ಒಂದಿಷ್ಟು ಹೆಚ್ಚೇ ಕುದಿಸಿ
ಸಣ್ಣ ಪಿಂಗಾಣಿ ಕಪ್ಪಿಗೆ ಬಗ್ಗಿಸಿದ
ಕಾಫಿ...
ಘಾಡ,ಕತ್ತಲಿನಂತಿದೆ..ಸ್ವಲ್ಪ ಕಹಿ ಎನಿಸಿದೆ
ಹಣೇಲಿ ಬರೆದ ಹಾಗೇ ಇದೆ.
ಸಣ್ಣ ಚಮಚದ ತುಂಬ ಸಿಹಿ ಸಕ್ಕರೆ
ಸಿಕ್ಕರೆ ಸಾಕು...ಹೇಗೋ ನಿಭಾಯಿಸಬಹುದು
ಒಂದು ಸಣ್ಣ ಮುಷ್ಠಿ ತುಂಬುವ
ನೂರು ಗ್ರಾಮಿನಷ್ಟಿನ ಜೀವನ ಇದು
ಹಿಂದೆ ಮುಂದೆ ನೋಡಿ ವೆಯಿಸಬೇಕು...
ಕರ್ಚಿಗೆ ಇತಿ ಮಿತಿ ಇದ್ದರೆ ಆಯಿತು
ಇನ್ನಷ್ಟು ಬದುಕ ಬಹುದು..ಸವಿಯಬಹುದು.
ಸಂಜಯ್ ಲೀಲಾ ಬನ್ಸಾಲಿಯ ಹೊಸ ಚಿತ್ರ "ಗುಝಾರಿಷ್" ನ ಒಂದು ಗೀತೆಯ ಸಾರಂಶ ಇದು. ಸಂಜಯ್ ನನಗಿಷ್ಟ. ಎಪ್ಪತ್ತರ ದಶಕದ ಸಿನೇಮಾವನ್ನು ತಾಯಿಯ ತೊಡೆಮೇಲೆ ಮಲಗಿಕೊಂಡೆ ಒಳಲೆಯಲ್ಲಿ ಇಷ್ಟಿಷ್ಟೇ ಕುಡಿದು ರಕ್ತಗತ ಮಾಡಿಕೊಂಡಿರುವ, ಬಹಳ ಸೆನ್ಸಿಟಿವ್ ನಿರ್ದೇಶಕರಲ್ಲಿ ಸಂಜಯ್ ಕೊನೆಯ ಕೊಂಡಿ. "ಗೊಲ್ ಮಾಲ್"
ನಂತಹ ಚಿತ್ರಗಳ ಚುರುಮುರಿ ಚಪಲದಲ್ಲಿ ಸಿಲುಕಿ ಕೇಕೆ ಹಾಕಿ ಕುಣಿಯುತ್ತಾ ಚಲನ ಚಿತ್ರ ಸಂಬಂಧಿ ಎಲ್ಲಾ ಮಜಲುಗಳನ್ನು ಬರೀ ಜೋಕರ್ ಗಿರಿಗೆ ಇಳಿಸಿರುವ ಇಂದಿನ ಜನರೇಷನ್ ನಿರ್ದೇಶಕ ಶಿಖಾಮಣಿಗಳಲ್ಲಿ, ಸಂಜಯ್ ಅಪ್ಪಟ ಕಾಬೂಲಿವಾಲ. ಜತನ ದಿಂದ ಆಯ್ದ ಒಣದ್ರಾಕ್ಶಿ ಹಣ್ಣು ಗಳನ್ನು ಮಕ್ಕಳಿಗೆಂದೇ ಆರಿಸಿ ತರುತಿದ್ದ ಕಾಬೂಲಿವಾಲನ ಥೈಲಿಯಂತೆ ಸಂಜಯ್, ಭಾವ,ಭಾವನೆಗಳ ಬೆಚ್ಚನೆಯ ಮೂಲೆಯ ಮನೆಯಂತೆ ಸಿನೆಮಾ ಮಾಡುತ್ತಾನೆ. ಹಾಗೆ ಹೇಳುವುದಕ್ಕಿಂತ, ಅನುಭವಿಸುತ್ತಾನೆ,ಪರಿತಪಿತುತ್ತಾನೆ,ಪ್ರೇಮಿಯಾಗುತ್ತಾನೆ....ಕೊನೆಗೆಲ್ಲೋ ಒಂದು ದಿನ ಚಿತ್ರ ಮುಗಿಸಿದ ಉದ್ದ ಗಡ್ಡದ ಕಾಲವಿಧನಂತೆ ಧೀರ್ಘ ನಿಟ್ಟುಸಿರುಬಿಟ್ಟು,ಗೋಡೆಗಾನಿಸಿ ಇಟ್ಟು ನಾಲ್ಕು ಜನರಲ್ಲಿ ಹಂಚಿಕೊಂಡು ಅವರ ಕಣ್ಣುಗಳಲ್ಲಿ ಅವನನ್ನೇ ಹುಡುಕುತ್ತಾನೆ.
ಸಂಜಯ್ ನ "ದೇವದಾಸ್" ಬಹಳ ಕಣ್ಣಿಟ್ಟು ಕುಸುರಿ ಮಾಡಿದ ಅದ್ಭುತವಾದ ಕಲೆಗಾರಿಕೆ. ಅದು "ಸ್ಲೋ" ಅನ್ನುವ ಜನ್ನಕ್ಕೆ ಪ್ರಾಬಬ್ಲಿ ಗೊತ್ತಿಲ್ಲ ಆತುರಕ್ಕೆ ಬರುವುದು "ಅಕ್ಷೀ" ಅಷ್ಟೇ...ಒಂದು ಒಳ್ಳೆ ಆಷಯ ಅಲ್ಲ. ತನ್ನ ಮನೆಯ ಮುಂದೆ ಬಂದು ಕೊನೆ ಉಸಿರೆಳೆಯುತ್ತಿರುವ ಪ್ರೇಮಿಯ ಪರಿಸ್ಥಿತಿ, ತನ್ನ ಅಂತರಂಗದಲೆಲ್ಲೋ ಕಳಮಳ ಉಂಟು ಮಾಡಿ, ಸಂಜೆಯ ದೇವರ ದೀಪ ಹಚ್ಚುತ್ತಲೇ..."ಹೊರಗೆ ಮಲಗಿರುವ ರೋಗಿ ಯಾರು" ಎಂದು ಐಶ್ವರ್ಯ ರೈ ಕೇಳುವ ದೃಶ್ಯ, ಸಂಜಯನ ಕರುಳಿನಾಳದಲ್ಲಿ ಇನ್ನೂ ಹೆಪ್ಪು ಗಟ್ಟಿ ಹಾಗೇ ಉಳಿದಿರುವ ಪ್ರೀತಿಯ ಹಲವು ಮುಖಗಳ ಒಂದು ಸಣ್ಣ ಉಧಾಹರಣೆ ಅಷ್ಟೇ.
"ಗುಝಾರಿಷ್" ನ ಪ್ರೋಮೋಷನಲ್ ಗಳನ್ನು ನೋಡುತಿದ್ದೆ, ಅದ್ಭುತ ಅನ್ನಿಸಿತು. ಮತ್ತದೇ ಕುಸುರಿಯ ಮಹಾನ್ ಕಲಾಕೃತಿ. ಸಂಜಯನಿಗೆ ಒಳ್ಳೆಯದಾಗಲಿ. ಚಿತ್ರದ ಯಶಸ್ಸು ಅವನನ್ನು ಮತ್ತಷ್ಟು ಇಂಥಹ ಚಿತ್ರಗಳನ್ನು ಮಾಡಲು ಪ್ರೇರೇಪಿಸಲಿ..
ಸಂಜಯ್...ಶುಕ್ರಿಯಾ..
No comments:
Post a Comment