Friday, March 20, 2009

ಸ[S]ಣ್ಣ ಮ[M]ಟ್ಟದ ಸು[S]ಳ್ಳು.

ನಾನು ಹೇಳ್ತಾಇದ್ದ ಮಾತುಗಳಿಗೆಲ್ಲಾ ಸುಮ್ಮನೇ "ಹುಂ" "ಹೌದು" ಅಥವ "ಇಲ್ಲಾ" ಅಂತ ಅಷ್ಟೇ ತುಂಡು ಉತ್ತರ ಕೊಡುತಿದ್ದ ಗೆಳೆಯ ತಲೆ ತಗ್ಗಿಸಿ ಮೊಬೈಲ್ ನಲ್ಲಿ ಏನೋ ಕುಟ್ಟುತಿದ್ದ. ಕಾರಿನ ರೇಡಿಯೋದ ಯಾವುದೋ ಚಾನಲ್ ನಲ್ಲಿ ರಬ್ಬರ್ ಬಾಯಿಯ ರೇಡಿಯೋ ಜಾಕಿ, ಯಾರೋ ನಿಲ್ಲಿಸಲು ಮರೆತು ಹೋದ ಬೀದಿ ನಲ್ಲಿಯಲ್ಲಿ ಬೀಳುವ ನೀರಿನಂತೆ ಮಾತಾಡುತ್ತಲೇ ಇದ್ದಳು.
ಹುಬ್ಬು ಗಂಟಿಕ್ಕಿ ಮೊಬೈಲ್ ಅನ್ನೇ ದಿಟ್ಟಿಸುತ್ತಿದ್ದ ಗೆಳೆಯ, ’ಬೀಪ್ ಬೀಪ್" ಅಂದ ಮೊಬೈಲ್ ಅನ್ನು ತಡಬಡಾಯಿಸಿ ಹಿಡಿದು, ಆತುರದಿಂದ ಅಲ್ಲಿ ಇಲ್ಲಿ ಕ್ಲಿಕ್ಕಿಸಿ, ಗಂಟಿಕ್ಕಿದ್ದ ಮುಖವನ್ನು ಸಣ್ಣದಾಗಿ ನಂದಿಬಟ್ಟಲಿನಂತೆ ಅರಳಿಸಿದ. ತಕ್ಷಣ ನನ್ನ ಕಡೆ ತಿರುಗಿ "ಏ...ನೋಡೋ! "ಹಗ್ಸ್ ಅಂಡ್ ಕಿಸ್ಸಸ್" ಕಳ್ಸಿದ್ದಾಳೆ" ಅಂತ ದೊಡ್ಡ ಬೇಟೆ ಆಡಿದವನಂತೆ ಹಲ್ಲು ಕಿರಿದ.
ನನಿಗೆ ಏನನ್ನಬೇಕು ಅಂತ ಗೊತ್ತಾಗಲಿಲ್ಲ. ಒಂದು ಸಾರಿ ನಕ್ಕು ಪುನಃ ಕಾರು ಓಡಿಸಲು ಶುರುಮಾಡಿದೆ. "ಬೋಳೀಮಗನೆ, ನಿಂಗೆ ಹೊಟ್ಟೆ ಕಿಚ್ಚು ಅದಿಕ್ಕೆ ಏನೂ ಹೇಳಲ್ಲ" ಅಂದ.
"ಹಾಗಲ್ಲ ಕಣೊ, ನಿನಿಗೆ ಎಸ್ ಎಮ್ ಎಸ್ ಬಂದ್ರೆ ನನ್ನನ್ನೂ ಕುಷಿ ಪಡು ಅಂದ್ರೆ ಹೆಂಗೆ?" ಅಂದೆ.
ಅಷ್ಟರಲ್ಲಿ ಅವನು ಪುನಃ ತಲೆ ತಗ್ಗಿಸಿ ಮೊಬೈಲ್ ಕುಟ್ಟುತಿದ್ದ.
"ಇವತ್ತು ಪಾರ್ಟಿ, ಏನ್ ಬೇಕು ಹೇಳು ಗುರೂ" ಅಂದ, ಕಣ್ಣಲ್ಲೇ ಅದೇ ಸ್ಪಾರ್ಕು.
"ಲೇ ಸುಮ್ನಿರೊ, ಒಂದು ಎಸ್ ಎಮ್ ಎಸ್ ಬಂದಿಲ್ಲ ಆಗ್ಲೇ ಪಾರ್ಟಿ ಅಂತೆ. ನಿನಿಗಿರೋ ಗರ್ಲ್ ಫ್ರೆಂಡ್ಸ್ ನೋಡಿದ್ರೆ ಪಾರ್ಟಿ ಕೊಟ್ಟು ಬರ್ಬಾದ್ ಆಗಿ ಹೋಗ್ತೀಯ ಹ ಹ ಹ.. ಮೊದಲು ಎದುರಿಗೆ ಸಿಕ್ಕಾಗ,ಅದೇ ಮಾತು ಅವಳು ನಿಂಗೆ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ, ಆಮೇಲೆ ಪಾರ್ಟಿ"ನಾನಂದೆ.

"ಅಂದ್ರೆ ಅವಳು ಎಸ್ ಎಮ್ ಎಸ್ ಕಳ್ಸಿರೋದು ಸುಳ್ಳಾ" ಅಂತ ಜಗಳಕ್ಕೆ ಬಿದ್ದ.
"ಹಂಗಲ್ಲಾ ಕಣೋ, ನನ್ನನ್ನ ಕೇಳಿದ್ರೆ ಎಸ್ ಎಮ್ ಎಸ್ ಅಂದ್ರೆ ಸಣ್ಣ ಮಟ್ಟದ ಸುಳ್ಳು ಅಂತ. ಆ ಕ್ಷಣದಲ್ಲಿ ಏನನ್ನಿಸುತ್ತೋ ಅದನ್ನ ಒಮ್ಮೊಮ್ಮೆ ಯೋಚನೆ ಕೂಡ ಮಾಡದೆ ಟೈಪ್ ಮಾಡಿ ಕಳಿಸಿ ಕೈತೊಳಕೊಳ್ಳೋದು. ನನ್ನ ಪಕ್ಕದಲ್ಲೇ ಕಾಫೀ ಡೇ ನಲ್ಲಿ ಕುಳಿತ ನನ್ನ ಕ್ಲೈಂಟ್ ಒಬ್ಬರು " ಐ ಯಾಮ್ ಇನ್ ಮೀಟಿಂಗ್, ವಿಲ್ ಕಾಲು ಯು ಲೇಟರ್" ಅಂತ ಅವರ ಸಾಲಗಾರರಿಗೆ ಎಸ್ ಎಮ್ ಎಸ್ ಕಳಿಸ್ತಾರೆ. ಇದೆಲ್ಲಾ ನಿಂಗೂ ಗೊತ್ತು. ಈ ಹಗ್ಸು ಅಂಡ್ ಕಿಸ್ಸಸ್ಸು ಅಂತ ಎಲ್ಲಾ ಈಗ ಟೈಪ್ ಮಾಡ್ಬೇಕಾದ್ರೆ, ಅದೇ ಭಾವನೆ ಅವರ ಎದೆಯಲ್ಲಿ ಇರುತ್ತೆ ಅಂತ ಗ್ಯಾರಂಟಿ ಏನಿಲ್ಲ. ಕಾಫಿ ಮಾಡ್ತಾನೋ, ಟೀವಿ ನೋಡ್ತಾನೊ ಅಥವ ಕಾರಲ್ಲಿ ಟ್ರಾಫಿಕ್ ನಲ್ಲಿ ಕೂತು ಬೋರಾಗಿ ಹೋಗಿದ್ದಾಗ ಸುಮ್ಮನೇ ಹಾಗೇ ಕಳಿಸಿರಬಹುದು.ಬೆನ್ನು ಬೆನ್ನಿಗೇ ನೀನು ಎಸ್ ಎಮ್ ಎಸ್ ಕಳಿಸ್ತಿರಬೇಕಾದ್ರೆ, ಹಾಳಾಗಿ ಹೋಗ್ಲಿ ಸ್ವಲ್ಪ ಹೊತ್ತು ಸುಮ್ಮನೇ ಇರಲಿ ಅಂದು ಕೊಂಡು ಹಗ್ಸು,ಕಿಸ್ಸು ಕಳಿಸಿ ನಿನ್ನ ಮೇಲೆ ಹಾರಾಡಿಸಿರಬಹುದು. ಹಬ್ಬಗಳಲ್ಲಿ ಇಷ್ಟಿಷ್ಟು ಉದ್ದ ವಿಷ್ ಮಾಡಿ ಎಸ್ ಎಮ್ ಎಸ್ ಕಳಿಸ್ತಾರೆ ನೋಡಿದ್ದೀಯ? ಎಷ್ಟೋ ಎಸ್ ಎಮ್ ಎಸ್ ಗಳು ಬೇರೆ ಬೇರೆ ಯವರ ಕಡೇ ಇಂದ ಬಂದಿದ್ರೂನು,ಒಂದೇ ಎಸ್ ಎಮ್ ಎಸ್ ನ ಕಾಪಿ ಆಗಿರುತ್ತೆ. ಯಾಕೆ ಅಂದ್ರೆ ಅವರಿಗೆ ಯಾರೋ ಕಳ್ಸಿದ್ದನ್ನ ನಮಿಗೆ ಫಾರ್ವಡ್ ಮಾಡಿರ್ತಾರೆ, ಹಾಗೆ. ಎಸ್ ಎಮ್ ಎಸ್ ನಲ್ಲಿ ಯಾಕೋ ನಂಬಿಕೆ ಇಲ್ಲಪ್ಪಾ, ಎದುರಿಗೆ ಸಿಕ್ಕಾ ಆಡೋ ಮಾತೇ ಸತ್ಯ. ಕಣ್ಣಲ್ಲಿ ಕಣ್ಣಿಟ್ಟು ಅದೇ ಮಾತು ಹೇಳಿದ್ರೆ ನಾನು ಒಪ್ಪುತ್ತೇನೆ, ನೀನು ಒಪ್ಪಬೇಕು" ಅಂದೆ.
"ಎಲ್ಲಾ ಮಜಾ ಹಾಳು ಮಾಡ್ಬಿಟ್ಟೆ ನೀನು. ಪಾರ್ಟಿ ಸ್ಪಾಯ್ಲರ್ ನೀನು" ಅಂತ ಅವಲತ್ತು ಕೊಂಡ.
"ಲೋ ನೀನೆ ನಿಜ ಹೇಳೂ, ನಿನ್ನ ಮೊಬೈಲ್ ನಲ್ಲೆ, ಆ ಹುಡುಗೀನ ಬಿಟ್ಟು, ಇನ್ನು ಏಷ್ಟು ಜನ ಹುಡುಗೀರ ನಂಬರ್ ಇದೆ. ನೀನು ಒಂದು ಹುಡುಗೀಗೆ "ಗುಡ್ ಮಾರ್ನಿ‍ಂಗ್, ಹೌ ಇಸ್ ಮೈ ಕ್ಯುಟಿ ಟುಡೆ" ಅಂತ ಟೈಪ್ ಮಾಡಿ ಎಲ್ಲಾ ಹುಡುಗೀರ ನಂಬರಿಗೂ ಅದನ್ನೇ ಫಾರ್ವಡ್ ಮಾಡ್ತೀಯ ಅಂತ ನೀನೆ ಹೇಳಿದ್ದೆ. ಹಾಗೇನೆ, ನಿನಿಗೆ ಬಂದ "ಹಗ್ಸ್ ಅಂಡ್ ಕಿಸ್ಸಸ್ಸ್" ಅದೇ ಕ್ಷಣಕ್ಕೆ ಇನ್ನೆಷ್ಟು ಜನಕ್ಕೆ ಹೋಗಿರಬಹುದು ಅಂತ ಯೋಚನೆ ಮಾಡು. ಅವ್ರೂ ಎಲ್ಲಾರೂ ನಿನ್ನ ಹಂಗೆ ಪಾರ್ಟಿ ಮಾಡಕ್ಕೆ ಯೋಚನೆ ಮಾಡಿರಬಹುದು" ಅಂತಂದೆ.
"ಹೌದಲ್ವ? ಥೊ...ತಲೆಕೆಡಿಸಿಬಿಟ್ಟೆ ಗುರೂ ನೀನು."
ಫೋನ್ ತೆಗೆದು ಪಕ್ಕಕ್ಕೆ ಕುಟ್ಟಿ ಇಟ್ಟು ಮುಖ ಹುಳ್ಳಗೆ ಮಾಡಿದ. ಭಾವನೆಗಳ ಮೇಲೇನೆ ಅವನ ವಿಶ್ವಾಷ ಕಳೆದು ಹೋದ ಹಾಗಿತ್ತು.

ನೆನ್ನೆ ಬೆಳಿಗ್ಗೆ ಪೇಪರ್ ನೋಡ್ತಾ ಇದ್ದೆ. [ಇಲ್ಲಿ ಓದಿ, Times of India]ಅನುಪಮಾ ಅಚಾರ್ ಅಂತೆ, ಗಗನ ಸಖಿ, ಗೆಳೆಯನ ಜೊತೆ ಜಗಳ ಆಡ್ತಾ ಇದ್ದಳಂತೆ.ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ಹೆದರಿಸಿದಳಂತೆ. ಅದನ್ನ ಆ ಪುಣ್ಯಾತ್ಮ, ಹುಡುಗಿಯ ಅಪ್ಪನಿಗೆ ಎಸ್ ಎಮ್ ಎಸ್ ಮೂಲಕ ತಿಳಿಸುತಿದ್ದ ನಂತೆ. ಈ ನಮ್ಮ ಮಾಹಾನ್ ತಂದೆ ಕೂಡ ಎಸ್ ಎಮ್ ಎಸ್ ನಲ್ಲೇ ಮಗಳಿಗೆ ಗದರಿ, ಸಮಾಧಾನ ಮಾಡುತಿದ್ದ ನಂತೆ. ಯಾವುದೋ ಒಂದು ವಿಷ ಘಳಿಗೆ ಯಲ್ಲಿ, ಸ್ಮೋಕ್ ಮಾಡ್ಬೇಡ ಅಂದ ಗೆಳೆಯನ ಮೇಲಿನ ಸಿಟ್ಟಿಗೆ ಮಹಡಿಯಿಂದ ಬಿದ್ದು ಅತ್ಮಹತ್ಯ ಮಾಡಿಕೊಂಡಿದ್ದಾಳೆ ಹುಡುಗಿ. ಇಂಥಹ ವಿಷಯವನ್ನೂ ಎಸ್ ಎಮ್ ಎಸ್ ನಲ್ಲಿ ಪರಿಹಾರ ಹುಡುಕಲಿಕ್ಕೆ ಹೋದ ಅವಳ ಪ್ರಿಯತಮ ಮತ್ತು ಅಪ್ಪನ ಮೇಲೆ ಇನ್ನಿಲ್ಲದ ಕೋಪ ಬಂತು. ಅವನ ಮಗಳಿಗೆ ಒಂದು ಫೊನ್ ಮಾಡಿ "ಬೇಡ ಮಗಳೆ, ಇದು ಒಳ್ಳೆಯದಲ್ಲಾ. ಮನೇಗೆ ಬಾ ಮಾತಾಡಣ" ಅಂದಿದ್ರೆ, ತಂದೆ ದನಿ ಕೇಳಿದ ಮಗಳು ಸಾವಿಗೆ ಓ ಗೊಡುತ್ತಿರಲಿಲ್ಲವೋ ಏನೋ. ಟೀವಿ ನೋಡ್ತಾನೋ, ಇನ್ನೇನೋ ಮಾಡ್ತಾ ಅವಳಪ್ಪ ಕಾಟಾಚಾರಕ್ಕೆ ಎರಡು ಸಮಾಧಾನದ ಎಸ್ ಎಮ್ ಎಸ್ ಕಳಿಸಿರಬೇಕು, ಹುಡುಗಿಗೆ ಅಪ್ಪನ ಭಾವನೆಗಳು ತಲುಪಿಲ್ಲ...ಪ್ರಾಣ ಬಿಟ್ಟಲು.
ಎಸ್ ಎಮ್ ಎಸ್
ಸಣ್ಣ ಮಟ್ಟದ ಸುಳ್ಳು.

2 comments:

ವಿ.ರಾ.ಹೆ. said...

ಹ್ಹ ಹ್ಹ... very true

Ravi said...
This comment has been removed by the author.
Related Posts with Thumbnails