Wednesday, November 10, 2010

ಹೇಳಬೇಕಾದರೆ ತಲೆಯಲ್ಲಿ ಇರುವ ಮಗಳ ಚಿತ್ರ ಇನ್ನೂ ಚಿಕ್ಕದು.

ಮಕ್ಕಳ್ಯಾವಗ ದೊಡ್ಡವರಾಗ್ತಾರೆ ಗೊತ್ತೇ ಆಗಲ್ಲ. "ಸಣ್ಣ ಸಣ್ಣದಕ್ಕೂ ಹೇಳಬೇಕಾ ಪುಟ್ಟು, ಬೇಗಾ ಏಳಕ್ಕೆ ಆಗಲ್ಲಾ? ಬೇಗ ಎದ್ದರೇ, ಅಮ್ಮ ಕಾಫಿ ಕೊಡ್ತಾಳೆ [ಲೇಟಾದ್ರೆ ಅವರಮ್ಮ ಕಾಫಿ ಕೊಡಲ್ಲ, ಹಸಿವು ಹಿಂಗಿ ಅವಳು ತಿಂಡಿ ತಿನ್ನಲ್ಲ ಅಂತ.] ನೀನು ಬೇಗ ರಡಿ ಆಗಿ ಸಮಾಧಾನ ದಿಂದ ವ್ಯಾನ್ ಬರೋ ಹೊತ್ತಿಗೆ ಮುಂಚೇನೆ ಹೋಗಿ ಹತ್ತಬಹುದು. ಹಿಂಗೆ ಲೇಟ್ ಮಾಡಿದ್ರೆ ನೋಡು, ವ್ಯಾನ್ ಹೊರಟು ಹೋಗುತ್ತೆ, ನಾನೇ ನಿನ್ನ ಸ್ಕೂಲಿಗೆ ಬಿಡಬೇಕು. ನನ್ನ ಕೆಲಸ ಎಲ್ಲಾ ಹಾಳು." ಹಂಗಂತ್ತ ಬೈದು ಬುದ್ದಿ ಹೇಳಬೇಕಾದರೆ ತಲೆಯಲ್ಲಿ ಇರುವ ಮಗಳ ಚಿತ್ರ ಇನ್ನೂ ಚಿಕ್ಕದು.
ಆದರೆ ನೆನ್ನೆ, ಯಾವುದೋ ಶೂಟ್ ಮುಗಿಸಿ, ಹೊರಟಿದ್ದ ಕ್ಲೈಂಟ್ ಮಹೋದಯರನ್ನ ಬಾಗಿಲಿಗೆ ಬೀಳ್ಕೊಡಲು ಮನೆಯ ಕೆಳಗಿರುವ ಸ್ಟುಡಿಯೋದ ಹೊರಗೆ ತಲೆ ಹಾಕುತ್ತೇನೆ, ಗುರುತಿನ ಮುಖವೊಂದು ಸೈಕಲ್ ಹೊಡೆದು ಕೊಂಡು ಮನೆಗೇ ಬರುತ್ತಿದೆ. ತಕ್ಷಣ ಗಾಬರಿ ಆಯ್ತು, ಅರೇ ನನ್ನ ಮಗಳು ಪಾಠಕ್ಕೆ ಹೋಗಿದ್ದಳಲ್ಲಾ...ಅವಳೊಬ್ಬಳೇ ಬಂದಳಾ...ದಾರಿ ತಪ್ಪಿದ್ದರೆ ಏನು ಗತಿ...[ಪಾಠದ ಮನೆ ಎರಡು ಬೀದಿಯ ಆಚೆ ಇದೆ] ಅವರಮ್ಮ ಎಲ್ಲಿ ಹೋದಳು? ಕರ್ಕೋಂಡು ಬಾ ಅಂತ ಕಾರು ಕಿ ಕೊಟ್ಟಿದ್ದನಲ್ಲಾ. ಹೀಗೆ ಕೋಪ, ಆಶ್ಚರ್ಯ, ಗಾಬರಿ ಎಲ್ಲ ಒಟ್ಟಿಗೆ ಆಗ್ತಾಯಿತ್ತು. ಪಕ್ಕದ ಮನೆ ಪುಂಡು ನಾಯಿ, ಮಗಳ ಸೈಕಲ್ ನ ಹಿಂದೆಯೇ ಸಣ್ಣಗೆ ಓಡುತ್ತಾ ಹೆಜ್ಜೆ ಹಾಕುವುದನ್ನು ಗಮನಿಸಿ..ಇನ್ನೆಲ್ಲಾದರು ಕಾಲು ಕಚ್ಚಿದರೆ ಅಂತ, "ಚೀ" ಅಂತ ಗಧರಿಸಿ...ಅವಳನ್ನು ಸೈಕಲ್ಲಿನಿಂದ ಇಳಿಸಿ ಕೊಂಡು "ಒಬ್ಬಳೇ ಬಂದ್ಯಾ..? ಅಮ್ಮ ಬರಲಿಲ್ಲ್ವಾ ಕರ್ಕೋಂಡು ಬರಕ್ಕೆ...? ಅಂತೆಲ್ಲಾ ಪ್ರೆಶ್ನೆ ಕೇಳಕ್ಕೆ ಶುರು ಮಾಡಿದೆ.
"ಹೋಗಪ್ಪ ನೀನು..ನಾನೇ ಸೈಕಲ್ ನಲ್ಲಿ ಬರಬಹುದು...ಅಮ್ಮ ಯಾಕೆ..ಸೈಕಲ್ ತೆಗೊಂಡು ಹೋಗಿದ್ದೆ..ನಾನೆ ಬಂದೆ" ಅಂತ ತನ್ನ ಪುಟ್ಟ ಸೈಕಲ್ಲಿ ಗೆ ಸ್ಟ್ಯಾಂಡ್ ಹಾಕಿ ಒರಗಿಸಿದಂತೆ ಮಾಡಿ ನಿಲ್ಲಿಸಿದಳು.
ತಪ್ಪು ಹೆಜ್ಜೆ ಇಟ್ಟು ಇನ್ನೇನು ಬಿದ್ದೇ ಹೋಯಿತು ಅನ್ನುವ ಮಗು ಸಂಬಾಳಿಸಿ ಕೊಂಡ್ಡು ಗುಡು ಗುಡು ಓಡಿ ಬಂದು ಬಿಚ್ಚಿಟ್ಟ ಕೈಗಳ ನಡುವಿನ ಎದೆಗವಚಿಕೊಳ್ಳುತಿದ್ದ ಆ ದಿನಗಳು ನೆನಪಾಯಿತು..

4 comments:

ವಿ.ರಾ.ಹೆ. said...

sweet baraha with sweet emotions.

ಮನಮುಕ್ತಾ said...

ನೂರಕ್ಕೆ ನೂರು ಸತ್ಯವಾದ ಮಾತು..ಮಕ್ಕಳು ಎಷ್ಟು ದೊಡ್ಡವರಾದರೂ ಹೆತ್ತವರಿಗೆ ಮಕ್ಕಳ ಚಿಕ್ಕ೦ದಿನ ಆಟ ಹಾವಭಾವಗಳು ಹೊಸತೆನಿಸುತ್ತದೆ.
ಆಪ್ತವಾದ ಬರಹ.

PARAANJAPE K.N. said...

ಚೆನ್ನಾಗಿದೆ ಬರಹ, ಅರ್ಥಪೂರ್ಣ, ಪ್ರಾರ್ಥನಾ ಸ್ಕೂಲ್ ಹುಡುಗೀನಾ ??

Mahen said...

thanks vikas..
manamuktha..dhanyavada

paraanjape...thanks houdu..she goes to prarthana

Related Posts with Thumbnails