Friday, November 19, 2010

ಬಂದವರಾರೂ ಅಚ್ಚಳಿಯದ ಚಿತ್ರ ಉಳಿಸುವುದಿಲ್ಲ

ಪುಟ್ಟ ಹುಡುಗಿ, ಹೊಸ ಅಂಗಿಯ ತುದಿ ಹಿಡಿದು...ಕಾಲು ಎತ್ತರಿಸಿ..ತನ್ನ ಕತ್ತಿನ ಹತ್ತಿರ ತಂದು, ಹಿಂದೆ ನಿಂತ ಅಮ್ಮನಿಗೆ..ಒಮ್ಮೆ ಹುಬ್ಬು ಹಾರಿಸಿ  ಕೇಳಿದಳು, ಹೇಗಿದೆ ಅಂತ. ಅಮ್ಮ.."ಹುಂ ಚೆನ್ನಾಗಿದೆ, ಮೆರೆದಿದ್ದು ಸಾಕು..ಪ್ಯಾಕ್ ಮಾಡ್ಸಿ ಹೋಗಣ ಬಾ" ಅಂತ ಮುಗುಳ್ನಕ್ಕು,ತೋಳು ಹಿಡಿದು ಪಕ್ಕಕ್ಕೆಳದು ಕರೆದುಕೊಂಡು ಹೋದಳು. ಮತ್ತೆ ಒಂದು ಹರೆಯದ ಜೋಡಿ,ತನ್ನ ಗೆಳೆಯನ ಟೀ ಶರ್ಟ್ ನ ಮೂರು ಬಣ್ಣಗಳಲ್ಲಿ ಒಂದನ್ನು ಆರಿಸಿ, ತಿರ್ಮಾನಿಸಿ ಹೋಯಿತು. ಸ್ವಲ್ಪ ದಪ್ಪವಿರುವ ಮದ್ಯಮ ವಯಸ್ಸಿನ ಹೆಂಗಸು, ಯಾವುದೇ ಬಟ್ಟೇ ಅವಳನ್ನು ಅಂದವಾಗಿಸುತ್ತಿಲ್ಲ. ಅದು ಬಟ್ಟೆಯ ತಪ್ಪಲ್ಲಾ, ಆಕೆ ಕಳೆದು ಹೋದ ಹತ್ತುವರ್ಷದ ಹಿಂದಿನ ತನ್ನನ್ನೆ ಅಲ್ಲಿ ಹುಡುಕುತಿದ್ದಾಳೆ..ಈಗ ಆಕೆ ಸ್ವಲ್ಪ ದಪ್ಪ ಎನ್ನುವುದನ್ನು ಒಪ್ಪಲಾಗದೇ ಕಳವಳಿಸುತ್ತಾಳೆ.
ಅಹಾ..ಏನೆಲ್ಲಾ ನೋಡುತ್ತೇ ರಿ..ಮೆಗಾ ಮಾರ್ಟ್ ನ ನಿಲುವುಗನ್ನಡಿ. ಎಷ್ಟೆಲ್ಲಾ ಎಮೊಷನ್ ಗಳನ್ನು ದಿನದಲ್ಲಿ ತನ್ನಲ್ಲಿಯೇ ಮೂಡುವುದನ್ನು ಕಂಡು ಆ ಕನ್ನಡಿಗೆ ಏನನ್ನಿಸಬಹುದು? ಎಷ್ಟು ಜನರ, ಯಾವ ಯಾವ ನಮೂನೆಯ ಮುಖಗಳು ಅದರ ಎದೆಯಾಳದಲ್ಲಿ ಮೂಡಿ ಹಾಗೇ...ಅಳಿಸಿ ಹೋಗುತ್ತದೆ..ಮತ್ತೊಂದಕ್ಕೆ ಅಣಿಯಾಗುತ್ತದೆ. ಹತ್ತು ನಿಮಿಷದ ನಂತರ..ಇನ್ನ್ಯಾರೋ..ಇನ್ನೇನೋ...ಬಂದವರಾರೂ ಅಚ್ಚಳಿಯದ ಚಿತ್ರ ಉಳಿಸುವುದಿಲ್ಲ. ಹೀಗಿರಬೇಕು ನಾವುಗಳೂ ಕೊಡ ಬಂದವರ ಆ ಕ್ಷಣದ ಸುಖ ದುಃಖಗಳನ್ನು ಹಂಚಿಕೊಂಡು ಅವರು ಹೊರಟಾಗ...ಅವರು ಯಾವುದನ್ನೂ...ಯಾವ ಚಿತ್ರವನ್ನೂ ಉಳಿಸಿ ಹೊಗದಂತೆ ನೋಡಿಕೊಳ್ಳಬೇಕು...ಒಳಗಿನ ಕನ್ನಡಿ ದಿನಕ್ಕೊಮ್ಮೆ ಖಾಲಿ ಆಗಬೇಕು, ಎಲ್ಲವನ್ನೂ ಹಿಡಿದಿಟ್ಟು ಕೊಂಡರೇ...ಎದೆ ತುಂಬಿ, ಬಿರುಕು ಬಿಟ್ಟೀತು...

No comments:

Related Posts with Thumbnails