"ಅವರ ಯಾವುದಾದ್ರು ಆಸೆ ನೆರೆವೇರಿಲ್ಲ ಅಂದ್ರೆ ಹೀಗೆ, ಬೇಗ ಬರಲ್ಲ. ನೀವು ಮನಸ್ಸಿನಲ್ಲೇ ಪ್ರಾರ್ಥಿಸಿ ಕೊಳ್ಳಿ ಬರಬಹುದು"
ಮಟ ಮಟ ಮದ್ಯಾನಃ ದಲ್ಲಿ ಗೋಕರ್ಣದ ಸಮುದ್ರದ ತೀರದಲ್ಲಿ,ಬಿಸಿಲಿನಲ್ಲಿ ಬೆವರಿಗೆ ತೆಳ್ಳಗಾಗಿ ಕರಗುತಿದ್ದ ವಿಭೂತಿಯನ್ನ ಧೋತರದ ಚುಂಗಿನಲ್ಲಿ ವರೆಸಿಕೊಂಡು, ಹಸಿದ ಹೊಟ್ಟೆಗೆ ಸಮಾಧಾನವೇನೋ ಎಂಬಂತೆ ನನಗೆ ಹೇಳಿದರು ಪುರೋಹಿತರು.
ಅಪ್ಪ ಸತ್ತ ನಂತರ ತರ್ಪಣ ಬಿಡಕ್ಕೆ ಗೋಕರ್ಣಕ್ಕೆ ಹೋಗಿದ್ದ ನಾನು, ಮುಂದಿದ್ದ ಎಲೆ, ಅದರ ತುಂಬಾ ಇದ್ದ ಎಡೆ ಪದಾರ್ಥಗಳನ್ನು ನೋಡಿ ಸ್ವಲ್ಪ ಅಪ್ಪನ ಮೇಲೆ ಕೋಪ ಮಾಡಿಕೊಂಡು, ಹಣೆಗೆ ಕೈ ಅಡ್ಡ ಹಿಡಿದು ದೂರದಲ್ಲಿ ಸುತ್ತುತಿದ್ದ ಎರಡು ಮೂರು ಕಾಗೆಗಳತ್ತ ನೋಡುತಿದ್ದೆ.
ಮೊನ್ನೆ ಈ ಪ್ರಸಂಗ ನೆನಪಾಯಿತು. ಹೈದರಾಬಾದಿನಲ್ಲಿ ಯಾವುದೋ ಕೆಲಸಕ್ಕೆ ಹೋಗಿದ್ದ ನಾನು ವಾಪಸ್ಸು ಹೊರಟಾಗ ವಿಮಾನ ಬರಲೇಇಲ್ಲ. ಸುಮಾರು ಮೂರು ನಾಲ್ಕು ಘಂಟೆ, ಎಲ್ಲಿಂದಲೋ ಹಾರಿಬರಬಹುದಾದ ತಗಡಿನ ಹಕ್ಕಿಗೆ, ಆಕಾಶ ನೋಡುತ್ತ ಕಾಯುವ ಪ್ರಸಂಗ. ಅವತ್ತೇ ಕಲಕತ್ತೆಯಲ್ಲಿ ಚಂಡಮಾರುತ ಅಂತೆ, ಅಲ್ಲಿಂದ ಬರಬೇಕಾಗಿದ್ದ ನಮ್ಮ ವಿಮಾನ ಕೆಳಗಿಳಿಯಲೇ ಇಲ್ಲ.
ತಣ್ಣಗೆ ಕೊರೆಯುತಿದ್ದ, ಜೀವ ಹೀನ ಏರ್ಪೊರ್ಟು. ತಮ್ಮೆಲ್ಲಾ ಸಮಾನುಗಳಿಗೆ ಗಾಲಿ ಚಕ್ರ ಹಾಕಿ, ದರ ದರ ಎಳೆಯುತ್ತಾ, ಕತ್ತು ಆ ಕಡೆ ಈ ಕಡೆ ತಿರಿಗಿಸುತ್ತಾ ಅದೇ ಸಮಯದಲ್ಲಿ ಮೊಬೈಲ್ ನಲ್ಲಿ ಜೋರಾಗಿ ಮಾತಾಡುತ್ತ ಎಲ್ಲೊ ನಡೆದು ಹೋಗುತ್ತ ಸಣ್ಣಗಾಗುವ ಮಂದಿ. ತಲೆ ಕೆಳಗೆ ಹಾಕಿ ಕಣ್ಣಂಚನ್ನು ಕಾಡಿಗೆ ಅಳಿಸದೇ ಹೋಗುವಷ್ಟು ನಾಜೂಕಾಗಿ ಚಂದದ ಉಂಗುರ ತೊಟ್ಟ ತುದಿ ಬೆರಳಿನಿಂದ ವರೆಸಿಕೊಂಡು ಬಿಕ್ಕುವ ಸೊಫಿಸ್ಟಿಕೇಟಡ್ ಹುಡುಗಿ. ಯಾವುದೋ ಜಾಹೀರಾತನ್ನು ಒಮ್ಮೆ ಮೇಲೆ ಒಮ್ಮೆ ಕೆಳಕ್ಕೆ ತಳ್ಳುವ ಜಾಹೀರಾತು ಫಲಕ. ಕಂಡ ಕಂಡ ಚಂದದ ಅಂಗಡಿಗಳಿಗೆ ನುಗ್ಗಿ, ಕೈಗೆ ಸಿಕ್ಕಿದ್ದನ್ನು ಹೆಕ್ಕುತಿದ್ದ ಮಕ್ಕಳನ್ನು ಹಿಡಿದಿಡುತಿದ್ದ ತಾಯಿ. ಹೀಗೆ ನೊಡಲಿಕ್ಕೆ ಒಂದಷ್ಟು ವಿಷಯಗಳ ಮದ್ಯೆ ಒಬ್ಬನೇ ಕಾಯುತಿದ್ದೆ. ಅಂದು ಸಮುದ್ರದ ತಡಿಯಲ್ಲಿ ಬರದೇ ಇದ್ದ ಕಾಗೆಯ ನೆನಪಾಯಿತು.
ಮುಂದೆ ಬಹಳ ಹೊತ್ತಿನ ನಂತರ ಬಂದ ತಗಡಿನ ಹಕ್ಕಿ, ನನ್ನನ್ನು ಬೆಂಗಳೂರಿಗೆ ಬಂದು ಮುಟ್ಟಿಸಿದಾಗ ರಾತ್ರಿ ಒಂದರ ಹತ್ತಿರ ಹತ್ತಿರ. ಮಲಗಲಿಕ್ಕೆಂದು ಕಪ್ಪು ಹಾಸಿಗೆಯೊಂದನ್ನು ಯಾರೊ ಹಾಸಿ, ಮಲಗದೇ ಹಾಗೆ ಓಡಾಡಿ ಕೊಂಡಿದ್ದಂತೆ ಇತ್ತು ಬೆಂಗಳೂರು..ಇದಕ್ಕಂತೂ ಆಯಾಸವೇ ಆಗುವುದಿಲ್ಲವೇನೋ, ಹಾಳಾದ್ದು ಅನ್ನಿಸಿತು.
No comments:
Post a Comment