Wednesday, December 16, 2009
"ಮಹಂತೇಶ ಪಾನ ಶಾಪ"
"ತಂಬಾಕದ"
"ವಸ್ತ್ರದ"
"ಬೆಲ್ಲದ"
"ವಡವಡಗಿ"
"ಕಲ್ಕುರ್ಕಿ"
"ಉಪ್ಪಿನ"
"ಅಂಗಡಿ"
"ಗಲಗಲಿ"
"ಶೀಲವಂತರ"
"ಶೆಟ್ಟರ"
ಓದಿದ ತಕ್ಷಣ ತುಟಿಮೇಲೆ ಸಣ್ಣ ನಗೆ ಹುಟ್ಟಿಸುವ ಹೆಸರುಗಳು. "ಇದೇನ್ ಬಂತು ಸರಾ, ನಮ್ ಕಡಿ ಸರ್ ನೇಮ್ನಾಗೇ ಒಂದು ಸೆಂಟೆನ್ಸಾ ಫಾರ್ಮ್ ಮಾಡ್ಬೌದು ನೋಡ್ರಿ", ಅಂತಂದ್ರು ನನ್ನ ಜೊತೆ ಇದ್ದ "ಬಳ್ಳಿ" ಸರ.
ಬಾಗಲ್ಕೋಟೆ ಗೆ ಹೋಗಿದ್ದೆ. ಆ ಕಡೆ ಊರುಗಳು ನನ್ನನ್ನ ಯಾವುದಾದರೂ ಒಂದು ಸರ್ಪ್ರೈಝ್ ಗೆ ನೂಕದೇ ಇರೋದೇ ಇಲ್ಲ. ಮೊದಲೆಲ್ಲ, ನೀರೇ ಇಲ್ಲದ ಬೆಂಗಾಡು ಅಂತ ನನ್ನ ಮನಸ್ಸಿನಲ್ಲಿ ನಿಂತಿತ್ತು ಉತ್ತರಕರ್ನಾಟಕ.
ಯಾವಾಗ ಅಲ್ಲಿಗೆ ಹೋಗಿ ಬರಲು ಶುರು ಮಾಡಿದೆ ನೋಡಿ, ಆಗ ಗೊತ್ತಾಯಿತು ಅಲ್ಲಿಯ ಜನರ ಎದೆಯಲ್ಲಿ ಪ್ರೀತಿ,ಮಮತೆ,ಮಾನವೀಯತೆ,ಸರಳತೆಯ ಚಿಲುಮೆಯೇ ಹರಿಯುತ್ತಿದೆ ಅಂತ.
ಬಾಗಲ ಕೋಟೆ ಎಷ್ಟು ಅಬಿವ್ರ್ಯುದ್ದಿ ಹೊಂದಿದೆ ಅಂದರೆ, ಕರ್ನಾಟಕ ಈ ತುದಿ ಇಷ್ಟು ಬೆಳೆದಿದೆಯಲ್ಲಾ ಅಂತ ಮೂಗಿನ ಮೇಲೆ ಕೈ ಹೋಗುತ್ತದೆ.
ಜನರೂ ಅಷ್ಟೆ, ಪಾನ್ ತಿಂದು ಕೆಂಪಾದ ಹಲ್ಲುಗಳನ್ನ ಅಷ್ಟಗಲ ಮಾಡಿ "ಏನ್ರಿ ಸರಾ? ಬೆಂಗಳೂರೇನು?" ಅಂದು ಹತ್ತಿರಾಗುತ್ತಾರೆ. ನಂತರ ಮಾತಿನ ಪ್ರವಾಹ. ಅವರಾಡುವ ಕನ್ನಡಕ್ಕೆ ಒಂದು ಲಯ ಇದೆ. ಒಪ್ಪವಾದ ಏರಿಳಿತ ಇದೆ. ಮರಾಠಿಯ ಗಂಧವಿದೆ. ಎಲ್ಲಕ್ಕೊ ಮೀರಿ ಎದೆಯಲ್ಲಿರುವುದನ್ನು ಹಾಗೇಯೇ ತುಟಿಮೇಲೆ ತರುವ ಮಾಯೆ ಇದೆ.
"ಮಹಂತೇಶ ಪಾನ ಶಾಪ" "ಪಾಪ್ಯುಲರ ಪಾಯಿಪ ಫ್ಯಾಕ್ಟರಿ" ಇಂತ ಬೋರ್ಡುಗಳೆನ್ನೆಲ್ಲ ಓದುವಾಗ ನನ್ನ ಅಸಿಸ್ಟೆಂಟು ನಕ್ಕು "ನೋಡಿ ಸಾರ್ ಹೆಂಗಿದೆ, ಪಾನ "ಶಾಪ" ಅಂತ ಬರೆದಿದ್ರು, ತಂಬಾಕು ಸಿಕ್ಕಾ ಪಟ್ಟೇ ತಿಂತಾರೆ" ಅಂತ ಜೋಕು ಮಾಡ್ತಿದ್ದ. ಯಾವುದೇ ಎರಡು ಗೋಡೆ ಸೇರುವಲ್ಲಿ ಕೆಂಪು ಕಲೆಯ ರಾಡಿ. ಇಡೀ ಊರೇ ಇದರ ಶಿಕಾರು. ಈ ಒಂದು ಅಸಹ್ಯ ಬಿಟ್ಟರೆ, ಮಿಕ್ಕೆಲ್ಲ ಒಂದು ಅದ್ಭುತ ಅನುಭವ.
ನಾನು ಬಹಳ ಸವಿದಿದ್ದು "ಖಾನಾವಳಿ" ಯ ಊಟ. ಬಿಸಿ ಬಿಸಿ ಜೋಳದ ರೊಟ್ಟಿ, ತರಹೇವಾರಿ ಪಲ್ಯ, ಉಳ್ಳಾಗಡ್ಡಿ, ವಹ್...ಬೊಂಬಾಟ್ ರಿ ಸರ.
ಮೊನ್ನೆ ಬ್ಯಾಂಕಾಕ್ ನ ಪಟ್ಟಾಯದಲ್ಲಿರಿವ ನನ್ನ ಸ್ನೇಹಿತೆ ಒಬ್ಬಳು "ಇಲ್ಲಿಗೊಮ್ಮೆ ಬಂದು ಹೋಗು" ಅಂತ ಕರೆದಳು. ನಮ್ಮ ದೇಶದಲ್ಲೇ, ದೇಶ ಬಿಡಿ ರಾಜ್ಯದಲ್ಲೆ, ರಾತ್ರಿ ಬಸ್ಸು ಹತ್ತಿ ಬೆಳಿಗ್ಗೆ ಇಳಿದಾಗ ತೆರೆದು ಕೊಳ್ಳುವ ಎಷ್ಟೋ ಹೊಸಲೋಕಗಳನ್ನು ಇನ್ನೂ ನೋಡೇ ಇಲ್ಲ..ಎಲ್ಲಾ ನೋಡಿ ಬರೇನೆ ತಾಳು ಅಂದೆ. :)
Subscribe to:
Post Comments (Atom)
4 comments:
ಸರಿಯಾಗಿ ಹೇಳಿದ್ರಿ ಸರ
ಬಾಳ್ ಚ೦ದ್ ಐತ್ರಿ ನಿಮ್ ಲೇಖ್ನಾ.
ನಗುದ್ಯಾಕ್ರಿ ಸರ... ನಾನು ಶೆಟ್ಟರ ಮತ್ತ ಖುದ್ದ ಬಾಗಲಕೋಟ್ಯಾಂವದಿನಿ.
ಇನ್ನೊಮ್ಮೆ ನಮ್ಮ ಊರ ಕಡೆ ಬಂದಾಗ ತಿಳಸ್ರಿ..
-ಶೆಟ್ಟರು
ಶೆಟ್ಟರ್ ಸಾರ್..ಇದು ಸಾಂಸ್ಕೃತಿಕ ವ್ಯೆತ್ಯಾಸಗಳಿಂದ ಉದ್ಭವವಾಗುವ ಶುದ್ದ ಸಾತ್ವೀಕ,ಯಾವುದೆ ಕುಹುಕ ವಿಲ್ಲದ ನಗು.
ನಿಮ್ಮ ಬಾಗಲಕೋಟೆ ಇಂಜೆನಿಯರಿಂಗ್ ಕಾಲೇಜ್ ಶೂಟಿಂಗ್ ಬಂದಿದ್ದಾಗ ಅನ್ನಿಸಿದ್ದು.
ನಿಮ್ಮನ್ನ ಇ-ಭೇಟಿಯಾಗಿದ್ದು ಸಂತೋಷವಾಯಿತು..ಆಗಾಗ ಬನ್ನಿ.
Post a Comment