲ್ಲಿ ನಾನು ಕನ್ನಡದವನೂ ಅಂತ ಹೇಳಿಕೊಳ್ಳಕ್ಕೆ ಆಗದೇ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಎಲ್ಲಿ ಪಕ್ಕದಲ್ಲಿ ಕುಳಿತಿರುವ ಅನ್ಯ ಭಾಷಿಕರು.."ಓ ಹೋ..ನೀನೇನ ಕನ್ನಡಿಗ...ಹೇ..." ಅಂತ ಎಲ್ಲಿ ನಕ್ಕು ಬಿಡ್ತಾರೋ ಅನ್ನಿಸಿ ಮುಜುಗರವಾಗುತ್ತದೆ.
ನೆನ್ನೆ ಹಾಗಾಯಿತು. ಮಂಗಳೂರಿನಿಂದ ಮದ್ಯಾನಃ ಹೊರಟ ಏ ಸಿ ಓಲ್ವೊ ಬಸ್ಸು. ಮಂಗಳೂರು ದಾಟಿದ ನಂತರ ಸುತ್ತ ಹಸಿರು...ಆಗ ತಾನೆ ಬಿಟ್ಟ ಮಳೆ..ವಹ್..ಅನ್ನು ವಂತಹ ದೃಶ್ಯ ಸಿರಿ. ವೋಲ್ವೋ ಬಸ್ಸಿನ ದೊಡ್ಡ ಕಿಟಕಿಯಿಂದ ಹೊರನೋಡಲು ಬಹಳ ಚಂದ. ಪಕ್ಕದಲ್ಲಿ ಒಬ್ಬ ಮಲಯಾಳಿ, ಆಚೆ ಒಬ್ಬಕೂರ್ಗಿ ಉಪನ್ಯಾಸಕಿ, ಮುಂದೆ ಒಬ್ಬ ಆಂದ್ರದ ಟೆಕ್ಕಿ, ಹಿಂದೆ ಒಂದು ಹಿಂದಿ ಕುಟುಂಬ ಹೀಗೆ...ಸುತ್ತಲೂ ಬೇರೆ ಬೇರೆ ಭಾಷೆ ಕೇಳುತ್ತಲಿತ್ತು. ನಾನು ಹೊರನೋಡುತ್ತಾ ಕುಳಿತೆ. ಸುಳ್ಯ ಮುಟ್ಟಿರಬಹುದು, ಕಣ್ಣು ನಿದ್ದೆಗೆ ಸಿಕ್ಕು..ಸಣ್ಣದಾಗಿ ತನ್ನ ಅಂಗಡಿಯನ್ನು ಮುಚ್ಚುತಲಿತ್ತು, ಅಷ್ಟರಲ್ಲಿ ಟೀವಿಯ ಶಬ್ಧ. ಹಮ್...ಯಾವುದು ಚಿಲನ ಚಿತ್ರ ಹಾಕ್ತಾನೆ..ಕೊಲ್ತಾನಲ್ಲಪ್ಪಾ...ಇಷ್ಟು ಒಳ್ಳೆ ಪ್ರಕೃತಿ ಹೊರಗೆ ಇರಬೇಕಾದ್ರೆ ಇದು ಯಾರಿಗೆ ಬೇಕು ಅಂತ ಸಣ್ಣಗೆ ಕಿರಿ ಕಿರಿ ಶುರುವಿಟ್ಟಿತು.
ಹಾಗೇ ಹೀಗೆ...ನೆಗೆದು ಕುಣಿದು..ನೆಟ್ಟಗಾದ ಟೀವಿ ಪರದೆ ಮೇಲೆ ಮೋಡಲು ಶುರುವಾದದ್ದು.."ನಂದಿ" ಎನ್ನುವ ಕನ್ನಡ ಚಿತ್ರ. ಯಾರು ಮಾಡಿದ್ರು, ಯಾಕೆ ಮಾಡಿದ್ರು ಅನ್ನುವ ಯಾವ ವಿಷಯವೂ ಇಲ್ಲಿ ಅಪ್ರಸ್ಥುತ. ಆದ್ರೆ ಇಂತಹ ಚಿತ್ರ ಮಾಡದೆ ಇದ್ದಿದ್ದರೆ ಯಾವ ಕನ್ನಡಿಗ ಕೊರಗಿ ಸಾಯುತಿದ್ದ. ತಲೆಬುಡವೇ ಇಲ್ಲ ಅಶ್ಲೀಲ ಹಾಸ್ಯ, ಐಟಮ್ ಸಾಂಗು..ಕೋಡಂಗಿ ಹಾಗೆ ಆಡುವ ವಿಲನ್. ಒಟ್ಟು ಒಂದು ಟಾರ್ಚರ್.
ಚಿತ್ರದ ನಾಯಕಿ ಇಂಟ್ರಡಕ್ಷನ್ ನೋಡಿ ಮೈ ಪರಚಿಕೊಳ್ಳುವ ಹಾಗಾಯಿತು. ಆಕೆ ಕಾಲೇಜಿಗೆ ಮೊದಲ ದಿನ ಬಂದು, ತನ್ನ ಸೀನಿಯರ್ ಗಳ ಎದುರು ನಿಂತು. "ಹೇ ನನ್ನ ರಯ್ಯಾಗ್ ಮಾಡ್ರೋ..ರೇಪ್ ಮಾಡ್ತೀರೇನ್ರೋ...ಸಿಗರೇಟ್ ಇದ್ಯಾ..ಚುಟ್ಟ ಇದ್ಯಾ..." ಅಂತ ಮಾತಾಡುವಾಗ..ಸುತ್ತಲಿದ್ದವರ ಮುಖ ನೋಡಿ ಕನ್ನಡಿಗನಾಗಿ ಅತ್ಯಂತ ಮುಜುಗರವಾಗಿ ಬಸ್ಸು ನಿಲ್ಲಿಸಿ ಎಲ್ಲಾದ್ರು ಓಡಿಹೋಗಣ ಅನ್ನಿಸಿತು. ಪಕ್ಕದ ಸೀಟಿನ ಕೂರ್ಗಿ ಆಂಟಿ ಮುಖ ಕಿವುಚಿ, ತಲೆ ಓರೆ ಮಾಡಿ ಪಕ್ಕಕ್ಕೆ ಒರಗಿದರು. ಮಲಯಾಳೀ..."ವೈ ಡು ದೇ ಹ್ಯಾವು ಟು ಪ್ಲೇ ಯೆ ಮೂವಿ ಇನ್ ಏ ಬಸ್.." ಅಂತ ಗೊಣಗಲಿಕ್ಕೆ ಶುರು ಮಾಡಿದ.
ಕನ್ನಡದ ದೊಡ್ಡ ದೊಡ್ಡ ಕೃತಿಗಳನ್ನ ಯಾರು ಯಾವಾಗಲೂ ಬಗಲಲ್ಲಿ ಇಟ್ಟುಕೊಂಡು ತಿರುಗುವುದಿಲ್ಲ. ದೊಡ್ಡ ದೊಡ್ಡ ಕನ್ನಡಿಗರ ಸಾಧನೆಗಳು ಸಾರ್ವಜನಿಕ ಸ್ಥಳಗಳಲ್ಲಿ, ಟೀವಿಯಲ್ಲಿ ಬಿತ್ತರಿಸುತ್ತಿರುವುದಿಲ್ಲ. ಭಾವಗೀತೆಗಳು ರೇಡಿಯೋ ದಲ್ಲಿ ಕೇಳುವುದಿಲ್ಲ. ಕನ್ನಡದ ಇತಿಹಾಸ ಪೋಸ್ಟರಿನಲ್ಲಿ ರಾಚುವುದಿಲ್ಲ. ಆದರೆ..ಒಂದು ಚಲನ ಚಿತ್ರ..ನಾವು ಬೇಡ ಅಂದರೂ ನಮ್ಮ ಎದುರಿಗೆ ಆಗಾಗ ಕಾಣುತ್ತದೆ. ಬೆಂಗಳೂರಿನ ರಸ್ತೆಗಳಲ್ಲಿ..ಬಸ್ಸಿನ ಟೀವಿಗಳಲ್ಲಿ...ಚಿಕಿತ್ಸೆಗಾಗಿ ಸರಧಿಯಲ್ಲಿ ಕಾಯುವಾಗ ಆಸ್ಪತ್ರೆಗಳಲ್ಲಿ...ಹೀಗೆ...
ಇಂಥಹ ಕಡೆ ಅಸಂಸ್ಕೃತಿಕವಾದ ಚಿತ್ರಗಳು ಕನ್ನಡಿಗರಿಗೆ ಎಂಥಹ ತೊಂದರೆಗೆ ಸಿಕ್ಕಿಸ ಬಹುದು. ಆಗ ಯಾರದ್ರು ಕನ್ನಡದ ಬಗ್ಗೆ ಹಗುರವಾಗಿ ಮಾತಾಡಿದರೆ ಹೇಗೆ ಎದುರುತ್ತರ ಕೊಟ್ಟು ಸಮರ್ಥಿಸಿಕೊಳ್ಳುವುದೆಂದೇ ತಿಳಿಯುವುದಿಲ್ಲ.
ಕನ್ನಡ ಚಿತ್ರನಟರೇ....ಸಾರಿಗೆ ಸಂಸ್ಥೆಯ ಮುಖ್ಯಸ್ಥರೂ ಕೂಡ..ತಿಳಿದವರು ನಾಲ್ಕು ಜನರನ್ನು ಕೂರಿಸಿ..ಯಾವ ಯಾವ ಚಿತ್ರಗಳನ್ನು ಬಸ್ಸಿನಲ್ಲಿ ತೋರಿಸಬಹುದೂ ಎಂದು ಒಂದು ಪಟ್ಟಿ ಮಾಡಿ, ಕುಟುಂಬ ಸದಸ್ಯರು ಯಾವ ಮುಜುಗರವೂ ಇಲ್ಲದೇ ನೋಡುವ ಕನ್ನಡ ಚಿತ್ರಗಳನ್ನು ತೋರಿಸಿಬಾರದೆ?.
ಯಾರಾದ್ರು ಕಾಪಾಡಿ..
No comments:
Post a Comment