
"ಮಗಳಿಗೆ ಮದುವೆಗೆ ರೇಷ್ಮೆ ಸೀರೆ ಉಡಿಸಿ ಕಳಿಸುತ್ತೇನೆ ಅಂತ ಯಾಕೆ ಪ್ರಮಾಣ ಮಾಡಿದ್ರಿ?...ಹಾಗೆಲ್ಲ...ಸಾದ್ಯವಾಗದಿದ್ದದ್ದನ್ನು ಹೇಳಿಕೊಂಡರೆ ನಮ್ಮ ಕುಲಕ್ಕೇ ಶಾಪ"
[ಇದು "ಕಾಂಚೀವರಂ" ಚಿತ್ರದ ಒಂದು ಮಾತುಕತೆಯ ತುಣುಕು.]
ಒಂದು ದೀರ್ಘ ರಜೆ...ವಾರದ ಕೊನೆ...ಹಬ್ಬ.
ಏನೇನೋ ಕೆಲಸಗಳ ಮದ್ಯೆ,ನಾನು ಮನೆಯವರ ಜೊತೆ ಸೇರಿ ಊರಿಗೆ ಹೋಗಲಿಕ್ಕಾಗದೆ..ಮನೆಯಲ್ಲೇ ಒಂಟಿ ಆದೆ.
"ವಿಶ್ ಯು ಹ್ಯಾಪಿ ದೀಪಾವಳಿ" ಎಂಬ ಪುಂಖಾನು ಪುಂಖವಾಗಿ ಬರುತ್ತಿದ್ದ ಎಸ್ ಎಮ್ ಎಸ್ ಗಳನ್ನು ನೋಡುವುದಲ್ಲದೇ, ಬೇರೆ ಅಂತಹ ಕೆಲಸವಿರಲಿಲ್ಲ. ಸರಿ...ಏನಾದರೊ ಮಾಡಬೇಕಲ್ಲ ಅಂತ ಹೋಗಿ ತಂದದ್ದು
"ಕಾಂಚೀವರಂ" ಎಂಬ ತಮಿಳು ಸಿನೇಮಾವನ್ನ.
ಇವತ್ತು ಮಣಗಟ್ಟಲೆ ಬಂಗಾರ ಹೇರಿಕೊಂಡು...ಸೀರೆಯೋ...ಶ್ರೀಮಂತಿಕೆಯ ವಾಲ್ ಪೋಸ್ಟರೋ? ಎಂದು ಅನುಮಾನ ಬರುವಂತಹ ರೇಷ್ಮೆ ಸೀರೆಗಳನ್ನು ಉಟ್ಟು, ಮದುವೇ ಮನೆಗಳಲ್ಲಿ ತಿರುಗುವ ಹೆಂಗಸರಿಗೆ, ಸ್ವಾತಂತ್ರ್ಯ ಪೂರ್ವದಲ್ಲಿ, ಇದೇ ಸಿರೆ ನೇಯುತಿದ್ದ ನೇಕಾರನ ಜೀವನದಲ್ಲಿ, ಒಂದು ನೂಲು ಸೀರೆ ಕೊಂಡುಕೊಳ್ಳಲು ಸಾದ್ಯವಾಗದ ಪರಿಸ್ಥಿತಿ ಇತ್ತು ಅಂದರೆ ನಂಬಲಾರರೇನೊ.
"ಕಾಂಚೀವರಂ" ಅಂದಿನ ಕಾಲದ ಒಬ್ಬ, ಕನಸುಗಳುಲ್ಲ ನೇಕಾರನ ಬದುಕಿನ ಕಥನ. ಪ್ರಕಾಶ್ ರಾಜ್ ಆ ಪಾತ್ರಕ್ಕೆ ತನ್ನದೇ ಆದ ರೀತಿಯಲ್ಲಿ ನ್ಯಾಯ ಒದಗಿಸಿದ್ದಾನೆ. ತನ್ನ ಹೆಂಡತಿಗೆ ರೇಷ್ಮೆ ಸೀರೆ ಉಡಿಸಿ, ಮದುವೇ ಮಾಡಿಕೊಂಡು ಕರೆತರುತ್ತೇನೆ ಎಂದು ಊರಿಗೆಲ್ಲ ಹೇಳುತಿದ್ದ ವೆಂಗಡಂ ಎಂಬ ನೇಕಾರ, ಆ ಕನಸು ನೆನಸಾಗದೇ...ತನಗೆ ಹುಟ್ಟಿದ ಒಬ್ಬ ಮಗಳಿಗೆ ಹೆಸರಿಡುವ ಸಮಯದಲ್ಲಿ ಅವಳಿಗೆ ಮದುವೆಯ ಸಮಯದಲ್ಲಿ ರೇಷ್ಮೆ ಸೀರೆ ಉಡಿಸಿಯೇ ಕಳಿಸುತ್ತೇನೆ ಎಂದು ಕಿವಿಯಲ್ಲಿ ಭಾಷೆ ಕೊಡುತ್ತಾನೆ.
ಅದಕ್ಕಾಗಿ ಏನೆಲ್ಲಾ ಮಾಡಲು ತಯಾರಾಗುವ ವೆಂಗಡಂ, ಮನೆಯ ಹಿತ್ತಲಿನಲ್ಲಿ ಒಂದು ಸಣ್ಣ ಮಗ್ಗವನ್ನು ಸ್ಥಾಪಿಸಿ, ಕೆಲಸದ ಸ್ಥಳದಿಂದ ಕದ್ದು ತಂದ ರೇಷ್ಮೆ ನೂಲು ಗಳಿಂದ ಮಗಳ ಮರ್ಯಾದೆಯನ್ನು ಸೀರೆಯಾಗಿಸಿ ನೇಯುತಿರುತ್ತಾನೆ. ಮುಂದೇ ಹದಿನಾರು ವರುಷ ಹೀಗೆ ಮುಂದುವರಿದರೂ, ಬಂದೊದಗುವ ಏನೇನೋ ಕಷ್ಟಗಳಿಂದಾಗಿ ಸೀರೆ ಪೂರ್ತಿಮಾಡಲಾಗದೆ, ಕಳ್ಳತನ ಬಯಲಾದಾಗ ಜೈಲು ಸೇರುತ್ತಾನೆ.
ಇದು ಸ್ಥೂಲವಾದ ಕಥೆ. ಮದುವೆ ಮತ್ತು ಸಾವಿನಲ್ಲಿ ರೇಷ್ಮೆ ಶ್ರೇಷ್ಟ ಅನ್ನುವ ನಂಬಿಕೆ ಹಳೆಯದು. ಮಗಳ ಮದುವೆಗಂತೂ ರೇಷ್ಮೆ ತೊಡಿಸಲು ಸಾದ್ಯವಾಗದ ನೇಕಾರ, ಮಗಳು ಸತ್ತಾಗಲೂ ಅವಳ ದೇಹ ಪೂರ್ತಿ ಮುಚ್ಚುವಷ್ಟು ಸೀರೆ ನೇಯಲು ಸಾದ್ಯವಾಗಿರುವುದಿಲ್ಲ.
ಚಿತ್ರ ಒಂದು ಅದ್ಭುತ ಪ್ರಯತ್ನ. ಆಕಾಲದ ಎಲ್ಲಾ ವಸ್ತುಗಳನ್ನು ಒಟ್ಟುಗೋಡಿಸಿ, ಯಾವುದೋ ಹಳೇ ಚಿತ್ರ ನೋಡುತಿರುವೆವೇನೊ ಎಂದೆನಿಸುವಷ್ಟು ಸುಂದರವಾಗಿ ಡಿಟೈಲಿಂಗ್ ಮಾಡಿದ್ದಾರೆ. ಚಾಯಾಗ್ರಹಣ ಕೂಡ ಕತೆಗೆ ತಕ್ಕ ಹಾಗೆ ನೋಡಲು ಚೆಂದವಾಗಿದೆ.
ಪುರುಸೋತ್ತಾದಾಗ, ತಾಳ್ಮೆಯಿಂದ ನೋಡಬೇಕಾದ ಚಿತ್ರ. ನಮ್ಮದೇ ಕರ್ನಾಟಕದ ಮೇಲು ಕೋಟೆ ಯಲ್ಲಿ ಅದರ ಸುತ್ತ ಮುತ್ತ ಚಿತ್ರೀ ಕರಣ ಮಾಡಿದ್ದಾರೆ.
ಗಮನಿಸಿದರೆ ಗೊತ್ತಾಗುತ್ತದೆ.
ಒಮ್ಮೆ ನೋಡಿ..
ಮಹೇನ್.
No comments:
Post a Comment