Tuesday, September 28, 2010

ಪುರುಸೊತ್ತಿಲ್ಲ ಅನ್ನುವ ವೆಕ್ತಿಗೆ ಆ ಕೆಲಸದಲ್ಲಿ ನಿಜವಾಗಿಯೂ ಆಸಕ್ತಿ ಇಲ್ಲ ಅನ್ನುವುದು ಸತ್ಯ ಅನ್ನುತ್ತಾರೆ.

ಪುರುಸೊತ್ತಿಲ್ಲ ಅನ್ನುವ ವೆಕ್ತಿಗೆ ಆ ಕೆಲಸದಲ್ಲಿ ನಿಜವಾಗಿಯೂ ಆಸಕ್ತಿ ಇಲ್ಲ ಅನ್ನುವುದು ಸತ್ಯ ಅನ್ನುತ್ತಾರೆ. ನನಿಗೆ ಅದನ್ನು ಹಾಗೇ ಒಪ್ಪಿಕೊಳ್ಳಕ್ಕೆ ಸ್ವಲ್ಪ ಕಷ್ಟ.ಮಾಡ್ಬೇಕು ಅನ್ನೊ ಕ್ರಿಯಾತ್ಮಕ ಕೆಲಸಗಳ ಪಟ್ಟಿ ಉದ್ದಕ್ಕೆ ಇದೆ. ಬೆಂಗಳೂರು, ನಿತ್ಯ ಜೀವನದ ಕೆಲಸಗಳಿಗೇ ಎಷ್ಟು ಸಮಯ ಬೇಡುತ್ತದೆ ಎಂದರೆ, ನಮ್ಮ ಆಸಕ್ತಿಯ ಕೆಲಸಗಳನ್ನು ಮಾಡುವ ಎಂದರೂ ನಿಜವಾಗಿಯೂ ಸಮಯ ಇಲ್ಲ.


ಮೊದಲನೆಯದು ಓದು, ಅದಕ್ಕೆ ಬೇಕಾದ ವಾತಾವರಣ ನಿರ್ಮಿಸಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ. ಯಾವುದೋ ಜನಪ್ರಿಯ ಗುಣಗಳುಳ್ಳ ಕಾದಂಬರಿಯನ್ನು ಹೇಗಾದರೂ ಓದಿ ಮುಗಿಸಬಹುದು, ಆದರೆ ಕೆ.ವಿ.ತಿರುಮಲೇಶ್ ರಂತಹವರ ಕವನಸಂಕಲನಕ್ಕೆ ಮನಸ್ಸು ಮಾಗಿರಬೇಕು.

ಏನಾದರೂ ಮಾಡಬೇಕು, ಓದಬೇಕು. ನನ್ನ ಮಿತ್ರನೊಬ್ಬ, ಬೆಂಗಳೂರಿನ ನಂಟನ್ನೆಲ್ಲಾ ತೊರೆದು, ಮೇಲು ಕೋಟೆಯಲ್ಲಿ ನಾಲ್ಕು ಎಕರೆ ಜಾಗ ತೆಗೆದುಕೊಂಡು ಕೃಷಿ ಶುರುಮಾಡಿಕೊಂಡಿದ್ದಾನೆ. "ಬೆಂಗಳೂರು ಸಾಕು ಅನ್ನಿಸಿತು" ಅಂತ ಮುಖ ಸಿಂಡರಿಸಿ, ತಲೆ ಕೆಳಗೆ ಮಾಡಿ ಎರಡು ಸರಿ ವದರಿದ. ನನ್ನ ಅಂದಾಜಿಗೆ, ಇನ್ನು ಐದು ಅಥವ ಹತ್ತು ವರ್ಷಗಳಲ್ಲಿ ತನ್ನದೇ ಒಂದು ಪ್ರಪಂಚದಲ್ಲಿ, ತನಗೆ ಬೇಕಾದ ಹಾಗೆ ಇರುವ ಸ್ವತಂತ್ರದ ಹಣ್ಣಿಗೆ ಈಗಲೇ ಕಸಿಮಾಡುತಿದ್ದಾನೆ.

ಹಾಗೆಲ್ಲಾ ಬೆಂಗಳೂರನ್ನು ದಿಡೀರನೆ ಬಿಟ್ಟು ಹೋಗುವ ಧೈರ್ಯ ನನಗಿಲ್ಲ. ದಾಸರು ಹೇಳುವಾ ಹಾಗೆ ಈಸ ಬೇಕು ಇದ್ದು ಜೈಸಬೇಕು ಅಂತ ಇಲ್ಲೇ ಇರುವ, ನೋಡುವ ಎಂದು ಸುಮ್ಮನಿದ್ದೇನೆ.

ಅದಿರಲಿ, ವಸುಧೇಂದ್ರರ ಹೊಸಪುಸ್ತಕ "ರಕ್ಷಕ ಅನಾಥ" ಕೊಂಡುತಂದಿದ್ದೆ. ಸದ್ದ್ಯಕ್ಕೆ ಕೈಯಲ್ಲಿದೆ. ಸರಳ, ಸುಲಲಿತ ಬರವಣಿಗೆಯ ವಸುಧೇಂದ್ರರ ಬರಹ, ತನ್ನೆಲ್ಲಾ "ನಮ್ಮ" ತನದಿಂದ ಮನಸ್ಸಿಗೆ ಹತ್ತಿರವಾಗುತ್ತದೆ. ತಮ್ಮ ಶಾಲಾ ಪ್ರವಾಸಕ್ಕೆ ಹಣ ನೀಡಲು, ತಂದೆ, ಕೊನೆಯ ಘಳಿಗೆಯ ವರೆವಿಗೂ ಸತಾಯಿಸಿ ಕೊನೆಗೆ ಪ್ರವಾಸದ ಮೊತ್ತವನ್ನಷ್ಟೇ ಕೊಟ್ಟು, ಕೈಕರ್ಚಿಗೆ "ನನ್ನ ಹತ್ತಿರ ಇರೋದೇ ಇಷ್ಟು" ಅಂತ ಮಾತು ಮುಗಿಸುವ ಪ್ರಸಂಗ ಹೇಳುವಾಗ, ಬದುಕಿನ ಸಣ್ಣ ಸಣ್ಣ ಸಂತೋಷಗಳಿಗೂ, ಹತ್ತು, ಹದಿನೈದು ವರ್ಷದ ಹಿಂದಿನ ಮದ್ಯಮ ವರ್ಗ ಎಷ್ಟು ಕಷ್ಟ ಪಡುತಿತ್ತು ಹಾಗು ಅಂಥಹ ಕಷ್ಟದಲ್ಲಿ ಬಂದ ಒಂದು ಪ್ರವಾಸದಂಥಹ ಅನುಭವ ಎಷ್ಟು ನೆನಪಿನಲ್ಲಿರುತ್ತದೆ ಎಂಬುದು ಅದನ್ನು ಅನುಭವಿಸಿದ ನನಗೆ ತುಂಭಾ ಮುದಕೊಟ್ಟಿತು.

No comments:

Related Posts with Thumbnails