ಬೆಳಿಗ್ಗೆ ಮೈಸೂರಿನಲ್ಲಿದ್ದೆ. ನನ್ನ ಪರಿಚಯದವರೊಬ್ಬರ ಫೋನು. ಮಹೇಂದ್ರ ನಿಮ್ಮ ಚಿತ್ರ ’ವಿಜಯಕರ್ನಾಟಕ’ ದಲ್ಲಿ ಬಂದಿದೆ. ಅಂದರು. ನಾನು ತೆಗೆದ ಯಾವುದೋ ನಟ/ನಟಿಯ ಚಿತ್ರವಿರಬಹುದು ಅಂತ ನನ್ನ ಅನಿಸಿಕೆ. ಹಾಗೇ ಕೇಳಿದೆ ಕೂಡ. ಯಾರ ಚಿತ್ರ ಬಂದಿದೆ? ಅಂತ. ’ನಿಮ್ಮದೇ ಒಂದು ಬ್ಲಾಕ್ ಅಂಡ್ ವೈಟ್ ಚಿತ್ರ ಬಂದಿದೆ ಮತ್ತೆ ನಿಮ್ಮ ಬ್ಲಾಗಿನ ಬಗ್ಗೆ ಬರೆದಿದ್ದಾರೆ ಅಂತ ಹೇಳಿದರು ಅವರು. ಒಂದು ಕ್ಷಣ ತಬ್ಬಿಬ್ಬಾಯಿತು. ನನ್ನದು ಯಾವ ದೊಡ್ಡ ಬೆಂಡೆಕಾಯಿ ಬ್ಲಾಗು? ಅದನ್ನ ವಿಜಯ ಕರ್ನಾಟಕದಲ್ಲಿ ಬರೆಯುವಂಥಹದ್ದೇನಿದೆ ಅಂತ ಯೋಚನೆಗೆ ಬಿದ್ದೆ. ಹಾಗೇ, ತಕ್ಷಣವೇ, ಯಾರ ಬಗ್ಗೆಯಾದರು ಏನಾದರೂ ತರೆಲೆ ಬರೆದಿದ್ದೇನಾ ಅಂತ ನೆನಪಿಸಿಕೊಳ್ಳಲು ಮನಸ್ಸಿನ ಒಂದೊಂದು ಮೂಲೆಗೂ ಕೈ ಆಡಿಸಿದೆ. ಉಹುಂ! ಇಲ್ಲ, ಅಂತಹ ದೊಡ್ಡ ಬರವಣಿಗೆ ಏನಲ್ಲ ನನ್ನದು, ಯಾವಾಗಲಾದರೊಮ್ಮೆ, ಏನೋ ಅನ್ನಿಸಿದ್ದನ್ನ ಗೀಚಿ, ಬರೆದದ್ದು ಹೇಗಿದೆಯೋ ಎಂದು ಯೋಚಿಸಿ ಪುನಃ ಓದದಯೇ ಹಾಗೇ ಪ್ರಕಟಿಸಿ ಬಿಡುವ, ಡೈರಿ ರೂಪದ ಸ್ವಗತ ನನ್ನ ಬ್ಲಾಗು.[ಒಮ್ಮೆ ನನ್ನ ಬ್ಲಾಗು ಓದಿದಿ ಗೆಳೆಯ ರಘು ಅಪಾರ, "ಅದೆಷ್ಟು ತಪ್ಪು ಟೈಪ್ ಮಾಡ್ತೀರಿ ನೀವು, ಒಂದು ಸರ್ತಿ ಪುನಃ ಓದಿ ತಪ್ಪು ತಿದ್ದಬಾರದ?" ಅಂತ ಬೈದಿದ್ದರು.] ಇದಕ್ಕೂ ಮುನ್ನ ಅಂಥಹ ದೊಡ್ಡ ಲೆಕ್ಕದ ಮಂದಿ ನನ್ನಬ್ಲಾಗಿನ ಕಡೆ ಕಣ್ಣಾಡಿಸಿರಬಹುದು ಎಂದೇನೂ ಅನ್ನಿಸುವುದೂ ಇಲ್ಲ. ಏನೋ, ಯಾರೋ ದೊಡ್ಡ ಮನಸ್ಸು ಮಾಡಿ ನನ್ನ ಬ್ಲಾಗಿನ ಬಗ್ಗೆ ಎರಡು ಮಾತು ಬರೆದಿದ್ದಾರೆ,ಬೆಳಿಗ್ಗೆ ಬೆಳಿಗ್ಗೆ ಒಂದು ಸಣ್ಣ ಸಂತೋಷ.
ಆ ಮಟ್ಟಕ್ಕೆ ನನ್ನ ಹೆಂಡತಿ ಮತ್ತು ಮಗಳ ಮುಖದಲ್ಲಿ ಒಂದು ಸಣ್ಣ ಹೆಮ್ಮೆ ಮಿಶ್ರಿತ ಮುಗುಳ್ನಗೆ ಹುಟ್ಟಿಸಿದ ವಿಜಯಕರ್ನಾಟಕದ ಆರ್ಟಿಕಲ್ ಗೂ ಮತ್ತು ಅದನ್ನು ಅಲ್ಲಿ ಪ್ರಕಟಿಸಿದ ನನಗೆ ಪರಿಚಯವಿಲ್ಲದ ನನ್ನ ಗೆಳೆಯ/ಅಪರಿಚಿತ ಆತ್ಮೀಯನಿಗೆ ನನ್ನ ಧನ್ಯವಾದಗಳು :)
No comments:
Post a Comment