Wednesday, January 27, 2010

ಹೊತ್ತಿಗೆ ಮುಂಚೆ, ಅಗತ್ಯ ಇಲ್ಲದೇ ಇದ್ದರೂ ಎದ್ದ ಹಳೇ ಮುದುಕ,


ಹೊತ್ತಿಗೆ ಮುಂಚೆ, ಅಗತ್ಯ ಇಲ್ಲದೇ ಇದ್ದರೂ ಎದ್ದ ಹಳೇ ಮುದುಕ, ಕಮಟು ದಿಂಬಿನ ಅಡಿ ಇಟ್ಟಿದ್ದ ಅರೆ ಸೇದಿದ ಬೀಡಿಯನ್ನು ಪುನಃ ಹಚ್ಚಿ ಹೋಗೆ ಬಿಡುತ್ತಿರುವಂತೆ ಬೆಳಿಗ್ಗೆ ಎದ್ದರೆ ಮಂಜು. ಉತ್ತರ ಭಾರತದಲ್ಲಿ ದಿನ ಶುರುವಾಗುವುದೇ ಮಧ್ಯಾನಃಕ್ಕಂತೆ. ನಮ್ಮ ಮನೆಯ ಮಾರ್ಬಲ್ ನೆಲದ ತಂಡಿಗೆ ಯಾವಾಗಲೂ ಕಾಲುಚೀಲ ಹಾಕಬೇಕಾದ ಪರಿಸ್ಥಿಗೆ ನಮ್ಮ ಮನೆಯ ಓನರಿಗೆ ಬೈಯುತ್ತಲೇ ದಿನ ಶುರು. ಅಷ್ಟರಲ್ಲಿ, ಬಾಗಿಲ ತುದಿಗೆ ಕಟ್ಟಿದ್ದ "ಚೈಮ್",... ಧಾಡ್ ಎಂದು ಹೊಡೆತಬಿದ್ದ ಸದ್ದಿಗೆ, ದೇವಸ್ಥಾನದ ಪೂಜೆಯ ಸಮಯದ ಅಷ್ಟೂ ಘಂಟೆಗಳ ಸದ್ದಿನಂತೆ ಗಣಗಣಿಸಿದಾಗ ಹೊರಬಂದು ನೋಡಿದರೆ, ಸಣಕಲು ದೇಹದ, ಹದಿಹರಿಯದ ಹುಡುಗ, ಶರ್ಟನ್ನಷ್ಟೆ ಧರಿಸಿ, ಅವತ್ತಿನ ಪತ್ರಿಕೆ ಗುರಿ ಇಟ್ಟು ಎಸೆದು, ಸೈಕಲ್ಲಿನ ಹಿಂಬದಿಯಲ್ಲಿದ್ದ ಮಿಕ್ಕ ಪತ್ರಿಕೆಗಳನ್ನು ಅತ್ತಿತ್ತ, ಬೀಳದಂತೆ ಸರಿಸಿ, ಕಾಲ್ಲಲ್ಲಿ ಕುಂಟುತ್ತಾ ಕುಂಟುತ್ತಾ, ಗಾಡಿಯನ್ನು ಬದಿಗೆ ತಿರುಗಿಸಿ ಮುಂದಿನ ಮನೆಗೆ ಹೊರಟಿರುತ್ತಾನೆ.
ಸಂತೋಷಿ ಮಾ ವ್ರತ ಮಾಡುತ್ತಿರುವ ಎದುರಿನ ಆಂಟಿ, ಆಗಲೇ ಮಡಿ ಮಡಿಯಾಗಿ, ಮಕ್ಕಳು ಇನ್ನೂ ಎದ್ದಿಲ್ಲದಿರುವುದಕ್ಕೆ ಒಳಗೊಳಗೇ ಸಿಡಿಮಿಡಿ ಗೊಂಡು, ಭಕ್ತಿ ಮತ್ತು ಕೋಪ ಇವೆರೆಡರ ವಿಚಿತ್ರ ಸಮ್ಮಿಶ್ರದ ಭಾವನೆಯಲ್ಲಿ ರಂಗೋಲಿ ಇಡುತ್ತಿರುತ್ತಾರೆ.

ಇಷ್ಟೆಲ್ಲಾ ಕಣ್ಣುಜ್ಜಿ ನೋಡುವಾಗ, "ಅರೆ, ನಮ್ಮದ್ಯಾವ ಮಹಾ..." ಅನ್ನಿಸಿ ಸಣ್ಣ ಮುಗುಳು ನಗೆ ಯೋಡನೆ ದಿನ ಶುರು.

No comments:

Related Posts with Thumbnails