ಮೊನ್ನೆ ಹೀಗೆ...ಕಣ್ಣು ಟೀವಿ ಮೇಲಿಟ್ಟು ಮನಸ್ಸನ್ನ ಎಲ್ಲೋ ಗಾಳೀ ಪಠ ಮಾಡಿದ್ದ ಒಂದು ಅನಾಥ ಬೆಳಗಿನ ನಾಲ್ಕು ಘಂಟೆ. ಮನೆಯಲ್ಲಿ ಯಾರೂ ಇಲ್ಲ. ಬೇಸಿಗೆ ರಜಕ್ಕೆ ನನ್ನೂರಿಗೆ ಹೊಗಿದ್ದರು ನನ್ನ ಹೆಂಡತಿ ಮತ್ತು ಮಗಳು. ಯಾಕೋ ಎಚ್ಚರವಾದ ಬೆಳಿಗ್ಗೆಯನ್ನ ಹಾಗೇ ಹೋಗಲಿಕ್ಕೆ ಬಿಡೋದು ಯಾಕೆ ಅಂತ ಒಂದು ಒಳ್ಳೇ ಕಾಫೀ ಮಾಡಿ ಟೀವಿ ಆನ್ ಮಾಡಿ ಕೂತೆ.
ಯಾವುದೋ ಒಂದು ಮದ್ಯದ ಬಟನ್ ನಿಂದ ಶುರುವಾದದ್ದು ಧಾರ್ಮಿಕ ಕಾರ್ಯಕ್ರಮಗಳ ಚಾನಲ್ಗಳ ಸರಣಿ. ಅದೇನಿರತ್ತೆ ನೋಡೇ ಬಿಡಣ ಅಂತ ಸುಮ್ಮನೆ ಕಣ್ಣಾಡಿಸ ಹತ್ತಿದೆ. ಯಾರೋ ಮುಲ್ಲ ಅವರ ಪುಸ್ತಕ ತೆಗೆದಿಟ್ಟು ಮೂಗಿನ ರಂದ್ರ ಚಿಕ್ಕದು ಮಾಡಿ ಕ್ಷೀಣ ಸ್ವರದಲ್ಲಿ ಅದೇನೋ ಹೆಳ್ತಾಇದ್ದ, ಅರ್ಥಾ ಅಗಲಿಲ್ಲ ಮುಂದೆ ಹೋದೆ. ಇನ್ನೊಂದರಲ್ಲಿ ಸೂಟು ಬೂಟು ಟೈ ಹಾಕಿ ಅರೆಕಣ್ಣು ಮುಚ್ಚಿದ್ದ ಯಾವುದೋ "ಆರೋಕ್ಯನಾಥ" ನೆಂಬ "ದೇವಧೂತ" ಕರ್ತನ ಕರುಣೆಯ ಪ್ರಭಾವವನ್ನು ಕಣ್ಣಲ್ಲಿ ನೀರಿಟ್ಟುಕೊಂಡು ಕುಳಿತಿದ್ದ ಅಮಾಯಕ ಭಕ್ತರಿಗೆ ಮನಮುಟ್ಟುವಂತೆ ವಿವರಿಸುತಿದ್ದ. ಸ್ವಲ್ಪ ಹೊತ್ತಿದ್ದು ಅಲ್ಲಿಂದ ಮುಂದೆ ಹೋದೆ. ಮುಂದೆ... ಅದು ಕಾಮಿಡಿಯೋ ಟ್ರಾಜಿಡಿಯೋ ಗೊತ್ತಾಗದಂತಹ ಒಂದು ಜಾಹೀರಾತು ಕಾರ್ಯಕ್ರಮ. ಅಹಾ! ಎಂತೆಂತಹ ಪ್ರಾಡಕ್ಟ್ ಮಾಡಿದ್ದಾರಪ್ಪ ಭಗವಂತ ನಿನ್ನ ಹೆಸರಲ್ಲಿ ಅಂತ ತಬ್ಬಿಬ್ಬಾಯಿತು.
ಯಾವುದು ಹೆಂಗಸು ಮರಳುಮಾಡುವ ಸ್ವರದಲ್ಲಿ ಯಾವುದೋ ಕಣ್ಣಿನಾಕೃತಿಯ ತಾಯತ ದಂತಹದನ್ನು ಮಾರುತಿದ್ದಳು. ಅದನ್ನು ಕೊಂಡು ಧರಿಸಿದರೆ ಹೊಟ್ಟೇಕಿಚ್ಚು ಪಟ್ಟು ನೋಡುವವರ ಕಣ್ಣು "ಬೀಳುವುದಿಲ್ಲ" ವಂತೆ.
ಅ ಜಾಹೀರಾತಿನಲ್ಲಿ, ಒಂದು ಸಣ್ಣ ಮಗುವನ್ನು ಎತ್ತಿಕೊಂಡಿರುವ ತಾಯಿ ಅದನ್ನು ಕೆಟ್ಟದೃಷ್ಠಿಯಲ್ಲಿ ನೋಡುವ ಮತ್ತೊಂದು ಹೆಂಗಸು ಅವಳ ಕಣ್ಣುಗಳಿಂದ ನೀಲಿಬಣ್ಣದ ಕಿರಣ ಬರುವ ಗ್ರಾಫಿಕ್ಸ್.
ಹೀಗೆಲ್ಲಾ ಕೆಟ್ಟ ಕೆಟ್ಟ ಗ್ರಾಫಿಕ್ಸ್ ಹಾಕಿ ಮಾಯ ಮೋಡಿ ಮಾಡಿ ಜಾಹೀರಾತು ಮಾಡಿ ತಾಯತ ಮಾರಿ ಜನರ ನಂಬಿಕೆ ಅಥವ ಮುಗ್ಧತೆಯ ಲಾಭ ಪಡೆಯ ಬಯಸುವ ಜನರ ಕಂಡು ಹೇಕರಿಕೆ ಬಂತು. ಹಾಂ ಅದನ್ನು ಧರಿಸಿ ನಿಮಗೆ ಅದರಿಂದ ಫಲ ದೊರೆಯಲಿಲ್ಲ ವೆಂದರೆ ಮತ್ತೆ ಹಿಂದುರಿಗಿಸ ಬಹುದಂತೆ. ಇದೆಲ್ಲ ಸಾದ್ಯವಾ?
ಅದು ಮುಗಿಯಿತು ಮತ್ತೊಂದು ಶುರು. ಕೆಟ್ಟ ಕೆಟ್ಟದಾಗಿ ಕೃತಕ ಗಡ್ಡ ತೊಟ್ಟ ಒಬ್ಬ ಜೂನಿಯರ್ ಆರ್ಟಿಷ್ಟ್ ಸ್ವಾಮಿ ಮಾರುತಿದ್ದದ್ದು ಹಿಮಾಲಯದ ಯಾವುದೋ ರುದ್ರಾಕ್ಷಿ ಮಣಿ. ಅವನ ವೇಷ ನೋಡಿದರೇನೆ..ಅಸಹ್ಯವಾಗುವಾಗ ಅದು ಯಾವ ಮನಸ್ಸಿನಿಂದ ರುದ್ರಾಕ್ಷಿ ಮಾರಲು ಬರುತ್ತಾರೆ ಗೊತ್ತಗುವುದಿಲ್ಲ.
ಇದೆಲ್ಲಾ ನೋಡಿದರೆ ಸುಶಿಕ್ಷಿತರಿಗೆ, ಹೀಗೆಲ್ಲಾ ತನ್ನನ್ನು ಮಾರಿಕೊಳ್ಳುವ ಧರ್ಮ ಈ ಶತಮಾನಕ್ಕೆ ಅಲ್ಲ ಅನ್ನಿಸಿ ಅದನ್ನು ಧಿಕ್ಕರಿಸುವ ಮನಸ್ಸಾಗದೇ ಇರದೇನು? ಹೇಳಲು ಕೇಳಲು ಎಷ್ಟೋ ಉನ್ನತ ವಿಚಾರಗಳಿರುವ ನಮ್ಮ ಧರ್ಮದಲ್ಲಿ, ಎಲ್ಲವನ್ನೂ ಬಿಟ್ಟು ದೃಷ್ಠಿ ತಾಯತ, ಮಾಯದ ರುದ್ರಾಕ್ಷಿ ಮುಂತಾದವುಗಳನ್ನು ಮಾರಿ ಮರ್ಯಾದಿ ಕಳೀತಾರೆ. ಅಷ್ಟರಲ್ಲಿ ಕೈಯಲ್ಲಿದ್ದ ಕಾಫೀ ಮಾಯ...ಮತ್ತೊಂದು ದಿನ ಶುರು.
No comments:
Post a Comment