Sunday, February 14, 2010

ಇವತ್ತು ಯಾರದ್ರು ನಿಮಗೆ I LOVE YOU ಹೇಳಿದ್ರಾ?

ನಾನು ನಿನ್ನ ಪ್ರೀತಿಸ್ತೀನಿ ಅಂದ್ರೆ - ಸ್ವಾರ್ಥ

ನೀನು ನನ್ನ ಪ್ರೀತಿಸ್ಬೇಕು ಅಂದ್ರೆ - ಅಹಂಕಾರ

ದಯವಿಟ್ಟೂ ನನ್ನ ಪ್ರೀತಿಸ್ತೀಯ? ಅಂದ್ರೆ - ಬಿಕ್ಷೆ

ನಾನು ನಿನ್ನನ್ನನಲ್ಲದೇ ಬೇರೆ ಯಾರನ್ನೂ ಪ್ರೀತಿಸ್ತಿಲ್ಲಾ.. ಅಂದ್ರೆ - ಅಸಹಾಯಕತೆ

ನೀನು ನನ್ನ ಬಿಟ್ಟು ಇನ್ನ್ಯಾರನ್ನೂ ಪ್ರೀತಿಸ್ಬಾರದು ಅಂದ್ರೆ - ಸರ್ವಾದಿಕಾರತ್ವ

ನಿನ್ನನ್ನೇ ಪ್ರೀತಿ ಮಾಡ್ತೀನಿ ಅಂದ್ರೆ - ಹಠ

ಇಷ್ಟೇಲ್ಲದರ ಮದ್ಯ ಪ್ರೀತಿ ಅಂದ್ರೆ ಏನು? ನಮ್ಮ ಮೂಗಿನ ನೇರಕ್ಕೆ ನಾವು ಇನ್ನೊಬ್ಬರ ಬಗ್ಗೆ ಅಂದು ಕೊಂಡಿದ್ದು, ಮಧುರವಾಗಿ ಕಲ್ಪಿಸಿ ಕೊಂಡಿದ್ದು..ನಮ್ಮ ಪ್ರೀತಿ ಅಂತ ನನ್ನ ಅನಿಸಿಕೆ. ನಾವು ಅಂದು ಕೊಂಡಹಾಗೇ ಇನ್ನೊಬ್ಬರೂ ಇರುತ್ತಾರೆ ಅಂದು ಕೊಂಡು ಅವರನ್ನು ನಮ್ಮ ಕಲ್ಪನೆಯ ಹಿರೋನೋ, ಹಿರೋಯಿನ್ನೋ ಮಾಡಿಕೊಂಡು ಸ್ವಗತ ಸ್ವರ್ಗ ಸುಖ ಅನುಭವಿಸೋದು...ಪ್ರೀತಿ.

ಒಬ್ಬ ಆಟೋ ಡ್ರೈವರನಿಗೆ, ಚಂದ ಕಾಣೋ ಮಾಡ್ರನ್ ಹುಡುಗೀರೆಲ್ಲಾ "ಜಂಬದವರು" ಅವರ ಅಹಂಕಾರವನ್ನು ಮುರಿದು ಅವರನ್ನು ಬಗ್ಗಿಸೋದೇ ಪ್ರೀತಿ.

ಹೀಗೆ ಒಬ್ಬೊಬ್ಬರಿಗೆ ಒಂದೊಂದ್ತರಹ....ಅಂತೂ...ಪ್ರೀತಿ, ಒಬ್ಬರ ಬಗ್ಗೆ ಇನ್ನೋಬ್ಬರು ಏನೋ ಅಂದು ಕೊಂಡು, ಎಲ್ಲಾ ನಾವು ಅಂದು ಕೊಂಡಹಾಗೇ ಇದೆ..ಅಂತ ಸಮಾಧಾನ ಮಾಡಿಕೊಂಡು ಸಂತಸ ಪಡುವ ಒಂದು ವೆವಸ್ತೆ.

ನಿಜವಾಗಿಯೂ ಅದು, ಎರಡು ಪರಸ್ಪರ ಮೆಚ್ಚಿದ ಜೀವಗಳು, ತಮ್ಮಿಬ್ಬರ ಒಟ್ಟು ಕನಸಗಳನ್ನು ನನಸು ಮಾಡಲು ಒಟ್ಟಿಗೆ ದುಡಿಯುವ, ಸಹಕರಿಸುವ ಒಂದು ಕ್ರಿಯೆ ಆಗಬೇಕು. ಇವತ್ತಿನ ಪರಿಸ್ಥಿತಿಗಳು ಇದನ್ನು ಸಾದ್ಯವಾಗಿಸುವುದೇ ಇಲ್ಲ. ಮೊದಲು, ಹಳೆಯಕಾಲದ ಜೋಡಿಗಳಿಗೆ, ತೊಂದರೆಗಳು ಸಮಾನವಾಗಿ ಬರುತಿತ್ತು, ಮತ್ತು ಅದನ್ನು ಅವರು ಒಟ್ಟಾಗಿಯೇ ನಿಭಾಯಿಸುತಿದ್ದರು. ಬಡತನ ಅಂಥಹ ಒಂದು ಸವಾಲು. ಅದನ್ನು ಎದುರಿಸಬೇಕಾದರೆ ಇಬ್ಬರೂ ಒಟ್ಟಿಗೆ ಇರಲೇಬೇಕು, ಇದ್ದು ಜಯಿಸಲೇಬೇಕು. ಹಾಗೇನೇ, ಹಿರಿಯರ ನಿರೀಕ್ಷೇಗಳು, ಮತ್ತು ಒತ್ತಡಗಳು. ಅದನ್ನೂ ಒಟ್ಟಿಗೇ ಹೊಡದಾಡಿ ಗೆಲ್ಲಬೇಕಿತ್ತು.

ಈಗ ಹಾಗಿಲ್ಲ. ಬಡತನ ತನ್ನ ರೂಪವನ್ನು ಬದಲಾಯಿಸಿಕೊಂಡಿದೆ. ಇಂದು ಇನ್ಫರ್ಮೇಷನ್ ಇಲ್ಲದವನು ಬಡವ. ಹಾಗೇ ಹಿರಿಯರೆಲ್ಲಿ ಹೋದರೋ ಗೊತ್ತಿಲ್ಲ.

ಹೀಗಾಗಿ, ತಾವೇ ತಾವಾಗಿ ಉಳಿದ ಜೋಡಿಗಳಿಗೆ ಒಟ್ಟಿಗೆ ಹೊಡೆದಾಡಬೇಕಾದ ಕಾಮನ್ ಶತ್ರುಗಳೇ ಇಲ್ಲ.

ಅವರಿಗೆ ಅವರದೇ ತಲೆ ಬಿಸಿಗಳು. ಅವಳಿಗೆ ಕೆಲಸಕ್ಕೊ ಹೋಗಿ, ಮನೆಯಲ್ಲೊ ಕೆಲಸ ಮಾಡಿ, ಮಾದರಿ ಹೆಣ್ಣಾಗಬೇಕೆಂಬ ಗಂಡನ ಒತ್ತಡ..ಇದು ಅವಳು ಒಬ್ಬಳೇ ನಿಭಾಯಿಸಬೇಕಾದ ಯುದ್ಧ. ಆ ಯುದ್ಧದ ಎದುರಾಳಿ ಗಂಡನೇ. ಅವನನ್ನು ಹೇಗೆ ತಾನೇ ಪ್ರೀತಿಸಿಯಾಳು? ಅವನಿಗೋ ಪಾರಂಪರ್ಯವಾಗಿ ಬಂದ ಗಂಡು ಎಂಬ ಅಹಂ ಇನ್ನೂ ಹೊಗಿಲ್ಲದ ಒಂದು ವಿಚಿತ್ರ ಅವಸ್ಥೆ. ಹೆಂಡ್ತೀನೇನೋ ಪ್ರೀತಿ ಮಾಡಣ, ಆದ್ರೆ ಅವಳಿಗಾಗಿ ಕಾಫೀ ಮಾಡಿಡು ಅಂದ್ರೆ ಹೇಗೆ? ಇದು ಅವನ ಪ್ರೀತಿ ಮಾಡಕ್ಕೆ ಮುಂಚಿನ ಅಹವಾಲು.ದೇಹ ಸುಖದ ಅವಶ್ಯಕತೆ ಮತ್ತದರ ಮಾದಕತೆ ಮುಗಿದ ನಂತರ, ಲೆಕ್ಕಾಚಾರದ ಪಟ್ಟಿ ರಡಿ. ಹಾಂ! ಕಾಮ ಮತ್ತದರ ನಿತ್ಯದ ಅವಶ್ಯಕತೆ, ಅದರ ಸುತ್ತಲಿನ ಸಮಾಜದ ಕಣ್ಗಾವಲು, ಇದು, ಮೊದಲಿನ ಜೋಡಿಗಳು ಕೊನೆ ತನಕ ಒಂದಾಗಿರಲೇಬೇಕಿದ್ದ ಅನಿವಾರ್ಯತೆಗಳಲ್ಲಿ ಒಂದು. ಇವತ್ತು ಕಾಮ ಫ್ರೀ...ರೂಂ ಚಾರ್ಜೇ ಕಾಸ್ಟ್ಲೀ...ಇದು ಪ್ರೀತಿಯ ಮೇಲೆ ಬಿದ್ದಿರುವ ದೊಡ್ಡ ಒತ್ತಡ.

ಎಲ್ಲೋ ಓದಿದ ನೆನಪು, ಯೋಚಿಸುವ ತಾಕತ್ತು ಗಳಿಸಿರುವ ನಾವು ಅಂದರೆ ಮನುಷ್ಯ ಜಾತಿ, ಪ್ರೀತಿ ಹೀಗೆ ಇರಬೇಕು, ಹಾಗೇ ಇರಬೇಕು ಅಂತ ಕಟ್ಟು ಕಟ್ಟಲೆ ಗಳನ್ನು ರೂಢಿಸಿ ಕೊಂಡಿದ್ದೇವೆ...ಅದರೆ ನಮ್ಮ ಜೀನು ಗಳಲ್ಲಿ ರುವ, ಪ್ರಾಣಿ ಸ್ವಭಾವ, ಕಾಮ, ಕ್ರೋಧ ದ ವಿಷಯದಲ್ಲಿ ತನ್ನದೇ ಲೆಕ್ಕದಲ್ಲಿ ನಡೆಯುತ್ತದೆ, ನಮ್ಮ ಎಲ್ಲಾ ಕಟ್ಟು ಪಾಡುಗಳನ್ನು ದಿಕ್ಕರಿಸಿ. ಅದಕ್ಕೇ...ಥೇಟ್ ಸಿಂಹಗಳ ಹಾಗೆ, ಆ ಕ್ಷಣದಲ್ಲಿ ಕೂಡಿ ರಮಿಸಲು ತನ್ನೆಲ್ಲಾ ಬುದ್ದಿ ತಾಕತ್ತು ಕರ್ಚು ಮಾಡುವ ಮನುಷ್ಯ..ಆ ತಕ್ಷಣದ ನಂತರವೇ ಮುಂದಿನ ಪ್ರೀತಿಗೆ ಅಣಿಯಾಗುತ್ತಾನೆ. ಇದ್ದ ಅವಕಾಶಗಳಲ್ಲೆ, ಸಂತಾನ ಅಭಿವೃದ್ಧಿಗೆ, ಬದ್ರತೆಗೆ, ಬಲಿಷ್ಠ ಸಿಂಹ ನನ್ನು ಹುಡುಕು ಸಿಂಹಿಣಿಯ ಬುದ್ದಿಯ ಹೆಣ್ಣು, ಯಾವುದೋ ಪರಿಸ್ಥಿತಿಯ ಒತ್ತಡಕ್ಕೆ ಯಾರನ್ನೋ ವರಿಸಿ ಮದುವೆಯಾಗಿದ್ದರೂ...ತನ್ನ ಕನಸಿನ ಹುಡುಗ ಬಂದಾಗ...ಅರೆ ಗಣ್ಣಲ್ಲಿ ಕನಸು ಕಂಡೇ ಕಾಣುತ್ತಾಳೆ..ಕಟ್ಟಲೆ ಗಳು ಮನಸ್ಸನ್ನು ಹೇಗೆ ಕಟ್ಟಿಹಾಕುತ್ತದೆ?

I LOVE YOU ಅಂದ ಆ ಕ್ಷಣ ಮಾತ್ರ ಸತ್ಯ...ಅದನ್ನು ಆ ಕ್ಷಣದಲ್ಲಿ ನಿಜವಾಗಿಯೂ ಹೃದಯದಿಂದ ಹೇಳಿರಲೂ ಬಹುದು. ನಾಳೆಯೋ ನಾಳಿದ್ದೋ ಆತನೋ/ಆಕೆಯೋ ಬದಲಾಗಿದ್ದರೆ ಬೇಸರಿಸಬಾರದು. ಅಂದದ್ದು ಆ ಕ್ಷಣಕಷ್ಟೇ, ಅಲ್ಲಿಂದ ಮುಂದೆಯೂ ಅದು ಸತ್ಯವಾಗಿ ಮುಂದು ವರೆಯ ಬೇಕೆಂಬುದು ನಮ್ಮ ದುರಾಸೆ ಅಷ್ಟೇ. :)

ಇವತ್ತು ಯಾರದ್ರು ನಿಮಗೆ I LOVE YOU ಹೇಳಿದ್ರಾ? ಆ ಕ್ಷಣವನ್ನು ಮನಸ್ಸಿನಲ್ಲಿ ಬದ್ರ ಮಾಡಿಕೋಳ್ಳೀ...ನಾಳೆಯೂ ಹಾಗೇ ಇರದು ತೇಲುವ ಮೋಡ...ಮುಂದೆಲ್ಲೋ, ಇನ್ನೆಲ್ಲೋ, ಮಳೆಯಾಗುವುದೆಂದು ಅಲ್ಲೋಂದು ಮನಸ್ಸು ಕಾದಿರಬಹುದು.
HAPPY VALENTINS DAY

No comments:

Related Posts with Thumbnails