Wednesday, July 22, 2009

"ಬುದ್ದಿ ಇದ್ದವರು ರೀಮೇಕ್ ಮಾಡ್ಬಾರ್ದು, ಪೆದ್ದರು ಸ್ವಮೇಕ್ ಮಾಡ್ಬಾರ್ದು"


ರಾತ್ರಿ ಸುಮಾರು ಒಂದು ಘಂಟೆ. ನಗು,ಕೇಕೆ,ದೊಡ್ಡ ಮಾತಿನ ಚರ್ಚೆ ಇನ್ನೂ ಮುಗಿದಿರಲಿಲ್ಲ. ನಾನ ಕ್ಷೇತ್ರದ ತೀರ್ಥಗಳ ಮದ್ಯೆ, ಎಲ್ಲರೂ ಸಿಗರೇಟಿನ ಹೋಗೆ ಹಾಕಿಕೊಂಡಿದ್ದೆವು. "ಹೆಂಡತಿ ಊರಲ್ಲಿ ಇರಲ್ಲ ಅಂದ್ರೆ...ಫ್ರೆಂಡ್ಸ್ ನ ಸೇರಿಸಿಕೊಂಡು ಈ ತರಹ ಗಲಾಟೆ ಮಾಡೋದಾ?" ಅಂತ ನನ್ನ ಮನೆ ಓನರ್ ಎಲ್ಲಿ ಕೇಳಲಿಕ್ಕೆ ಬರುತ್ತಾರೋ ಅಂತ ನನ್ನ ಆತಂಕ.
ಬಲಗೈ ನೆಲ ತಾಗೋ ಹತ್ತಿರ ಒಂದು ರಾಶಿ ಸಿಗರೇಟಿನ ತುಂಡು. ಇಷ್ಟಿದ್ದರೂ, ಮತ್ತೋಂದಕ್ಕಾಗಿ ಸಿಗರೇಟಿನ ಡಬ್ಬಿಯನ್ನು ತಡಕಾಡುತಿತ್ತು ಗುರುಪ್ರಾಸಾದರ ಕೈ. "ಏನಿಲ್ಲಾ ಅಂದರೂ ನಡಿಯುತ್ತೆ ನೋಡಿ, ಸಿಗರೇಟು ಇಲ್ಲಾ ಅಂದ್ರೆ ಕಷ್ಟ" ಅಂದರು.
"ಈ ಹೊತ್ತಿನಲ್ಲಿ ಎಲ್ಲಿ ಸಿಗುತ್ತೆ, ಊಟಮಾಡಣ ಏಳಿ ಹೊತ್ತಾಯಿತು" ಅಂತ ನಮಗಾಗಿ ಕಾಯುತಿದ್ದ ನಂದಿನಿ ಹೋಟೇಲಿನ ಪೊಟ್ಟಣಗಳ ನೋಡಿದೆ. ಶಾಸ್ತ್ರಕ್ಕೆ ಊಟದ ಮೇಲೆ ಕೈ ಆಡಿಸಿದ ಗುರು, "ನಿಮಿಗೆ ಸಿಗರೇಟು ತಾನೆ ಬೇಕು, ಅದು ಎಷ್ಟು ಹೊತ್ತಾದ್ರು ಸರಿ ನಾನು ಕೊಡಿಸ್ತೀನಿ ಅದೇನು ಪ್ರಾಬ್ಲಮ್ ಅಲ್ಲ ಬಿಡಿ" ಅಂದರು. ಆ ನಂತರ, ಸೀದ ನಾವು ಹೋಗಿದ್ದು ಒಂದು ಬಾಗಿಲು ಮುಚ್ಚಿದ ಬಾರಿನ ಹತ್ತಿರ. ಅಲ್ಲಿಯ ಸೆಕ್ಯುರಿಟಿಯವನೂ ಕೂಡ ತೂಕಡಿಸುತ್ತಿದ್ದ. ಕಾರಿನಿಂದ ಇಳಿದ ಗುರು, ಏರಿದ ದನಿಯಲಿ ಯಾವುದೋ ಹೆಸರು ಹಿಡಿದು ಎರಡು ಸರಿ ಕೂಗಿದರು. ಸ್ವಲ್ಪ ಹೊತ್ತಿನ ನಂತರ ಒಂದೊಂದೆ ಸಣ್ಣ ಸಣ್ಣ ದೀಪಗಳು ಹತ್ತಿಕೊಳ್ಳಲಾರಬಿಸಿ,ಮುಂದಿನ ಶೆಟರ್ ಸಣ್ಣದಾಗಿ ತೆರೆದು ಕೊಂಡಿತು. ಮುಂದೆ ಹೋದ ಗುರು ಏನೋ ಆತ್ಮೀಯವಾಗಿ ಎರಡು ಮಾತಾಡಿದರು. ಅಷ್ಟು ಹೊತ್ತಿನಲ್ಲೂ ಆ ಅಂಗಡಿಯವನ ಮುಖದಲ್ಲಿ ಒಂದು ಆತ್ಮೀಯ ನಗೆ. "ತೊಗೋಳಿ ಏನ್ ಬೇಕು" ಅಂದು ಗಡ್ಡ ಕೆರೆದು ನಕ್ಕರು ಗುರು.

ನನ್ನ ಪರಿಚಿತರಾದ ಗುರುಪ್ರಾಸಾದ್ ["ಮಠ" "ಎದ್ದೇಳು ಮಂಜುನಾಥ" ದ ನಿರ್ದೇಶಕರು],ನನ್ನ ಗೆಳಯರೊಬ್ಬರ ಬಾಲ್ಯ ಸ್ನೇಹಿತರೂ, ಮತ್ತು ನನ್ನ ಭಾವ ನಂಟರೂಬ್ಬರ ಕ್ಲಾಸು ಮೇಟು ಹೀಗೆ ನಾನಾ ಕೋನ ದಿಂದ ಹತ್ತಿರ.
ಅನ್ನಿಸಿದ್ದರ ಮೇಲೆ, ಆಗಬಹುದೂ ಎಂಬ ನಂಬಿಕೆಯ ಸವಾರಿ ಮಾಡುವ ಮನುಷ್ಯ ಗುರು. ಅವರ ಚಿತ್ರಗಳೂ ಅವರ ಹಾಗೇ. ಆವತ್ತು, ನಮ್ಮ ಮನೆಯಲ್ಲಿ ನಮಗೆ ಗುರು ರವರ ಚಿತ್ರ "ಎದ್ದೇಳು ಮಂಜುನಾಥ" ಚಿತ್ತ್ರದ ಸಣ್ಣ ಪ್ರಿವೀವ್. ಅವರ ಲ್ಯಾಪ್ ಟಾಪಿನಲ್ಲಿ ಸಣ್ಣ ಸಣ್ಣ ತುಣುಕುಗಳನ್ನು ತೋರಿಸಿದ ಗುರು, ಬಹಳ ಆತ್ಮವಿಶ್ವಾಸದಲ್ಲಿದ್ದರು. ಆ ಪ್ರೀವೀವ್ ನೋಡಿದ ನಂತರ ಮತ್ತು ಈ ಸಿಗರೇಟಿನ ಪ್ರಕರಣದ ನಂತರ ಅನ್ನಿಸಿದ್ದು "ಈ ಮನುಷ್ಯ ಅಗಲ್ಲ ಅನ್ನೊ ಏನನ್ನದ್ರೂ ಮಾಡಿತೋರಿಸ ಬಹುದು" ಅಂತ.
"ಎದ್ದೇಳು ಮಂಜುನಾಥ" ಝಲಕ್ ತೊರಿಸಿದ ಗುರು, ಅವತ್ತೇ ನನಗೆ ಬಹಳ ಕುತೂಹಲ ಕೆರಳಿಸಿದ್ದರು. "ಮುಂದಿನದ್ದನ್ನು ತೇಟರಿನಲ್ಲಿ ನೋಡಿ" ಅಂತ ತುಂಟ ನಗೆ ಬೀರಿ, ಬೀರು ಬಾಟಲಿ ಉರುಳಿಸಿದ್ದರು.
ಇದಾದ ನಂತರ ಬಹಳ ದಿನಗಳೇ ಕಳೆದವು,ಚಿತ್ರದ ಸುದ್ದಿಯೇ ಇರಲಿಲ್ಲ. "ಗುರುದು ಸ್ವಲ್ಪ ಮಾತು ಜಾಸ್ತಿ, ಕೆಲಸ ಮಾಡಲ್ಲ" "ಈ ಕಾಲದಲ್ಲಿ ಆ ತರಹ ಪಿಕ್ಚರ್ ಯಾರು ನೋಡ್ತಾರೆ ಸ್ವಾಮಿ" ಹೀಗೆ ಹಲವು ಅಭಿಪ್ರಾಯಗಳು ಹುಟ್ಟ ತೊಡಗಿದವು. ಆದರೂ, ನನಗೆ "ಎದ್ದೇಳು ಮಂಜುನಾಥ"ದ ಪ್ರೀವಿವ್ ನದೇ ಗುಂಗು. ಏನೋ ಹೊಸ ತನ ಇದೆ, ಇದು ಗೆಲ್ಲುತ್ತೆ ಅಂತ.
"ಚಿತ್ರ ಬಿಡುಗಡೆ ಆಗಲಿ ತಡೀರಿ ನೀವು ಯಾವುದನ್ನ ಗುರು ವೀಕ್ನೆಸ್ [ಮಾತು]ಅಂತೀರೊ..ಅದೇ ಅವರ ಪ್ಲಸ್ ಪಾಯಿಂಟ್ ಆಗುತ್ತೆ" ಅಂತ ನನ್ನ ವಾದ.
ನೆನ್ನೆ ಬೆಂಗಳೂರಿನ ಪ್ರಸನ್ನಗೆ ಹೋಗಿದ್ದೆ. ಅಪರೂಪಕ್ಕೆ ಸೋಮುವಾರ ಮದ್ಯಾನಃ ದ, ಯಾವುದೇ ಬಹಳ ದೊಡ್ಡ ಗಿಮಿಕ್ ಇಲ್ಲದ, ಕನ್ನಡ ಸಿನೇಮಾ... ಹೌಸ್ ಫುಲ್. ಹೊರಗೆ ಬರುತಿದ್ದ, ಪಡ್ಡೆ ಹುಡುಗರು, ಸಂಸಾರಸ್ಥರು ಮತ್ತು ಇವು ಯಾವುದೂ ಅಲ್ಲದ ಇತರರು ಹೊರಬರುವಾಗ ಒಂದು ಸಣ್ಣ, ಅಳಿಸದ ಮಂದಹಾಸದೊಂದಿಗೆ ಬರುವುದನ್ನ ನೋಡಿ ಕುಷಿ ಆಯಿತು.

ಗುರು "ಮಾತು" ಉಳಿಸಿಕೊಂಡಿದ್ದರು.

"ಬುದ್ದಿ ಇದ್ದವರು ರೀಮೇಕ್ ಮಾಡ್ಬಾರ್ದು, ಪೆದ್ದರು ಸ್ವಮೇಕ್ ಮಾಡ್ಬಾರ್ದು"

. ಇದು ಚಿತ್ರದ ಒಂದು ಡೈಲಾಗು. ಡೌಟೇ ಇಲ್ಲ, ಗುರು ಬುದ್ದಿವಂತರು. ಸ್ವಛ್ಛ ಸ್ವಮೇಕಿನ,ಹೊಚ್ಚ ಹೊಸ ಐಡಿಯಾದ ಚಿತ್ರ "ಎದ್ದೇಳು ಮಂಜುನಾಥ". ಚಿತ್ರದ ಮೊದಲ ಪ್ಲಸ್ ಪಾಯಿಂಟ್, ಯಾವುದೇ ಹಳೆಯ ಯೋಚನಾ ಲಹರಿಗೆ ಅಂಟಿಕೊಳ್ಳದೆ, ಒಬ್ಬ ಗೆಳೆಯನ ಹತ್ತಿರ ಕೂತು ಮಾತಾಡುವ ಶೈಲಿಯಲ್ಲಿರುವುದು.
ಹಾಗೆ ನೋಡಿದರೆ, ಇದು ನೋಡೋ ಚಿತ್ರ ಅಲ್ಲ, ಕೇಳೊ ಚಿತ್ರ. ಅಂದರೆ, ಒಬ್ಬ ಸೋಂಬೇರಿ..ಕುರುಡನೊಬ್ಬನಿಗೆ ಕತೆ ಹೇಳುವ ಧಾಟಿಯಲಿ ನಡೆಯುವ ಚಿತ್ರವಾದ್ದರಿಂದ, ಚಿತ್ರ ಪೂರ್ತಿ ಕಥಾನಾಯಕನ ನಿರೂಪಣೆಯಲ್ಲಿ ಸಾಗುತ್ತದೆ. ಕುರುಡನಿಗೆ ವಿವರಿಸುತ್ತಾ ನಮಗೂ ಕತೆ ಹೇಳುತ್ತಾನೆ. ಹಾಗೆ ನೋಡಿದರೆ ವಿಷ್ಯಲ್ಸ್ ಬಗ್ಗೆ ಗುರು ಅಷ್ಟು ತಲೆ ಕೆಡಿಸಿಕೊಂಡಿದ್ದು ಕಾಣಿಸುವುದಿಲ್ಲ. ಎಲ್ಲಾ ಕ್ಲೋಸ್ ಅಪ್ ನಲ್ಲೇ ಸಾಗುತ್ತದೆ, ಅಥವ ಹತ್ತು ಬೈ ಹನ್ನೆರಡು ಮನೆಯಲ್ಲಿ. ಕಥೆ ಮತ್ತು ಸಂಬಾಷಣೆಯ ಮೇಲೆ ಗುರುವಿಗೆ ಎಂತಹ ಧೈರ್ಯ ಅಂದರೆ, ಹಾಡುಗಳನ್ನೂ ಅಲ್ಲಲ್ಲಿ ತುಂಡರಿಸಿಬಿಟ್ಟಿದ್ದಾರೆ. ಕ್ಯಾಮಾರವನ್ನು ಅವರ ನಾಲಿಗೆಯ ತುದಿಯಲ್ಲೇ ನಡೆಸಿದ್ದಾರೆ, ಇನ್ನೋಬ್ಬರಿಗೆ ಕೊಟ್ಟೇ ಇಲ್ಲ. ಇದೊಂದು ಸಂದರ್ಭ, ಸನ್ನೀವೇಶ ಮತ್ತು ಸಂಭಾಷಣೆಯ ಚಿತ್ರ.

"ಕಪ್ಪಗಿದ್ದ್ರೆ ಕೃಷ್ಣ...ಬೆಳ್ಳಗಿದ್ರೆ ಎಸ್.ಎಂ.ಕೃಷ್ಣ"
"ಸಾಲು ಸಾಲು ಕಾರಲ್ಲ ಸ್ವಾಮೀ....ಸಾಲದ ಕಾರುಗಳು...ಎಲ್ಲಾ ಕಾರಿನ ಮೇಲೂ ಸಾಲ ಇರುತ್ತವೆ"
"ಮಾತೇ ಬಂಗಾರ...ವೈಯಾರಾನೇ ವಯಾಗ್ರ"
"ಹಾಯ್ ಬೆಂಗಳೂರು ಆಫೀಸಿಗೆ ಹೋಗಿ ಲಂಕೇಶ್ ಪತ್ರಿಕೆ ಕೇಳ್ಧಂಗಾಯಿತು"
"ಕನ್ನಡವೇ ನಮ್ಮಮ್ಮ...ತೆಲುಗು ಚಿಕ್ಕಮ್ಮ....ಮಳಯಾಳಂ ನರ್ಸಮ್ಮ"
ಇದು ಕೆಲವು ತುಣುಕು ಗಳು. ಚಿತ್ರ ಶುರುವಾದಾಗಿನಿಂದ, ಮುಗಿಯುವ ಸುಮಾರು ಹತ್ತು ನಿಮಿಷದ ವರೆವಿಗೂ ಜನ ಕೇಕೆ ಹಾಕಿ ನಕ್ಕು ಕೈತಟ್ಟುವುದು ಸಾಮಾನ್ಯ. ಪಾತ್ರಗಳ ಮಾತೂ ಕಥೆಯಲ್ಲಿ ಸಕಲ ಕಾಂಟೆಂಪ್ರರಿ ವಿಷಯಗಳೂ ಬಂದು ಹೋಗುತ್ತವೆ. ಯಾರೋ ಏನೋ ಮಾತಾಡುತಿದ್ದಾರೆ ಅನ್ನಿಸುವುದಿಲ್ಲ.
ಒಂದು ಅನಗತ್ಯ ಫೈಟು, ಅಥವ "ನಮ್ಮ ಜನಕ್ಕೆ ಇವೆಲ್ಲಾ ಬೇಕು" ಅನ್ನುವ ಗಾಂದಿನಗರದ ಅನಗತ್ಯ ಹೂರಣಗಳಿಲ್ಲ. ಚಿತ್ರದ ಅವಧಿಯೂ ಕಮ್ಮಿಯೇ. ಹೀಗೆ ಶುರುವಾಗಿ ಹಾಗೆ ಮುಗಿದು ಹೋಗುತ್ತದೆ. ಮದ್ಯದಲ್ಲಿ, ಮದ್ಯಮವರ್ಗದ ಜನರ ಎಲ್ಲಾ ಕಷ್ಟಗಳ ಸಣ್ಣ ಸಣ್ಣ "ಹೌದು, ನಮ್ಮನೇಲು ಹಿಂಗೆ" ಅನ್ನಿಸುವಂತಹ ಬಹಳಷ್ಟು ಸನ್ನಿವೇಶಗಳು ಬಂದು, ನಮ್ಮಲ್ಲಿಯೇ ಒಬ್ಬನ ಚಿತ್ರ...ಕಥೆ ಅನ್ನಿಸಿ ಆತ್ಮೀಯವಾಗುತ್ತದೆ. ಇದೇ ಚಿತ್ರದ ಬಹುದೊಡ್ಡ ಪಾಯಿಂಟು...ಎಲ್ಲರಿಗೂ ಇದು ನಮ್ಮದೇ ಅನ್ನಿಸುವುದು.
ಸಾಂಪ್ರದಾಯಿಕ ಸಿನೆಮಾ ಎಂಟರ್ಟೈನ್ ಮೆಂಟ್ ಹುಡುಕಿ ಹೊರಟವರಿಗೆ ಇದು ಸ್ವಲ್ಪ "ಹಾದಿ ಬಿಟ್ಟ ಸಿನೆಮಾ" ಅನ್ನಿಸಬಹುದು. ಆದ್ರೆ ಯಾವುದೇ ಸಿನೇಮಾ ರಂಗಕ್ಕೆ ಒಬ್ಬ ಗುರು ಬೇಕು. ಅದು ಸಿನೇಮಾರಂಗದ ಆರೋಗ್ಯಕ್ಕೆ ಉತ್ತಮ. ಹೆಚ್ಚು ಹೆಚ್ಚು ವಯಕ್ತಿಕ ನೋಟಗಳು, ಎಕ್ಸ್ ಪೆರಿಮೆಂಟುಗಳು ಯಾವುದೇ ರಂಗದಲ್ಲಿ ನಡೆಯಬೇಕು. ಗುರು ಅದನ್ನ ಮಾಡಿದ್ದಾರೆ, ಗೆದ್ದೂ ಇದ್ದಾರೆ ಅನ್ನಬೇಕು. ಹಾಗೆನ್ನಲು ಕಾರಣ, ಇವತ್ತು ಗುರುವಿನ ಮೊದಲ ಚಿತ್ರ "ಮಠ" ಸಾಕಷ್ಟು ಕನ್ನಡದ ಐಟಿ ಹುಡುಗರ ಪೆನ್ ಡ್ರೈವನಲ್ಲಿ ಬದ್ರ. ಸಕಲ ಹಾಲಿವುಡ್-ಇರಾನಿಯನ್ ಚಿತ್ರಗಳನ್ನು ನೋಡುವ, ವಿದೇಶಕ್ಕೆ ಹೋಗಿಬರುವ, ಹೊಡಿಬಡಿ, ಮಚ್ಚು ಕೊಚ್ಚು, ಮಳೆ- ಮಂಜು ಸಿನಿಮಾದ ಬಗ್ಗೆ ಆಡಿಕೊಂಡು ನಗುವ ನಮ್ಮ ಎಡುಕೇಟೆಡ್,[ಐಟಿ-ಬಿಟಿ] ಯಂಗರ್ ಕನ್ನಡಿಗರಿಗೆ ಗುರುವಿನ ನೇರವಂತಿಕೆ ಬಹಳ ಹತ್ತಿರ. "ಎದ್ದೇಳು ಮಂಜುನಾಥ" ದ ಪ್ರದರ್ಶನದ ವೇಳೆ ತಿಯೇಟರಿನ ಹತ್ತಿರ ನೋಡಿದರೆ ಈ ಮಾತಿನ ಸತ್ಯ ಗೊತ್ತಾಗುತ್ತೆ. ಕನ್ನಡಿಗ ಪ್ರೇಕ್ಷಕರಿಗೆ ತೆಲುಗಿನ, ತಮಿಳಿನ ವರಳೆಯಲ್ಲಿ ಕಥೆಹೇಳುವ, ಎಂಟರ್ಟೈನ್ಮೆಂಟ್ ನ ಬಾಯಿ ಹನಿ ಹಾಕುವ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗು ಮಚ್ಚು ಲಾಂಗು, ಮಂಜು ಮಳೆ ಯಲ್ಲಿ ಕಳೆದು ಹೋಗಿರೊ ನಮ್ಮ ಸ್ಟಾರುಗಳಿಗೆ
ಆಗಾಗ "ಎದ್ದೇಳು ಮಂಜುನಾಥ" ಅಂತ ಹೇಳುವವರು ಯಾರಾದರು ಬೇಕು.
"ಎದ್ದೇಳು ಮಂಜುನಾಥ" ದಲ್ಲೂ ಕೊನೆ ಕೊನೆಯಲ್ಲಿ ಸ್ವಲ್ಪ ನಾಟಕೀಯ ಅನ್ನಿಸುವ ಸನ್ನಿವೇಶಗಳಿವೆ. ಕೊನೆ ಕೊನೆಯಲ್ಲಿ ಇದ್ದಕ್ಕಿದ್ದ ಹಾಗೇ ಪಾತ್ರಗಳು ಏರುದನಿಯಲ್ಲಿ ಮಾತನಾಡತೊಡಗುತ್ತವೆ. ತನ್ನ ಅನುಕೂಲಕ್ಕಾಗಿ ಏನನ್ನಾದರೂ ಮಾಡಲು ಹೇಸದ ಮಂಜ, ಹೆಣ್ಣು ಶಿಶುವಿಗೆ ಹಂಬಲಿಸುವುದು ಸಹಜ ಅನ್ನಿಸುವುದಿಲ್ಲ. ಹೇಳಬೇಕು ಅನ್ನಿಸುವುದಕ್ಕೆ ಆಗಾಗ ಅತಿಯಾದ ಲಿಬರ್ಟಿ ತೆಗೊಳೊ ಗುರು ಸಣ್ಣ ಸಣ್ಣ ಸೂಕ್ಷ್ಮ ಗಳನ್ನು ಇಗ್ನೋರ್ ಮಾಡುತ್ತಾರೆ. ಉದಾಹರಣೆಗೆ...ವರಳೆಯಲ್ಲಿ ಬ್ರಾಂದಿ ಕುಡಿಸುವ ಅಜ್ಜಿ "ಹಿಂಗೆ ಕುಡಿದ್ರೆ ಶ್ರೀನಗರ ಕಿಟ್ಟಿ ಆಗ್ ಬಿಡ್ತೀಯ ಕಣೋ" ಅನ್ನುವುದು. ಸುಮಾರು ಮೂವತ್ತರ ಹತ್ತಿರದ ಕಥಾನಾಯಕ ಚಿಕ್ಕವನಾಗಿದ್ದಾಗ "ಇಂತಿನಿನ್ನ ಪ್ರೀತಿಯ" ಬಿಡುಗಡೆ ಆಗಿರಲಿಲ್ಲ. ಅದು ಆಗಿದ್ದು ಇತ್ತೀಚಿಗೆ, ಆದ್ರೂ ಕತೆಯ ಮೂಲ ಉದ್ದೇಶಕ್ಕೆ ಇದು ಯಾವುದೇ ಧಕ್ಕೆ ತರುವುದಿಲ್ಲ ವಾದ್ದರಿಂದ ನಕ್ಕು ಸುಮ್ಮನಾಗಬಹುದು.

ಇಷ್ಟೆಲ್ಲಾ ಪದಗಳನ್ನು ಉಪ್ಯೋಗಿಸಿ ಹೇಳಕ್ಕೆ ಹೊರಟಿದ್ದು, ಚಿತ್ರ ನನಿಗೆ ಬಹಳ ಕುಷಿ ಕೊಡ್ತು ನೀವು ನೋಡಿ ಅಂತ. ಸ್ನೇಹಿತರ ಜೊತೆ ಹೋಗ್ತೀರೋ, ಅಥವ ಹೆಂಡತಿ ಜೋತೆ ಹೋಗ್ತೀರೋ ಅನ್ನೋದು ಸ್ವಲ್ಪ ಯೋಚನೆ ಮಾಡಿ ಹೊರಡಿ. ಯಾಕೆ ಅಂದ್ರೆ, ಚಿತ್ರ ಮುಗಿದು ಹೊರಗೆ ಬಂದಾಗ ಹೆಂಡತಿ ಸ್ವಾಟೆ ತಿವಿದು "ಎಲ್ಲಾ ಗಂಡಸರೂ ಹಿಂಗೆ ಸ್ವಲ್ಪ" ಅನ್ನಬಹುದು. ಹೆ ಹೆ ಹೆ ಹೆ...

No comments:

Related Posts with Thumbnails