
ದಸರಾ ಮುಗೀತು. ಅಂಬಾರಿ ಆನೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬನ್ನಿ ಮಂಟಪಕ್ಕೆ ಹೋಗಿ ಕೂಡ ಆಯಿತು.
ದುರ್ಗೆ ತನಗೆ ಸಂದ ಎಲ್ಲಾ ಪೂಜೆ ಪುನಸ್ಕಾರಗಳಿದೆ ಸಂತ್ರುಪ್ತಳಾಗಿ ಹಿಂದುರಿಗಿರಬೇಕು.
ನಾನು ಬೆಳೆದದ್ದೆಲ್ಲಾ ಮೈಸೂರಿನಲ್ಲಿ. ಹಾಗಾಗಿ ದಸರಾ ಒಂದು ವಾರ್ಷಿಕ ಮೇಳ. ಸಾಯಾಜಿ ರಾವ್ ರಸ್ತೆಯಲ್ಲಿ
ವಿದ್ಯುತ್ ಬಲ್ಬ್ ಗಳನ್ನು ಬದಲಾಯಿಸುವ ಕಾರ್ಯ ಶುರು ಆದರೆ ದಸರಾದ ಮುನ್ನುಡಿ. ನಂತರ, ಅರಮನೆ ಸಂಗೀತ, ಚುರುಮುರಿ, ಮಲ್ಲಿಗೆ ಮುಡಿದ ಹೆಣ್ಣುಮಕ್ಕಳು, ಎಗ್ಸಿಬಿಷನ್ನು ಹೇಗೆ ಏನೇನೊ.
ಇದೆಲ್ಲಾದಕ್ಕೂ ಮೊದಲು, ಶಾಲೆಯಲ್ಲಿ ಪರೀಕ್ಷೆ ಬರೆದು ಮನೆಗೆ ಹಿಂದುರುಗುತಿದ್ದ ನಮಗೆ ಅಲ್ಲಲ್ಲಿ ಒಂದೊಂದಾಗಿ ಕಾಣಲು ಶುರುಮಾಡುತಿದ್ದದ್ದು "ಏರೊಪ್ಲೇನ್"ಚಿಟ್ಟೆ. ಅವುಗಳನ್ನು ಕಂಡೊಡನೆ ಒಂದು ಅಂದಾಜು ಮನಸ್ಸಿನಲ್ಲಿ, ಹತ್ತಿರದಲ್ಲೇ ರಜ ಇದೆ ಅಂತ. ಅವುಗಳಿಗೆ ನಾವು ಕೊಟ್ಟ ಹಿಂಸೆ ಅಂತಿಂಹದ್ದಲ್ಲ. ಅದನ್ನು ಮೆಲ್ಲಗೆ ಹಿಂದಿಯಿಂದ ಹೋಗಿ ಹಿಡಿದು, ಅದರ ಬಾಲಕ್ಕೆ ಹಗ್ಗ ಕಟ್ಟಿ ಹಾರಲು ಬಿಡುವುದು. ಯಾರ ಚಿಟ್ಟೆ ಮೇಲೆ ಹೋಗುತ್ತದೂ ನೋಡಿ ಕೇಕೆ ಹಾಕುವುದು. ಇಷ್ಟೆಲ್ಲಾ ತರಲೆ ಮಾಡಿ,ಮದ್ಯಾನಃ ಮುಗಿದ ಶಾಲೆಯಿಂದ ಮನೆ ಮುಟ್ಟುತಿದ್ದದ್ದು, ಸಾಯಂಕಾಲ.
ಹೀಗಾಗಿ ನನ್ನ ದಸರೆಗೂ ಮತ್ತು ಏರೊಪ್ಲೇನ್ ಚಿಟ್ಟೆಗೂ ದೊಡ್ಡ ನಂಟು.
ದಶಮಿಯ ದಿನ, ಮನೆಯಲ್ಲಿ ಯಾರಾದರೂ ಬೇರೆ ಊರಿನಿಂದ ದಸರೆನೋಡಲು ಮನೆಗೆ ಬಂದ ನೆಂಟರಿರುತಿದ್ದರು.
ಮೆರವಣಿಗೆಯ ದಿನ, ಬೆಳ್ಳಂಬೆಳಿಗ್ಗೆ, ಐದೋ, ಆರೋ ಘಂಟೆಗೆ ಚಾಪೆ, ನೀರು, ಊಟ ಎಲ್ಲಾ ಹಿಡಿದು ಕೊಂಡು ಕೆ ಆರ್ ಆಸ್ಪತ್ರೆಯ ಹತ್ತಿರವೊ ಅಥವ ಬಂಬೂಬಜಾರಿನ ಹತ್ತಿರವೊ ಹೋಗಿ ಕುಳಿತು ಕೊಂಡು ಕಾಯಬೇಕಿತ್ತು. ನಾವು ಹೋಗುವ ಘಳಿಗೆಗಾಗಲೇ ಸುತ್ತ ಮುತ್ತಲ ಹಳ್ಳಿಯ ಜನ ಹಿಂದಿನ ದಿನವೇ ಬಂದು ಒಂದು ಪುಟ್ಟ ಸಂಸಾರವನ್ನೇ ಸೆಟ್ ಮಾಡಿರುತಿದ್ದರು. ಅವರೊಂದಿಗೆ ಇಡೀದಿನದ ಒಡನಾಟ. ಅವರು ಬಾಲ್ಯದಲ್ಲಿ ಕಂಡ ದಸರೆಯ ವೈಭವದ "ಕಥೆ". ಸಣ್ಣ ಸಣ್ಣ ಜಗಳ, ಜೂಜು ಇತ್ಯಾದಿ.
ಅಷ್ಟು ಕಷ್ಟ ಪಟ್ಟು ಕಾಯ್ದರೂ, ಇನ್ನೇನು ಅಂಬಾರಿ ಬಳಿಬಂತು ಎನ್ನುವಾಗ ಮುಂದಿರುವವರೆಲ್ಲಾ ಎದ್ದು ನಿಂತು, ಕೆಲವೊಮ್ಮೆ ಏನೂ ಕಾಣದೆ ಜನರ ಹಾಹಕಾರ. ತುಂಬಾ ಚಿಕ್ಕವರಾದ ನಮಕೆ ಕೆಲವೊಮ್ಮೆ ಆನೆಗಳ ಕಾಲುಗಳಷ್ಟೆ ಗತಿ.
ಈಗ ಯಾವಾಗ ಬೇಕಾದರೂ, ಎಲ್ಲಿ ನಿಂತು ಬೇಕಾದರೂ ದಸರನೋಡಬಹುದು. ಜೀವನ ಅಂತಹ ಒಂದು ಅನುಕೂಲಕರ ಸ್ಥಿತಿಯಲ್ಲಿ ನಿಲ್ಲಿಸಿದೆ. ಕೆಲ ಸ್ನೇಹಿತರು ಯಾವ ಪಾಸನ್ನಾದರೂ ತಂದು ಕೊಡುತ್ತಾರೆ, ಆದರೇ ಹೂಗಲೇ ಮನಸಿಲ್ಲ...ಯಾಕೋ ಗೊತ್ತಿಲ್ಲ.
No comments:
Post a Comment